×
Ad

ತಾಲೂಕಿಗೊಂದು ಕೃಷಿ ಯೋಜನೆ ರೂಪಿಸಿ: ಸರಕಾರಕ್ಕೆ ನಿವೃತ್ತ ನ್ಯಾ. ನಾಗಮೋಹನದಾಸ್ ಒತ್ತಾಯ

Update: 2022-02-18 15:13 IST

ಮಂಗಳೂರು, ಫೆ. 18: ಪ್ರತಿ ತಾಲೂಕಿನ ವಿಶೇಷತೆಗೆ ಅನುಗುಣವಾಗಿ ಬೆಳೆಗಳನ್ನು ಗೊತ್ತುಪಡಿಸಿ ತಾಲೂಕಿ ಗೊಂದು ಕೃಷಿ ಯೋಜನೆ ರೂಪಿಸುವ ಮೂಲಕ ರಾಜ್ಯ ಸರಕಾರ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯತಂತ್ರ ರೂಪಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದ ಕುದ್ಮಲ್‌ರಂಗರಾವ್ ಪುರಭವನದಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ನೆನಪು ಮತ್ತು ರಾಜ್ಯ ಮಟ್ಟದ ವಿಚಾರಗೋಷ್ಠಿಯನ್ನು ತೆಂಗಿನ ಹೂವನ್ನು ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತ ದಿವಾಳಿಯಾದರೆ ಸರಕಾರ ಮಾತ್ರ ಅಲ್ಲ ದೇಶವೇ ದಿವಾಳಿ ಆಗುತ್ತದೆ. ರೈತರ ಭದ್ರತೆಯೇ ದೇಶದ ಭದ್ರತೆ. ಹಾಗಾಗಿ ವೈಜ್ಞಾನಿಕವಾಗಿ ಆಯಾ ಪ್ರದೇಶಗಳ ಮಣ್ಣು, ಬೆಳೆಯ ಬಗ್ಗೆ ಅಧ್ಯಯನ ನಡೆಸಿ ತಾಲೂಕಿ ಗೊಂದು ಸೂಕ್ತವಾದ ಕೃಷಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಸರಕಾರ ರೈತರ ಹಿತ ಕಾಪಾಡಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ಸ್ವಾತಂತ್ರೋತ್ತರದಲ್ಲಿ ನಡೆದ ಹಸಿರು ಕ್ರಾಂತಿಯ ಫಲವಾಗಿಯೇ ಇಂದು ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಗಿದೆ. ಹಿಂದೆ 50 ಮಿಲಿಯ ಟನ್ ಆಹಾರ ಉತ್ಪನ್ನಗಳು ನಮ್ಮಲ್ಲಿ ಉತ್ಪಾದನೆಯಾಗುತ್ತಿದ್ದರೆ, ಇಂದು 295 ಮಿಲಿಯನ್ ಟನ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಇದಕ್ಕೆ ದೇಶದ ಬೆನ್ನೆಲುಬಾದ ರೈತರು ಕಾರಣ ಎಂದವರು ಹೇಳಿದರು.

ದೇಶದಲ್ಲಿ ಹಿಂದಿದ್ದ ಬಡತನ, ಹಸಿವು ಕಡಿಮೆಯಾಗಲು ಇದು ಕಾರಣವಾಗಿದೆ. ಆದರೆ ಹಸಿರು ಕ್ರಾಂತಿಯ ಪರಿಣಾಮ, ವೈಜ್ಞಾನಿಕ ಸಂಶೋಧನೆಗಳ ಫಲವನ್ನು ಅತಿಯಾಗಿ ಬಳಕೆ ಮಾಡಿದ ಕಾರಣ ಭೂಮಿ ಇಂದು ಬರಡಾಗಿದೆ. ಫಲವತ್ತತೆ ಕಳೆದುಕೊಂಡಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ವಿಷಯುಕ್ತ ನೀರಿನಲ್ಲಿ ನಾವಿಂದು ವಿಷಯುಕ್ತ ಆಹಾರವನ್ನು ಬೆಳೆದು ವಿಷವನ್ನೇ ಸೇವಿಸುವಂತಾಗಿದೆ. ಇವೆಲ್ಲದರ ಪರಿಣಾಮ ರೈತರಿಂದು ಆರ್ಥಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿಯಾಗುತ್ತಿದಾರೆ. ಇಷ್ಟಾದರೂ ಯಾವನೇ ರೈತ ಎಂದೂ ತಾನು ದಿವಾಳಿಯಾಗಿರುವುದಾಗಿ ನ್ಯಾಯಾಲಯದಲ್ಲಿ ದಿವಾಳಿತನ ಅರ್ಜಿ ಹಾಕಿಲ್ಲ. ಕೈಗಾರಿಕೋದ್ಯಮಿಗಳು ಇದನ್ನು ಮಾಡುತ್ತಿದ್ದಾರೆ. ರೈತರು ತಲೆಮರೆಸಿಕೊಂಡು ಊರು ಬಿಟ್ಟು ಹೋಗಿಲ್ಲ. ಆದರೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಯತ್ತ ಸಾಗುತ್ತಿರುವುದು ಮಾತ್ರ ದುರಂತ. ಕಳೆದ 25 ವರ್ಷಗಳ ಅವಧಿಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ರಾಜ್ಯ ಸರಕಾರ ಭೂ ಸುಧಾರಣಾ ಕಾಯ್ದೆ, ಎಪಿಪಿಸಿ ಕಾಯ್ದೆಗೆ ತಿದ್ದುಪಡಿ ಮೂಲಕ ರೈತರನ್ನು ಭೂ ರಹಿತರನ್ನಾಗಿಸುವ ಕಾರ್ಯ ಮಾಡುತ್ತಿದ್ದು, ಸರಕಾರ ರೈತರ ಪರ ನಿಲ್ಲಬೇಕು. ಸರಕಾರ ಬಗ್ಗದಿದ್ದರೆ ರೈತರು ಐಕ್ಯ ಹೋರಾಟ ಮಾಡುವುದು ಅಗತ್ಯ ಎಂದು ಅವರು ಹೇಳಿದರು.

ರಾಜ್ಯ ಸರಕಾರ ತಂದಿರುವ ಭೂ ಸುಧಾರಣಾ ಕಾಯ್ದೆಯನ್ನು ಕೈಬಿಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಇದೇ ವೇಳೆ ಕೇಂದ್ರ ಸರಕಾರ ರೈತರ ಬೆಲೆಗೆ ಬೆಂಬಲ ಬೆಲೆ ನೀಡಲು ಕಾನೂನು ರಚನೆ ಆಗಬೇಕು. 15 ವರ್ಷಗಳ ಹಿಂದೆ ಸಲ್ಲಿಕೆಯಾದ ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಒಪ್ಪಿ ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಪೂರಕವಾದ ಕೈಗಾರಿಕೆಗಳು ಬರಬೇಕು ಎಚ್.ಎನ್. ನಾಗಮೋಹನ ದಾಸ್ ಒತ್ತಾಯಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಯನ್ನು ಈಡೇರಿಸಲಾಗದೆ ರಾಜಕಾರಣಿಗಳು ನಾಟಕ ನಡೆಸುತ್ತಿದ್ದಾರೆ. ಜನಸಾಮಾನ್ಯರಿಗೆ ಮೋಸ ಮಾಡಿ ಇದೀಗ ವಿದ್ಯಾರ್ಥಿಗಳನ್ನು ಮೋಸ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.

