ರಾಜತಾಂತ್ರಿಕ ಉಪಕ್ರಮದ ಆಯ್ಕೆ ಇನ್ನೂ ಇದೆ: ರಶ್ಯಾಕ್ಕೆ ಅಮೆರಿಕ ಎಚ್ಚರಿಕೆ
ಅಮೆರಿಕ :ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮತ್ತೊಮ್ಮೆ ರಶ್ಯಾಕ್ಕೆ ಎಚ್ಚರಿಕೆ ನೀಡಿರುವ ಅಮೆರಿಕ, ರಶ್ಯಾ ರಚನಾತ್ಮಕ ರೀತಿಯಲ್ಲಿ ನಡೆದುಕೊಂಡರೆ ರಾಜತಾಂತ್ರಿಕ ಮಾರ್ಗದ ಬಾಗಿಲು ಇನ್ನೂ ಮುಕ್ತವಾಗಿದೆ ಎಂದು ಹೇಳಿದೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಶ್ವೇತಭವನದ ಪ್ರಧಾನ ಉಪಕಾರ್ಯದರ್ಶಿ ಕರೈನ್ ಜೀನ್ ಪಿಯರೆ, ಬಿಕ್ಕಟ್ಟು ಉಪಶಮನಕ್ಕೆ ರಾಜತಾಂತ್ರಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಅಮೆರಿಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ವಾರಾಂತ್ಯ ಅಧ್ಯಕ್ಷರು(ಬೈಡನ್) ರಶ್ಯಾದ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ನಮ್ಮೆಲ್ಲಾ ಮಿತ್ರರು ಮತ್ತು ಪಾಲುದಾರರೊಂದಿಗೆ ಸಂಪೂರ್ಣ ಸಮನ್ವಯದೊಂದಿಗೆ ರಶ್ಯಾ ಸರಕಾರದ ಜತೆ ಸಮಾಲೋಚನೆಯಲ್ಲಿ ನಿರತವಾಗಿದ್ದೇವೆ. ಆದರೆ ರಶ್ಯಾದ ಪ್ರತಿಕ್ರಿಯೆ ಹಾಗೂ ಉಪಕ್ರಮಗಳ ಬಗ್ಗೆಯೂ ಎಚ್ಚರಿಕೆಯಿಂದ ಗಮನ ಹರಿಸುತ್ತಿದ್ದೇವೆ ಎಂದರು.
ಯಾವುದೇ ಸಂದರ್ಭದಲ್ಲಿ ರಶ್ಯಾದ ಆಕ್ರಮಣ ಆರಂಭವಾಗಬಹುದು ಎಂದು ಗುಪ್ತಚರ ವರದಿ ಲಭಿಸಿದೆ. ಯಾವ ರೀತಿಯ ಆಕ್ರಮಣವನ್ನು ರಶ್ಯಾ ನೆಚ್ಚಿಕೊಳ್ಳಬಹುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅಮೆರಿಕ ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ. ಆಕ್ರಮಣ ನಡೆದರೆ, ನಮ್ಮ ಎಲ್ಲಾ ಮಿತ್ರರೊಂದಿಗೆ ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸಿ ರಶ್ಯಾದ ವಿರುದ್ಧ ತ್ವರಿತ ಮತ್ತು ತೀವ್ರ ನಿರ್ಬಂಧ ಜಾರಿಗೆ ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.
ಪ್ರತ್ಯೇಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ, ರಕ್ಷಣಾ ಕಾರ್ಯದರ್ಶಿ ಲಾಯ್ಡಾ ಆಸ್ಟಿನ್ ಬೆಲ್ಜಿಯಂ, ಪೋಲಂಡ್ ಮತ್ತು ಲಿಥುವೇನಿಯಾಕ್ಕೆ ಭೇಟಿ ನೀಡಿ, ಉಕ್ರೇನ್ ಗಡಿಭಾಗದಲ್ಲಿ ರಶ್ಯಾದ ಸೇನಾ ಜಮಾವಣೆಯ ಬಗ್ಗೆ ಅಲ್ಲಿನ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ.