ಮುಸ್ಲಿಂ ಮಹಿಳೆಯರು ಇಷ್ಟಪಟ್ಟು ಹಿಜಾಬ್ ಧರಿಸುತ್ತಿಲ್ಲ, ಅವರಿಗೆ ಬಲವಂತಪಡಿಸಲಾಗುತ್ತಿದೆ: ಆದಿತ್ಯನಾಥ್

Update: 2022-02-17 06:22 GMT

ಲಕ್ನೊ: ಮುಸ್ಲಿಂ ಮಹಿಳೆಯರ ಮೇಲೆ ಹಿಜಾಬ್ ಅನ್ನು ಬಲವಂತವಾಗಿ ಹೇರಲಾಗುತ್ತದೆ ಹಾಗೂ  ಯಾರೂ ತಮ್ಮಿಷ್ಟದಂತೆ ಹಿಜಾಬ್ ಧರಿಸುವುದಿಲ್ಲ ಎಂದು ಹಿಜಾಬ್ ಗದ್ದಲದ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಹೇಳಿದರು.

India Today TVಗೆ ನೀಡಿದ ವಿಶೇಷ ಸಂದರ್ಶನದಲ್ಲಿ  ಆದಿತ್ಯನಾಥ್, "ಯಾವುದೇ ಮಹಿಳೆ ಇಷ್ಟಪಟ್ಟು  ಹಿಜಾಬ್ ಧರಿಸುವುದಿಲ್ಲ. ಮಹಿಳೆಯರು ಎಂದಾದರೂ ತ್ರಿವಳಿ ತಲಾಖ್ ದುಷ್ಕೃತ್ಯವನ್ನು ಇಷ್ಟಪಟ್ಟು ಒಪ್ಪಿಕೊಂಡಿದ್ದಾರೆಯೇ? ಈ ಕುರಿತು  ಆ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಕೇಳಿ" ಎಂದು ಹೇಳಿದ್ದಾರೆ.

"ನಾನು ಅವರ ಕಣ್ಣೀರನ್ನು ನೋಡಿದ್ದೇನೆ ... ಅವರು ತಮ್ಮ ಅಗ್ನಿಪರೀಕ್ಷೆಯ ಬಗ್ಗೆ ಮಾತನಾಡುವಾಗ ಅವರ ಸಂಬಂಧಿಕರು ಕಣ್ಣೀರು ಸುರಿಸುತ್ತಿದ್ದರು. ತ್ರಿವಳಿ ತಲಾಖ್ ರದ್ದುಪಡಿಸಿದ್ದಕ್ಕಾಗಿ ಜೌನ್‌ಪುರದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು"ಎಂದು ಆದಿತ್ಯನಾಥ್ ಹೇಳಿದರು.

ವೈಯಕ್ತಿಕ ಉಡುಪು ವ್ಯಕ್ತಿಯ ಆಯ್ಕೆಗೆ ಸೀಮಿತವಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

 "ನಾನು ಯಾವುದೇ ಅಧಿಕಾರಿಯ ಮೇಲೆ ನನ್ನ ರೀತಿ ಕೇಸರಿ ಬಟ್ಟೆಯನ್ನು  ಆಯ್ಕೆ ಮಾಡಲು  ಒತ್ತಾಯಿಸಲಿಲ್ಲ. ನನ್ನ ಕಛೇರಿಯಲ್ಲಿರುವ ಎಲ್ಲರಿಗೂ ಭಾಗುವಾ [ಕೇಸರಿ] ಧರಿಸಲು ನಾನು ಹೇಳಬಹುದೇ? ನಾನು ಇದನ್ನು ನನ್ನ ಪಕ್ಷದ ಎಲ್ಲರಿಗೂ ಹೇಳಬಹುದೇ? ನನಗೆ ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇರಬೇಕು ಹಾಗೂ  ಸಂಸ್ಥೆ ಎಂದ ಮೇಲೆ  ಆ ಸಂಸ್ಥೆಯಲ್ಲಿ ಶಿಸ್ತು ಇರಬೇಕು’’ ಎಂದರು.

ಶಾಲಾ-ಕಾಲೇಜುಗಳಲ್ಲಿ ಹುಡುಗಿಯರು ಹಾಗೂ  ಮಹಿಳೆಯರು ಹಿಜಾಬ್ ಧರಿಸುವುದರ ವಿರುದ್ಧ ಕರ್ನಾಟಕ ವ್ಯಾಪಕ ಪ್ರತಿಭಟನೆಗೆ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್  ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News