ಉಕ್ರೇನ್ ಮೇಲೆ ಮಿಲಿಟರಿ ದಾಳಿಗೆ ರಷ್ಯಾ ಸಜ್ಜಾಗಿದೆ ಎಂದ ಅಮೆರಿಕ

Update: 2022-02-18 05:16 GMT
ಜೋ ಬೈಡನ್ / ಪುಟಿನ್ (PTI)

ವಾಷಿಂಗ್ಟನ್: ಉಕ್ರೇನ್ ಮೇಲೆ ಭಾರೀ ಮಿಲಿಟರಿ ದಾಳಿ ನಡೆಸುವ ಹೊಸ್ತಿಲಲ್ಲಿ ರಷ್ಯಾ ಇದೆ ಎಂದು ಅಮೆರಿಕ ಗುರುವಾರ ಹೇಳಿದೆಯಲ್ಲದೆ ಉಕ್ರೇನ್‍ನಿಂದ ತನ್ನ ಸೇನಾ ಪಡೆಗಳನ್ನು ಹಿಂಪಡೆಯುತ್ತಿರುವುದಾಗಿ ರಷ್ಯಾದ ಹೇಳಿಕೆಯನ್ನು ಅಲ್ಲಗಳೆದಿದೆ. ಈ ನಡುವೆ ಫಿರಂಗಿ ದಾಳಿಯಲ್ಲಿ ಉಕ್ರೇನ್‍ನಲ್ಲಿನ ಕಿಂಡರ್ ಗಾರ್ಟನ್ ಒಂದಕ್ಕೆ ಹಾನಿಯಾಗಿದೆ.

ಮುಂಬರುವ ದಿನಗಳಲ್ಲಿ ರಷ್ಯಾ ತನ್ನ ನೆರೆಯ ದೇಶದ ಮೇಲೆ ದಾಳಿ ನಡೆಸಬಹುದೆಂದು ಗುಪ್ತಚರ ವರದಿಗಳು ತಿಳಿಸಿವೆ ಎಂದು ಅಮೆರಿಕಾದ ಸೆಕ್ರಟರಿ ಆಫ್ ಸ್ಟೇಟ್ ಆಂಟನಿ ಬ್ಲಿಂಕೆನ್ ಅವರು ನ್ಯೂಯಾರ್ಕ್‍ನಲ್ಲಿ ವಿಶ್ವ ಸಂಸ್ಥೆಯಲ್ಲಿ ನೀಡಿದ ಭಾಷಣವೊಂದರಲ್ಲಿ ತಿಳಿಸಿದ್ದಾರೆ.

ರಷ್ಯಾ ತನ್ನ ಸೇನಾಪಡೆಗಳನ್ನು ಹಿಂಪಡೆಯುತ್ತಿದೆ ಎಂಬ ವಾದವನ್ನು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಒಪ್ಪಲು ಸಿದ್ಧವಿಲ್ಲದೇ ಇರುವ ನಡುವೆ ತಾನು ಉಕ್ರೇನ್ ಮೇಲೆ ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿ ರಷ್ಯಾ ತಿಳಿಸಬೇಕು ಎಂದು ಬ್ಲಿಂಕೆನ್  ಆಗ್ರಹಿಸಿದ್ದಾರೆ.

"ನಿಮ್ಮ ಸೇನಾ ಪಡೆಗಳನ್ನು ಯುದ್ಧವಿಮಾನಗಳನ್ನು ತಮ್ಮ ಪೂರ್ವನೆಲೆಗೆ ಕಳುಹಿಸಿ ನಿಮ್ಮ ಮಾತುಗಳನ್ನು ಸಾಬೀತುಪಡಿಸಿ, ನಿಮ್ಮ ರಾಜತಾಂತ್ರಿಕರನ್ನು ಸಂಧಾನ ಮೇಜಿಗೆ ಕಳುಹಿಸಿ,'' ಎಂದು ಬ್ಲಿಂಕೆನ್ ರಷ್ಯಾಗೆ ಹೇಳಿದ್ದಾರೆ.

ಆದರೆ ಆಕ್ರಮಣ ಯೋಜನೆಗಳನ್ನು ನಿರಾಕರಿಸಿರುವ ರಷ್ಯಾ ಪೂರ್ವ ಯುರೋಪ್‍ನಿಂದ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ವಾಪಸ್ ಸರಿಯಬೇಕೆಂಬ ತನ್ನ ಬೇಡಿಕೆ ಈಡೇರದೇ ಇದ್ದಲ್ಲಿ ಉಕ್ರೇನ್ ವಿರುದ್ಧ "ಮಿಲಿಟರಿ-ತಾಂತ್ರಿಕ ಕ್ರಮಗಳನ್ನು'' ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಪ್ರತಿಕ್ರಿಯಿಸಿ "ಅವರು ಸೇನಾಪಡೆಗಳನ್ನು ಹಿಂಪಡೆದಿಲ್ಲ, ಬದಲು ನಿಯೋಜಿಸುತ್ತಿದ್ದಾರೆ,'' ಎಂದು ಹೇಳಿದ್ದಾರೆ.

ಉಕ್ರೇನ್ ತಾನು ನ್ಯಾಟೋ ಸೇರುವುದಿಲ್ಲ ಎಂದು ಹೇಳಬೇಕು ಹಾಗೂ ಪಾಶ್ಚಿಮಾತ್ಯ ಮೈತ್ರಿ ಪಡೆ ಪೂರ್ವಯುರೋಪ್‍ನ ಬಹುಭಾಗದಿಂದ ವಾಪಸಾಗಬೇಕೆಂಬ ಬೇಡಿಕೆ ಈಡೇರಿಸಿದಲ್ಲಿ ಮಾತ್ರ ಯಾವುದೇ ಅಪಾಯವಿರಲಾರದು ಎಂದು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದಾರೆ.

ಆದರೆ ಉಕ್ರೇನ್‍ಗೆ ನ್ಯಾಟೋ ಸೇರುವ ಇಂಗಿತವಿಲ್ಲದೇ ಇದ್ದರೂ ಪಾಶ್ಚಿಮಾತ್ಯ ಯುರೋಪ್‍ನ ಪ್ರಜಾಪ್ರಭುತ್ವಗಳೊಂದಿಗೆ ಏಕೀಕೃತಗೊಳ್ಳುವ ವಿಶಾಲವಾದ ಉದ್ದೇಶವನ್ನಂತೂ ಹೊಂದಿದೆ ಎಂದು ವರದಿಯಾಗಿದೆ.

ಇನ್ನೊಂದು ಬೆಳವಣಿಗೆಯಲ್ಲಿ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರದ ಅಗತ್ಯದ ತನ್ನ ಪ್ರಸ್ತಾವನೆಗೆ ಪುಟಿನ್ ಅವರ ಪ್ರತಿಕ್ರಿಯೆ ಬಂದಿದೆ ಎಂದು ಅಮೆರಿಕಾ ಹೇಳಿದೆಯಲ್ಲದೆ ಪ್ರತಿಕ್ರಿಯೆಯಲ್ಲಿ ಏನಿದೆ ಎಂದು ತಿಳಿಸಿಲ್ಲ.

ಆದರೆ ಚರ್ಚೆ ನಡೆಸಲು ಹೆಚ್ಚೇನೂ ಇಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಅಮೆರಿಕಾದ ಪಡೆಗಳು ಮಧ್ಯ ಯುರೋಪ್, ಪೂರ್ವ ಯುರೋಪ್ ಮತ್ತು ಬಾಲ್ಟಿಕ್ಸ್‍ನಿಂದ ಹಿಂದೆ ಸರಿಯಬೇಕು ಎಂದು ಅದು ಹೇಳಿದೆ.

ಇನ್ನೊಂದು ಬೆಳವಣಿಗೆಯಲ್ಲಿ ಮಾಸ್ಕೋದಲ್ಲಿನ ಅಮೆರಿಕಾದ ಎರಡನೇ ಅತಿ ಪ್ರಮುಖ ರಾಜತಾಂತ್ರಿಕರನ್ನು ರಷ್ಯಾ ಉಚ್ಛಾಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News