×
Ad

ದುಶ್ಶಾಸನರ ಕೈಯಲ್ಲಿ ಸಮಾಜ!

Update: 2022-02-16 00:05 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೆಂಗಳೂರಿನಲ್ಲಿ ಒಮ್ಮೆ ಬೀದಿನಾಯಿಗಳ ಸಮಸ್ಯೆ ವಿಪರೀತ ಮಟ್ಟಕ್ಕೆ ತಲುಪಿತ್ತು. ಸಣ್ಣ ಪುಟ್ಟ ಕಂದಮ್ಮಗಳು ರಸ್ತೆಯಲ್ಲಿ ಕಾಣಿಸಿಕೊಂಡರೆ ಸಾಕು, ಎಲ್ಲ ಬೀದಿನಾಯಿಗಳು ಹಿಂಬಾಲಿಸಿ ಮುಗಿ ಬಿದ್ದು ಆ ಕಂದಮ್ಮನನ್ನು ಹರಿದು ಚಿಂದಿ ಮಾಡುತ್ತಿದ್ದವು. ಬಳಿಕ ಬಿಬಿಎಂಪಿ ಈ ಬೀದಿನಾಯಿಗಳ ನಿಯಂತ್ರಣಕ್ಕೆ ವಿಶೇಷ ಪಡೆಯೊಂದನ್ನು ರಚಿಸಿತ್ತು. ಇಂದು ಶಾಲೆಗಳಿಗೆ ತೆರಳುತ್ತಿರುವ ಕಂದಮ್ಮಗಳ ಬೆನ್ನು ಹತ್ತಿರುವ ಕೆಲವು ಮಾಧ್ಯಮ ಪ್ರತಿನಿಧಿಗಳ ಕೃತ್ಯಗಳನ್ನು ಗಮನಿಸುವಾಗ, ಆ ಬೀದಿನಾಯಿಗಳ ಕೃತ್ಯಗಳು ನೆನಪಿಗೆ ಬರುತ್ತವೆ. ಒಂದು ಪುಟ್ಟ ಕಂದಮ್ಮ ಶಾಲೆಗೆ ಸ್ಕಾರ್ಫ್ ಹಾಕಿ ನಡೆದುಕೊಂಡು ಹೋಗುತ್ತಿದೆ.ಅದನ್ನು ನೋಡಿದ್ದೇ ಒಬ್ಬ ಪತ್ರಕರ್ತ ಕ್ಯಾಮರಾ ಸಹಿತ ಆ ಮಗುವನ್ನು ಬೆನ್ನಟ್ಟುತ್ತಾನೆ. ಮಗು ಹೆದರಿ ಓಡುವುದಕ್ಕೆ ಪ್ರಯತ್ನಿಸುತ್ತದೆ ಮತ್ತು ಈ ಕೃತ್ಯವನ್ನು ಹೆಮ್ಮೆಯಿಂದ ಟಿವಿ ಚಾನಲ್ ಸಾರ್ವಜನಿಕರಿಗೆ ಪ್ರದರ್ಶಿಸುತ್ತದೆ. ಬೆಂಗಳೂರಿನಲ್ಲಿ ಮಕ್ಕಳ ಮೇಲೆ ಎರಗುತ್ತಿದ್ದ ಬೀದಿ ನಾಯಿಗಳಿಗೆ ಕಾನೂನು ಗೊತ್ತಿಲ್ಲ. ಸಂವಿಧಾನ ಗೊತ್ತಿಲ್ಲ. ಆದುದರಿಂದ ಅವುಗಳನ್ನು ಕ್ಷಮಿಸಬಹುದು. ಆದರೆ ಈ ಪತ್ರಕರ್ತ ಓದಿಕೊಂಡವನು. ನಾಡಿಗೆ ಸತ್ಯ ಸಂಗತಿಗಳನ್ನು ತಿಳಿಸಬೇಕಾದವನು. ಇಂತಹ ಪತ್ರಕರ್ತ ಒಂಟಿ ಶಾಲಾ ವಿದ್ಯಾರ್ಥಿನಿಯನ್ನು ಬೆಂಬತ್ತುತ್ತಾನೆ ಎಂದರೆ ಅದರ ಅರ್ಥವೇನು? ಈ ಸಂದರ್ಭದಲ್ಲಿ ಅದನ್ನು ತಡೆಯುವುದು ಶಿಕ್ಷಕರ, ಶಾಲಾ ಸಿಬ್ಬಂದಿಯ ಹೊಣೆಗಾರಿಕೆಯಾಗಿತ್ತು. ಆ ಮಗು ಹೆದರಿ ಓಡುವಾಗ ಎಲ್ಲರೂ ಮೂಕ ವೀಕ್ಷಕರಾದರು. ಮುಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಯಾವ ಧೈರ್ಯದ ಮೇಲೆ ಶಾಲೆಗಳಿಗೆ ಕಳುಹಿಸಿಕೊಡಬೇಕು?

ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು ಶಾಲೆಯ ಮೇಲಿನ ಭರವಸೆಯಿಂದ. ಅಲ್ಲಿ ಯಾರೋ ಹೊರಗಿನ ವ್ಯಕ್ತಿ ಪತ್ರಕರ್ತನೆಂದೋ, ರಾಜಕಾರಣಿಯೆಂದೋ ಬಂದು ಶಾಲಾ ಆವರಣದೊಳಗಿರುವ ವಿದ್ಯಾರ್ಥಿನಿಯನ್ನು ಬೆಂಬತ್ತುತ್ತಾರೆ ಎನ್ನುವುದು ಶಿಕ್ಷಣ ವ್ಯವಸ್ಥೆ ಯಾವ ಪಾತಾಳ ತಲುಪಿದೆ ಎನ್ನುವುದಕ್ಕೆ ಉದಾಹರಣೆ. ಇದು ಕೇವಲ ಒಂದು ಶಾಲೆಯಲ್ಲಿ ನಡೆದ ಘಟನೆಯಲ್ಲ. ಕಳೆದೆರಡು ದಿನಗಳಿಂದ ಪತ್ರಕರ್ತರ ವೇಷದಲ್ಲಿರುವ ಸಂಘಪರಿವಾರ ದುಶ್ಶಾಸನರು ಕ್ಯಾಮರಾಗಳನ್ನು ಹಿಡಿದು ಶಾಲೆಯ ಆವರಣಗಳನ್ನು ಗಬ್ಬೆಬ್ಬಿಸಿದ್ದಾರೆ. ಸ್ವತಃ ಗೂಂಡಾಗಳಂತೆ, ರೌಡಿಗಳಂತೆ ಶಾಲೆಗಳ ಮೇಲೆ ದಾಳಿ ನಡೆಸಿದ್ದಾರೆ. ಶಾಲೆಗಳ ಅನುಮತಿಯಿಲ್ಲದೆ ಆವರಣಕ್ಕೆ ನುಗ್ಗಿ ವಿದ್ಯಾರ್ಥಿನಿಗಳನ್ನು ಚಿತ್ರೀಕರಣ ಮಾಡುತ್ತಿದ್ದಾರೆ ಮತ್ತು ಅವುಗಳನ್ನು ಟಿವಿ ಚಾನಲ್‌ಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ನಿನ್ನೆ ಹಲವು ಶಾಲೆಗಳಿಗೆ ನುಗ್ಗಿ ಸ್ಕಾರ್ಫ್ ಧರಿಸಿದ್ದಾರೆಯೇ? ಇಲ್ಲವೇ? ಎನ್ನುವುದನ್ನು ಪರಿಶೀಲಿಸುವ ಕೆಲಸ ಮಾಡಿದ್ದಾರೆ. ‘ಸಮವಸ್ತ್ರ ಸಂಹಿತೆಯೇ ಇಲ್ಲದ’ ಶಾಲೆಗಳಿಗೂ ಹೋಗಿ ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಿ, ಸ್ಕಾರ್ಫ್ ತೆಗೆಯಲು ಪತ್ರಕರ್ತರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕವಾಗಿ ರಸ್ತೆಯಲ್ಲಿ ಶಿಕ್ಷಕಿಯರ, ಮಕ್ಕಳ ಹಿಜಾಬ್‌ಗಳನ್ನು ಕಳಚಲಾಗಿದೆ ಮತ್ತು ಇದನ್ನು ಟಿವಿ ಪತ್ರಕರ್ತರು ಚಿತ್ರೀಕರಣ ಮಾಡಿ ಪ್ರಸಾರ ಮಾಡಿದ್ದಾರೆ.

