×
Ad

ಮಂಗಳೂರು: ದ.ಕ.ಜಿಲ್ಲಾ ಜಂಇಯ್ಯತುಲ್ ಖುತ್ಬಾದಿಂದ ಪ್ರತಿಭಟನೆ

Update: 2022-02-18 18:51 IST

ಮಂಗಳೂರು, ಫೆ.18: ರಾಜ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉದ್ದೇಶ ಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿಕೊಂಡು ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸಲು ಅನುಮತಿ ನಿರಾಕರಿಸುತ್ತಿವ ಕ್ರಮವನ್ನು ಖಂಡಿಸಿ ದ.ಕ.ಜಿಲ್ಲಾ ಜಂಇಯ್ಯತುಲ್ ಖುತ್ಬಾ (ಇಮಾಮರುಗಳ ಒಕ್ಕೂಟ) ವತಿಯಿಂದ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಹಿಜಾಬ್ ನನ್ನ ಧಾರ್ಮಿಕ ಹಕ್ಕು, ಸಂವಿಧಾನ ಕೊಟ್ಟ ಅವಕಾಶವಾಗಿದೆ. ಆ ಮೂಲಕ ಸಂವಿಧಾನವವನ್ನು ಕಾಪಾಡಿರಿ, ಶಿಕ್ಷಣ ನೀಡುವ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿಗೆ ತಂದೆಯ ಸಮಾನ ನೀವಾಗಿ. ಶಾಲೆ ನಮ್ಮ ಮೂಲ ಆಸ್ತಿ, ಅದೇ ನಮ್ಮ ದೇಶದ ಶಕ್ತಿ, ರಾಜಕೀಯ ಲಾಭಕ್ಕಾಗಿ ಹಿಂದೂ ಮುಸ್ಲಿಂ ಒಡೆದು ಆಳುವ ನೀತಿಯನ್ನು ನಿಲ್ಲಿಸಿ. ಶಿಕ್ಷಣ ಪಡೆಯುವ ಮಕ್ಕಳ ಮೇಲೆ ಕೋಮುವಾದ ಪ್ರಚೋದಿಸುವ ಕೆಲಸ ಮಾಡಬೇಡಿ ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಜಂಇಯ್ಯತುಲ್ ಖುತ್ಬಾ (ಇಮಾಮರುಗಳ ಒಕ್ಕೂಟ)ದ ಅಧ್ಯಕ್ಷ ಮೌಲಾನಾ ಎಸ್‌ಬಿ ಮುಹಮ್ಮದ್ ದಾರಿಮಿ ಮನಮೋಹನ್ ಸಿಂಗ್ ಪೇಟಾ ಧರಿಸಿ ದೇಶವನ್ನು ಹತ್ತು ವರ್ಷ ಆಡಳಿತ ನಡೆಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂದಿ, ರಾಷ್ಟಪತಿ ಪ್ರತಿಭಾ ಪಾಟೀಲ್ ಕೂಡ ತಲೆವಸ್ತ್ರ ಧರಿಸುತ್ತಿದ್ದರು. ವಸ್ತ್ರ ಧರಿಸುವುದು ಭಾರತೀಯ ಸಂಸ್ಕೃತಿಯಾದರೆ ವಸ್ತ್ರ ಬಿಚ್ಚುವುದು ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದನ್ನು ಹಿಜಾಬ್ ವಿರೋಧಿಗಳು ತಿಳಿದುಕೊಳ್ಳಬೇಕು. ಸನಾತನ ಸಂಸ್ಕ್ರತಿಯನ್ನು ಗುತ್ತಿಗೆ ಪಡಕೊಂಡ ರೀತಿಯಲ್ಲಿ ವರ್ತಿಸುವವರು ಈಗ ಮಾನ ಮುಚ್ಚುವ ಮುಗ್ದ ವಿದ್ಯಾರ್ಥಿನಿಗಳನ್ನು ಕಾಡುತ್ತಿರುವುದು ವಿಪರ್ಯಾಸ ಎಂದರು.