ಕೇಂದ್ರ ಸರಕಾರ ಮಂಡಿಸಿದ ಗೊತ್ತುಗುರಿ ಇಲ್ಲದ ಬಜೆಟ್‌ನಿಂದ ಜನರ ಮನಸ್ಸನ್ನು ಬೇರೆಡೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ. ಎಣ್ಣೆಕಾಳು ಬೆಳೆಗಾರರಿಗೆ ಸಹಕಾರ ಎಂದು ಬಜೆಟ್‌ನಲ್ಲಿ ಹೇಳಲಾಗಿದ್ದು, ಎಷ್ಟು ಯಾರಿಗೆ ಎಂಬ ಪ್ರಸ್ತಾಪವಿಲ್ಲ. ಎಸ್‌ಸಿ/ಎಸ್‌ಟಿ ರೈತರಿಗೆ ಸಹಕಾರ ಎಂಬ ಘೋಷಣೆ ಮೂಲಕ ರೈತರನ್ನು ವಿಭಜಿಸುವ ಪ್ರಯತ್ನ ಮಾಡಲಾಗುತ್ತಿದೆ. ರೈತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಕೇಂದ್ರ ಸರಕಾರದ ವಿರುದ್ಧ ದೊಡ್ಡ ಹೋರಾಟ ಮಾಡಿದ ರೈತರು ರಾಜ್ಯದಲ್ಲಿಯೂ ತಮ್ಮಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದವರು ಹೇಳಿದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ. ಪಾಟೀಲ್ ಮಾತನಾಡಿ, ರೈತ ಧ್ವನಿಯನ್ನು ವಿಧಾನ ಸೌಧದಲ್ಲಿ ಮೊಳಗಿಸುವ ಅಗತ್ಯವಿದ್ದು, ರೈತರು ಸಂಘಟಿತರಾಗಿ ದೆಹಲಿ ರೂಪದ ಹೋರಾಟವನ್ನು ಕರ್ನಾಟಕ ದಲ್ಲಿ ಸಂಘಟಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಡಗಲಪುರ ನಾಗೇಂದ್ರ ಮಾತನಾಡಿ, ದಿಕ್ಕು ತಪ್ಪುತ್ತಿರುವ ಯುವಕರಿಗೆ ಸರಿ ದಾರಿಯನ್ನು ತೋರಿಸಬೇಕು. ವಿಚಾರಗಳನ್ನು ವಿಮರ್ಶೆ ಮಾಡಿಸಬೇಕು. ಪ್ರತಿ ಜಿಲ್ಲಾ ಮಟ್ಟದಲ್ಲಿ ಯುವಕರು ಹಾಗೂ ಮಹಿಳೆಯರ ಸಮಾವೇಶ ನಡೆದು ಸಂಘಟನೆಯನ್ನು ಬಲಪಡಿಸುವ ಕಾರ್ಯ ಮಾಡಬೇಕು. ಇದು ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ನೀರುವ ಗೌರವ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ರೈತ ಮುಖಂಡರಾದ ಮಂಜುಳಾ ಅಕ್ಕಿ, ಟಿ. ನುಲೇನೂರಂ ಶಂಕ್ರಪ್ಪ, ಮುತ್ತಪ್ಪ ಕೋಮಾರ್, ಪ್ರಸಾದ್ ಶೆಟ್ಟಿ, ಮಹೇಶ್ ಪ್ರಭು, ತಾರನಾಥ ಗಟ್ಟಿ ಕಾಪಿಕಾಡ್, ಸನ್ನಿ ಡಿಸೋಜಾ ನೀರು ಮಾರ್ಗ, ಶಿವಾನಂದ ಕುಗ್ವೆ, ಕೆ. ಮಲ್ಲಯ್ಯ ಮೊದಲಾದವರು ಉಪಸ್ಥಿತರಿದ್ದರು.

ಜೆ.ಎಂ. ವೀರಸಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಪ್ರಮಾನಾಥ ಶೆಟ್ಟಿ ಬಾಳ್ತಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಸ್ವಾಗತಿಸಿದರು. ನಾದಾ ಮಣಿ ನಾಲ್ಕೂರು ರೈತ ಗೀತೆ ಹಾಡಿದರು.
ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ವಿಚಾರಗಳಲ್ಲಿ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು.

ಜನಪರ ಸಮಸ್ಯೆಗಳಿಗೆ ಜನಪರ ಹೋರಾಟವೇ ಮದ್ದು

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರವ್ಯಾಪಿಯಾಗಿ ಐಕ್ಯ ಹೋರಾಟ ನಡೆಯಿತು. ಸುಮಾರು ಒಂದು ವರ್ಷ ನಡೆದ ಆ ಹೋರಾಟದಲ್ಲಿ ಭಾಗಿಯಾದವರನ್ನು ದೇಶದ್ರೋಹಿಗಳು ಎನ್ನಲಾಯಿತು. ರಾಜಕೀಯ ಕುತಂತ್ರ ಎಂದು ವಾಟರ್ ಗಾನ್ ತೂರಿಸಾಯಿತು. ನೆಲವನ್ನು ಅಗೆಯಲಾಯಿತು. ಹೋರಾಟವನ್ನು ಹತ್ತಿಕುವ ಎಲ್ಲಾ ಪ್ರಯತ್ನ ಮಾಡಿದರೂ ರೈತರು ಎದೆಗುಂದದ ಕಾರಣ ಸರಕಾರ ಕೊನೆಗೂ ತನ್ನ ತಪ್ಪನ್ನು ತಿದ್ದಿಕೊಂಡಿತು. ಜನಪರ ಸಮಸ್ಯೆಗಳಿಗೆ ಜನಪರವಾದ ಹೋರಾಟವೇ ಮದ್ದು.

- ಎಚ್.ಎನ್. ನಾಗಮೋಹನ ದಾಸ್, ನಿವೃತ್ತ ನ್ಯಾಯಾಧೀಶರು, ಹೈಕೋರ್ಟ್, ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News