×
Ad

ಉಡುಪಿ: ರೈಲ್ವೆ ಪೊಲೀಸರಿಂದ ಹಿರಿಯ ನಾಗರಿಕರ ರಕ್ಷಣೆ

Update: 2022-02-16 20:11 IST

ಉಡುಪಿ, ಫೆ.16: ಮರೆವು ರೋಗದಿಂದ ಬಳಲುತಿದ್ದ ಹಿರಿಯ ನಾಗರಿಕ ರೊಬ್ಬರನ್ನು ಉಡುಪಿಯ ರೈಲ್ವೆ ಪೊಲೀಸರು ಇಂದು ಇಂದ್ರಾಳಿಯಲ್ಲಿರುವ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದು, ಅವರ ಮಾಹಿತಿಯನ್ನು ಕಲೆಹಾಕಿ ಕುಟುಂಬದವರೊಂದಿಗೆ ಅವರನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದಂತೆ ಕಂಡುಬಂದ ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರನ್ನು ರೈಲ್ವೆ ಪೊಲೀಸ ಸಿಬ್ಬಂದಿಗಳಾದ ಸುಧೀರ್ ಶೆಟ್ಟಿ, ಶ್ರೀಕಾಂತ್ ಹಾಗೂ ಝೀನಾ ಪಿಂಟೊ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಒಬ್ಬರೇ ಕುಳಿತಿರುವುದನ್ನು ಗಮನಿಸಿ ಕಚೇರಿಗೆ ಕರೆತಂದು ವಿಚಾರಿಸಿದ್ದರು.

ಜಗದೀಶ್ ಎಂಬ ತನ್ನ ಹೆಸರನ್ನು ಹೊರತುಪಡಿಸಿ ಹಿರಿಯ ವ್ಯಕ್ತಿ ಬೇರೆ ಯಾವುದೇ ಮಾಹಿತಿ ನೀಡಲು ವಿಫಲರಾದರು. ಅವರ ಬಳಿ ಇದ್ದ ವಸ್ತುಗಳನ್ನು ಪಡೆದು ಹುಡುಕಾಡಿದಾಗ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಅದರಲ್ಲಿ 65 ವರ್ಷ ಪ್ರಾಯದ ಅವರು ರಾಜಸ್ತಾನದ ಅಳ್ವಾರದ ನಿವಾಸಿ ಎಂಬುದು ಪತ್ತೆ ಯಾಯಿತು. ಆದರೆ ತನ್ನ ಕುಟುಂಬದ ಬಗ್ಗೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ನೀಡಲು ಅವರು ವಿಫಲರಾದರು.

ಕೊನೆಗೆ ಪೊಲೀಸರು ರಾಜಸ್ತಾನದ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿ ಜಗದೀಶ್ ಕುರಿತ ಮಾಹಿತಿ ಯನ್ನು ನೀಡಿದರು. ಅವರು ಮಾಜಿ ಸೈನಿಕ ಎಂಬುದು ಪತ್ತೆಯಾಯಿತು. ಅವರ ಬಳಿ 2,110ರೂ. ನಗದು ಸಿಕ್ಕಿತು. ಎಸ್ಪಿ ಕಚೇರಿ ಅವರ ಗ್ರಾಮದ ಪೊಲೀಸ್ ಸ್ಟೇಶನ್‌ನ್ನು ಸಂಪರ್ಕಿಸಿದ್ದು, ಕುಟುಂಬದ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ. ಇದೀಗ ರೈಲ್ವೆ ಪೊಲೀಸರು ಜಗದೀಶ್‌ರನ್ನು ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News