ದ.ಕ. ಜಿಲ್ಲೆಯ ಎರಡು ಕಾಲೇಜುಗಳ 28 ವಿದ್ಯಾರ್ಥಿಗಳು ಮನೆಗೆ ವಾಪಸ್
ಮಂಗಳೂರು, ಫೆ. 16: ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಬಂದ್ ಆಗಿದ್ದ ಪದವಿ ಪೂರ್ವ, ಪದವಿ ಕಾಲೇಜುಗಳು ಇಂದು ಆರಂಭಗೊಂಡಿದ್ದು, ದ.ಕ. ಜಿಲ್ಲೆಯಲ್ಲೂ ಶಾಂತಿಯುತವಾಗಿ ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿದ್ದಾರೆ.
ದ.ಕ. ಜಿಲ್ಲೆಯ ಆರು ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿರುವ ಪ್ರಕರಣ ನಡೆದಿದ್ದು, ಕಾಲೇಜು ಆಡಳಿತ ಮಂಡಳಿ ಶಾಂತಿಯುತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಕ್ರಮ ವಹಿಸಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ನಗರದ ದಯಾನಂದ ಪೈ ಪದವಿ ಕಾಲೇಜಿನ ಇಬ್ಬರು ಹಾಗೂ ಮುಲ್ಕಿ ಪಾಂಪೈ ಪದವಿ ಕಾಲೇಜಿನ 26 ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವವರೆಗೆ ತರಗತಿಗೆ ಹಾಜರಾಗದಿರಲು ನಿರ್ಧರಿಸಿ ವಾಪಸ್ ಹೋಗಿದ್ದಾರೆ. ಉಳಿದಂತೆ ಮುಡಿಪು ಪದವಿ ಕಾಲೇಜಿನ 22 ವಿದ್ಯಾರ್ಥಿನಿಯರು, ಮೊಂಟೆಪದವು ಕಾಲೇಜಿನ 11 ಮಂದಿ, ಮುಲ್ಕಿ ಇಂದಿರಾ ನಗರ ಪದವಿ ಕಾಲೇಜಿನ 15 ಮಂದಿ, ಮೂಡುಬಿದಿರೆ ಮಹಾವೀರ ಕಾಲೇಜಿನ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು ಅವರನ್ನು ಪ್ರಾಂಶುಪಾಲರ ಕಚೇರಿಗೆ ಕರೆಸಿಕೊಂಡು ನ್ಯಾಯಾಲಯದ ಸೂಚನೆಯನ್ನು ತಿಳಿಸಿ, ಆದೇಶವನ್ನು ಪಾಲಿಸುವಂತೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ವ್ಯವಸ್ಥಿತವಾಗಿ ಗೊಂದಲ ಉಂಟಾಗದಂತೆ ಕ್ರಮ ವಹಿಸಿದೆ. ಆರು ಕಾಲೇಜುಗಳಿಗೆ ನಾನು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.