23,000 ಕೋಟಿ ರೂ. ವಂಚನೆ ಪ್ರಕರಣ: ಗುಜರಾತ್ ಮೂಲದ ಹಡಗು ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಲುಕ್‌ಔಟ್ ನೋಟಿಸ್
ಅಹಮದಾಬಾದ್: ರೂ. 23,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್‌ಯಾರ್ಡ್‌ನ ಮೇಲಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ಗಳನ್ನು ಹೊರಡಿಸಲಾಗಿದ್ದು, ಏರ್ಪೋರ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶಿಪ್ಪಿಂಗ್ ಸಂಸ್ಥೆಯ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ಅವರಿಗೆ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು NDTV ವರದಿ ಮಾಡಿದೆ.
ಗುಜರಾತ್ ಮೂಲದ ಹಡಗು ನಿರ್ಮಾಣ ಕಂಪೆನಿ ABG Shipyard Ltd (ABGSL) ಹಾಗೂ ಅದರ ನಿರ್ದೇಶಕರ ವಿರುದ್ಧ 22,842 ಕೋಟಿ ರೂ. ಸಾಲ ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಸಿಬಿಐ ತನಿಖೆ ನಡೆಸುತ್ತಿರುವ ಅತಿ ದೊಡ್ಡ ಸಾಲ ವಂಚನೆ ಪ್ರಕರಣ ಇದಾಗಿದೆ.
ABG ಶಿಪ್‌ಯಾರ್ಡ್ ಸಿಂಗಾಪುರದಲ್ಲಿ ತನ್ನ ಅಂಗಸಂಸ್ಥೆಗಳ ಮೂಲಕ 2012 ಮತ್ತು 2017 ರ ನಡುವೆ ವಿವಿಧ ವಿಧಾನಗಳ ಮೂಲಕ ಸಾಲದ ಹಣವನ್ನು ಬೇರೆಡೆಗೆ ತಿರುಗಿಸಿದೆ ಎಂದು ಆರೋಪಿಸಲಾಗಿದೆ. ಜುಲೈ 2016 ರಲ್ಲಿ ಸಾಲವನ್ನು NPA ಎಂದು ಘೋಷಿಸಲಾಗಿದ್ದು, ಕಂಪನಿಯು ಈಗಾಗಲೇ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ವಿಚಾರಣೆಯನ್ನು ಎದುರಿಸುತ್ತಿದೆ.
ಎಬಿಜಿ ಶಿಪ್‌ಯಾರ್ಡ್ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿದೆ. ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಹಡಗುಕಟ್ಟೆಗಳಿವೆ.
ಸಾಲ ನೀಡಿದ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2019 ರಂದು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.