ರಾಜ್ಯದ ಶಾಲೆಗಳು ಪತ್ರಕರ್ತರ ವೇಷದಲ್ಲಿರುವ ಈ ದುಶ್ಶಾಸನರ ದಾಳಿಗೆ ನಲುಗಿ ಹೋಗಿವೆ. ವಿಪರ್ಯಾಸವೆಂದರೆ, ಇದು ಪತ್ರಕರ್ತರು ಸ್ವಯಂ ಪ್ರೇರಣೆಯಿಂದ ಮಾಡುತ್ತಿರುವುದಲ್ಲ, ಅವರು ರಾಜಕಾರಣಿಗಳ ದಾಳಗಳಾಗಿ ಕೆಲಸ ಮಾಡುತ್ತಿರುವುದು ಎನ್ನುವುದನ್ನು ಬಿಜೆಪಿಯ ಮುಖಂಡರೇ ಬಹಿರಂಗಪಡಿಸಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಟ್ವಿಟರ್‌ನಲ್ಲಿ ಸ್ಕಾರ್ಫ್ ಪರವಾಗಿ ನ್ಯಾಯಾಲಯಕ್ಕೆ ಹೋದ ಐವರು ವಿದ್ಯಾರ್ಥಿನಿಯರ ಸಂಪೂರ್ಣ ವಿಳಾಸವನ್ನು ಟ್ವೀಟ್ ಮಾಡಿದ್ದಾರೆ. ಅವರೆಲ್ಲರೂ ಅಪ್ರಾಪ್ತ ವಯಸ್ಸಿನ ಬಾಲಕಿಯರು. ಸಾರ್ವಜನಿಕರಿಂದ ಉಗಿಸಿಕೊಂಡ ಬಳಿಕ ಸಂಸದ ಕಟೀಲ್ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅದಾಗಲೇ ದೊಡ್ಡ ಸಂಖ್ಯೆಯಲ್ಲಿ ಅದರ ಸ್ಕ್ರೀನ್ ಶಾಟ್‌ಗಳನ್ನು ದುಷ್ಕರ್ಮಿಗಳು ಹಂಚಿಕೊಂಡಿದ್ದಾರೆ. ಈ ಟ್ವೀಟ್‌ನ ಉದ್ದೇಶವೇನು? ವಿದ್ಯಾರ್ಥಿನಿಯರ ಮನೆಯ ವಿಳಾಸವನ್ನು ಯಾವ ಕಾರಣಕ್ಕೆ, ಯಾರಿಗಾಗಿ ಸಾರ್ವಜನಿಕಗೊಳಿಸಿದರು. ನೇರವಾಗಿ ‘ಈ ವಿಳಾಸಕ್ಕೆ ಹೋಗಿ ದಾಂಧಲೆ ಮಾಡಿ’ ಎಂದು ಅವರು ಈ ಮೂಲಕ ತಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ಈ ರಾಜ್ಯದ ಶಾಂತಿ ಯಾರಿಂದ ಕೆಡುತ್ತಿದೆ ಎನ್ನುವುದಕ್ಕೆ ಇನ್ನೂ ಪ್ರತ್ಯೇಕ ತನಿಖೆಯ ಅಗತ್ಯವಿದೆಯೇ? ರಾಜ್ಯ ಇಲ್ಲಿಯವರೆಗೆ ಬಿಜೆಪಿಯ ಮುಖಂಡರ ನಗ್ನ ಅಶ್ಲೀಲ ಸೀಡಿಗಳ ಕಾರಣಕ್ಕಾಗಿ ಸುದ್ದಿಯಲ್ಲಿತ್ತು. ಇದೀಗ ಸೀಡಿಯೊಳಗಿಂದ ನೇರವಾಗಿ ಬೆತ್ತಲೆಯಾಗಿ ಬೀದಿಯಲ್ಲಿ ನಿಂತಿದ್ದಾರೆ ಮತ್ತು ಈ ರಾಜ್ಯದ ಭವಿಷ್ಯವಾಗಿರುವ ವಿದ್ಯಾರ್ಥಿನಿಯರ ಸೆರಗಿಗೆ ಕೈ ಹಾಕಲು ಮುಂದಾಗಿದ್ದಾರೆ.

ಮಹಾಭಾರತ ಕಾವ್ಯದ ದುರಂತ ಅಧ್ಯಾಯಗಳು ಆರಂಭವಾದದ್ದೇ ದುಶ್ಶಾಸನನಿಂದ. ಆತ ಹೆಣ್ಣಿನ ಘನತೆ, ಗೌರವವನ್ನು ಮರೆತು ಆಕೆಯ ಸೆರಗಿಗೆ ಕೈ ಹಾಕುವ ಪ್ರಯತ್ನ ನಡೆಸಿದ. ಆದರೆ ಕೃಷ್ಣ ಅದನ್ನು ವಿಫಲಗೊಳಿಸಿದ. ವರ್ತಮಾನದಲ್ಲಿ ಅದಕ್ಕಿಂತ ಭಿನ್ನವಾದದ್ದು ನಡೆಯುತ್ತಿಲ್ಲ. ದುಶ್ಶಾಸನರ ಮುಖಗಳು ಒಂದೊಂದಾಗಿ ಬೀದಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ ಮತ್ತು ಈ ದೇಶದ ಸಜ್ಜನರು, ಚಿಂತಕರು, ಹಿರಿಯರು, ಭೀಷ್ಮಾದಿಗಳಂತೆ ವೌನ ವೀಕ್ಷಕರಾದರೆ ಇಡೀ ದೇಶ ನೈತಿಕವಾಗಿ ಮಾತ್ರವಲ್ಲ ಎಲ್ಲ ವಲಯಗಳಲ್ಲೂ ಸರ್ವನಾಶವಾಗಹುದು. ನಮ್ಮ ಹಿರಿಯರು ನಮ್ಮ ಕೈಗೆ ಒಂದು ಸುಂದರ ಭಾರತವನ್ನು ಕೊಟ್ಟು ಹೊರಟು ಹೋಗಿದ್ದಾರೆ. ಅದನ್ನು ಅಷ್ಟೇ ಜೋಪಾನವಾಗಿ ನಮ್ಮ ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಆದುದರಿಂದ ಭಾರತವನ್ನು ದುಶ್ಶಾಸನರ ಕೈಯಿಂದ ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ವೌನ ಮುರಿಯಲೇ ಬೇಕಾದಂತಹ ಸಮಯ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News