ಆಝಾನ್‌ಗೆ ಪ್ರತಿಯಾಗಿ ಧ್ವನಿವರ್ಧಕಗಳಲ್ಲಿ ಸಂಗೀತ ಇಡುವುದಾಗಿ ಬಲಪಂಥೀಯರ ಬೆದರಿಕೆ: ವಿಡಿಯೋ ವೈರಲ್‌

Update: 2022-02-14 17:39 GMT

ರತ್ಲಾಮ್: ಮಸೀದಿಯಲ್ಲಿ ಆಝಾನ್‌ ಕರೆಯಬಾರದು ಎಂದು ಒತ್ತಾಯಿಸುವ ಗುಂಪೊಂದು, ʼಯಾವಾಗೆಲ್ಲಾ ಆಝಾನ್‌ ಕರೆಯುತ್ತಾರೆ, ಆವಾಗೆಲ್ಲಾ ನಾವು ದೊಡ್ಡ ಶಬ್ಧದಲ್ಲಿ ಸಂಗೀತ ಇಡುತ್ತೇವೆʼ ಎಂದು ಬೆದರಿಸುವ ವಿಡಿಯೋ ವೈರಲ್‌ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋವನ್ನು ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯ ರಾವತಿಯಲ್ಲಿರುವ ಮಸೀದಿ ಎದುರಲ್ಲಿ ಜನವರಿ 31 ರಂದು ಚಿತ್ರೀಕರಿಸಲಾಗಿದೆ ಎಂದು thewire.in ವರದಿ ಮಾಡಿದೆ.

 


ವೈರಲ್‌ ಆಗಿರುವ ವಿಡಿಯೋದಲ್ಲಿ, ಮಸೀದಿ ಎದುರು ಹೊಸದಾಗಿ ನಿರ್ಮಾಣ ಆಗಿರುವ ಕಟ್ಟಡವನ್ನು ತೋರಿಸುತ್ತಾ ಮಾತನಾಡುವ ಯುವಕನೊಬ್ಬ, ʼಅಲ್ಲಿ ಆಝಾನ್‌ಗೆ ಪ್ರತಿಯಾಗಿ, ಜೋರಾದ ಸಂಗೀತ ಇಡಲು ಸ್ಪೀಕರ್‌ ಕಟ್ಟಲಾಗಿದೆ. ಯಾವಾಗೆಲ್ಲಾ ಆಝಾನ್‌ ಕರೆಯಲಾಗುತ್ತೋ, ಪ್ರತಿಯಾಗಿ ನಾವು ಜೋರು ದನಿಯಲ್ಲಿ ಸಂಗೀತ ಬಾರಿಸುತ್ತೇವೆʼ ಎಂದು ಹೇಳುತ್ತಿರುವುದು ನೋಡಬಹುದು.
 
ಆರ್‌ಎಸ್‌ಎಸ್‌ ಅಂಗ ಸಂಸ್ಥೆಯಾದ ಹಿಂದೂ ಜಾಗರಣ ಮಂಚ್‌ ಕಾರ್ಯಕರ್ತರು ರಾವತಿ ಪೊಲೀಸ್‌ ಠಾಣೆಗೆ ಧ್ವನಿವರ್ಧಕಗಳಲ್ಲಿ ಆಝಾನ್‌ ನಿಷೇಧಿಸುವಂತೆ ಆಗ್ರಹಿಸಿ ನೀಡಿದ ಮನವಿ ಪತ್ರ ನೀಡಿದ ಎರಡೇ ದಿನದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. 

ರಾತ್ರೋರಾತ್ರಿ ವಿಡಿಯೋ ವೈರಲ್ ಆಗಿದ್ದು, ಮರುದಿನವೇ ರತ್ಲಂ ಪೊಲೀಸರು ಗ್ರಾಮಕ್ಕೆ ಧಾವಿಸಿ ಮಸೀದಿಯ ಮೇಲೆ ಅಳವಡಿಸಲಾದ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲು ಮುಸ್ಲಿಮರಲ್ಲಿ ಕೇಳಿದ್ದಾರೆ. ಇದೇ ವೇಳೆ ಮಸೀದಿ ಎದುರಿನ ಕಟ್ಟಡದ ಮೇಲೆ ಹಿಂದುತ್ವವಾದಿ ಯುವಕರು ಹಾಕಿದ್ದ ಧ್ವನಿವರ್ಧಕವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
 
“ನಾವು ಗ್ರಾಮಸ್ಥರೊಂದಿಗೆ ಮಾತನಾಡಿದ್ದೇವೆ. ಶಾಂತಿಯನ್ನು ಕಾಪಾಡುವಂತೆ ಎರಡೂ ಸಮುದಾಯಗಳನ್ನು ಒತ್ತಾಯಿಸಿದ್ದೇವೆ. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ ಎಂದು ರಾವತಿ ಪೊಲೀಸ್ ಠಾಣೆಯ ಪಟ್ಟಣ ನಿರೀಕ್ಷಕ ರಾಮ್ ಸಿಂಗ್ ದಿ ವೈರ್‌ಗೆ ತಿಳಿಸಿದ್ದಾರೆ. ಅದಾಗ್ಯೂ, ವಿವಾದಾತ್ಮಕ ವೀಡಿಯೊ ಮಾಡಿದ ಯುವಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, ರಾಷ್ಟ್ರೀಯ ಜಾಗರಣ್‌ ಮಂಚ್‌ ಕಾರ್ಯಕರ್ತರು ಆಝಾನ್‌ ನಿಷೇಧಕ್ಕೆ ಆಗ್ರಹಿಸಿ ರಾವತಿ ಠಾಣೆಗೆ ಮಾತ್ರ ಮನವಿ ಪತ್ರ ನೀಡಿರುವುದಲ್ಲ. ಜನವರಿ 29 ರಿಂದ ಫೆಬ್ರವರಿ 2ರ ಒಳಗೆ ಮಧ್ಯಪ್ರದೇಶದ 15 ಜಿಲ್ಲೆಗಳ 310 ಪೊಲೀಸ್‌ ಠಾಣೆಗಳಿಗೆ ಮನವಿ ಪತ್ರ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News