ಹಿಜಾಬ್ ಎಂಬುದು ಯಾವುದೋ ಅಪಾಯಕಾರಿ ವಸ್ತುವಿನಂತೆ ಬಿಂಬಿಸಲಾಗುತ್ತೆ. ಸಮವಸ್ತ್ರದ ಶಾಲನ್ನು ತಲೆಗೆ ಸರಿಸುವುದೇ ಹಿಜಾಬ್ ಆಗಿದೆ. ಇದಕ್ಕೆ ಅವಕಾಶ ನೀಡದಿರುವುದು ಅಮಾನವೀಯ ಮತ್ತು ಅಸಹಿಷ್ಣುತೆಯೂ ಆಗಿದೆ ಎಂದ ಎಸ್‌ಬಿ ದಾರಿಮಿ ಶಾಲಾ ಕಾಲೇಜುಗಳಲ್ಲಿ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು ಅನ್ಯೋನ್ಯವಾಗಿದ್ದಾರೆ. ಆದರೆ ಹೊರಗಿನ ರಾಜಕೀಯ ಶಕ್ತಿಗಳು ಅವರೆಡೆಯಲ್ಲಿ ಹುಳಿ ಹಿಂಡುವ ನೀಚ ಕೆಲಸ ಮಾಡುತ್ತಿದೆ. ಆದಾಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಉತ್ತಮ ತೀರ್ಪು ಬರುವ ನಿರೀಕ್ಷೆ ಇದೆ ಎಂದರು.

ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ರಾಷ್ಟ್ರಧ್ವಜವನ್ನು ಅವಮಾನಿಸಿದವರಿಗೆ ಸದನದಲ್ಲಿ ಪ್ರವೇಶವಿದೆ. ಆದರೆ ಹಿಜಾಬ್ ಹಾಕಿದವರಿಗೆ ಕಾಲೇಜಿಗೆ ಪ್ರವೇಶ ನೀಡದಿರುವುದು ಖಂಡನೀಯ. ಕೊರೋನದಿಂದ ಈಗಲೂ ನಾವು ಅರ್ಧ ಹಿಜಾಬ್‌ನಲ್ಲೇ ಇದ್ದೇವೆ. ಆದಾಗ್ಯೂ ಪೂರ್ಣ ಪ್ರಮಾಣದ ಹಿಜಾಬನ್ನು ಅವಮಾನಿಸುತ್ತಿರುವುದು ಯಾತಕ್ಕೆ ಎಂದು ಪ್ರಶ್ನಿಸಿದರು. ಅಲ್ಲದೆ ತ್ರಿವರ್ಣಧ್ವಜವನ್ನು ಒಪ್ಪದವರು, ಗೌರವಿಸದವರು ದೇಶ ಬಿಟ್ಟು ತೊಲಗಿ ಎಂದು ಒತ್ತಾಯಿಸಿದರು.

ಹಬೀಬುರ್ರಹ್ಮಾನ್ ತಂಙಳ್ ದುಆ ಮಾಡಿ, ಮಾತನಾಡಿದರು. ಇಸಾಕ್ ಪೈಝಿ ದೇರಳಕಟ್ಟೆ, ಬುರ್ಹಾನ್ ಪೈಝಿ ಅಡ್ಯಾರ್, ಇಸ್ಮಾಯಿಲ್ ಫೈಝಿ ಬಂಟ್ವಾಳ, ಇಬ್ರಾಹೀಂ ದಾರಿಮಿ ಕಡಬ, ಮುಸ್ತಫಾ ಯಮಾನಿ, ತಬೂಕ್ ದಾರಿಮಿ, ಇಕ್ಬಾಲ್ ಅಹ್ಮದ್ ಮುಲ್ಕಿ, ಮಜೀದ್ ಫೈಝಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ರಶೀದ್ ರಹ್ಮಾನಿ ಸ್ವಾಗತಿಸಿದರು. ನಝೀರ್ ಅಝ್ಹರಿ ಉಪ್ಪಿನಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News