×
Ad

ರಾಜಕೀಯ ದಾಳಕ್ಕೆ ವಿದ್ಯಾರ್ಥಿಗಳು ಬಲಿಪಶು: ಪ್ರಕಾಶ್ ಕಮ್ಮರಡಿ

Update: 2022-02-18 21:50 IST

ಉಡುಪಿ, ಫೆ.18: ಮುಂದಿನ ಚುನಾವಣೆಯಲ್ಲಿ ಮತಗಳಿಕೆಗಾಗಿ ಧರ್ಮದ ಹೆಸರಿನಲ್ಲಿ ಮನಸ್ಸುಗಳನ್ನು ಒಡೆದು ಕಂದಕ ಸೃಷ್ಟಿಸಲಾಗುತ್ತಿದ್ದು, ರಾಜಕೀಯ ದಾಳಕ್ಕೆ ವಿದ್ಯಾರ್ಥಿಗಳು ಬಲಿಯಾಗುತಿದ್ದಾರೆ ಎಂದು ಬೆಂಗಳೂರು ಸಮಾಜವಾದಿ ಅಧ್ಯಯನ ಕೇಂದ್ರದ ಪ್ರಕಾಶ್ ಕಮ್ಮರಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಹಬಾಳ್ವೆ ಉಡುಪಿ, ಸಮಾಜವಾದಿ ಅಧ್ಯಯನ ಕೇಂದ್ರ ಬೆಂಗಳೂರು ಮತ್ತು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಉಡುಪಿ ಡಾನ್‌ ಬಾಸ್ಕೋ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ವಿದ್ಯಾರ್ಥಿ ಸಮುದಾಯ ಮತ್ತು ಧ್ರುವೀಕರಣದ ಕುರಿತ ಮುಕ್ತ ಸಂವಾದದಲ್ಲಿ ಮಾತನಾಡುತಿದ್ದರು.

ಧರ್ಮದ ಹೆಸರಿನಲ್ಲಿ ವಿದ್ಯೆ ಹಾಗೂ ಉದ್ಯೋಗವನ್ನು ಕಳೆದುಕೊಳ್ಳುತ್ತಿರುವ ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ದೇಶದ ರೈತರು ಸ್ಪಷ್ಟ ಬಹುಮತವುಳ್ಳ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದ ಕೃಷಿ ವಿಧೇಯಕವನ್ನು ಒಗ್ಗಟ್ಟಿನಲ್ಲಿ ಹಿಮ್ಮೆಟ್ಟಿಸಿ ಬುದ್ಧಿ ಕಲಿಸಿದ್ದಾರೆ. ಸಿಎಎ, ಎನ್‌ಆರ್‌ಸಿ ವಿಚಾರದಲ್ಲೂ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಕೆಲಸವಾಗಿದೆ. ಹೀಗಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧೃತಿಗೆಡುವ ಅಗತ್ಯವೇನಿಲ್ಲ ಎಂವರು ಆಶಾವಾದ ವ್ಯಕ್ತಪಡಿಸಿದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಇದು ದ್ವೇಷ ಮತ್ತು ಪ್ರೀತಿಯ ನಡುವಿನ ಸಂಘರ್ಷ. ಹಿಂದೂ, ಮುಸ್ಲಿಂ, ಕ್ರೈಸ್ತರು ನಾವೆಲ್ಲ ಒಗ್ಗಟ್ಟಿನಲ್ಲಿದ್ದೇವೆ ಎನ್ನುವ ಸಾಮರಸ್ಯದ ಸಂದೇಶವನ್ನು ಈ ಜಗತ್ತಿಗೆ ಸಾರಬೇಕಿದೆ. ತಲೆ ತಲಾಂತರಗಳಿಂದ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಿರುದ್ಧ ಧ್ವನಿಯಾಗಬೇಕೆಂದು ಹೇಳಿದರು.

ನಾನು ತಲೆ ಮೇಲೆ ಧರಿಸುವ ಬಟ್ಟೆಯಿಂದ ಇನ್ನೊಬ್ಬರಿಗೆ ಹೇಗೆ ತೊಂದರೆ ಆಗುತ್ತದೆ. ಹಿಜಾಬ್ ನನ್ನ ಆಯ್ಕೆ. ಈ ವಿವಾದ ಧಾರ್ಮಿಕತೆ ವಿಚಾರವಾಗಿ ಉಳಿದಿಲ್ಲ. ರಾಜಕೀಯ ಮಧ್ಯ ಪ್ರವೇಶದ ಮೂಲಕ ಕೋಮುಬಣ್ಣಕ್ಕೆ ತಿರುಗಿದೆ ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದರು.

ಕಾನೂನು ವಿದ್ಯಾರ್ಥಿನಿ ಮಾತನಾಡಿ, ಹಿಜಾಬ್ ಸಂಬಂಧಿತ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪದವಿ ಪೂರ್ವ ಕಾಲೇಜಿಗೆ ಮಾತ್ರವಿತ್ತು. ಆದೇಶವನ್ನು ವಿಶ್ಲೇಷಣೆ ಮಾಡಿ ಪದವಿ, ಹೈಸ್ಕೂಲ್‌ಗೂ ಅನ್ವಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದು ಕೋಮು ಹಾಗೂ ರಾಜಕೀಯ ಬಣ್ಣಕ್ಕೆ ತಿರುಗುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿ ಒಂದು ಸಮುದಾಯವನ್ನು ಅಸ್ಪೃಶ್ಯತೆ ಹಾಗೆ ಕಾಣಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ವೀರಸಂಗಯ್ಯ ಮಾತನಾಡಿ, ಹಿಜಾಬ್ ಸಂಬಂಧಿತ ಹೈಕೋರ್ಟ್ ತೀರ್ಪು ಏನೇ ಬರಲಿ. ದೇಶದ ಜಾತ್ಯಾತೀತ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲ ಒಮ್ಮತದಿಂದ ಒಗ್ಗಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ರಂಗಕರ್ಮಿ ಹೆಗ್ಗೋಡು ಪ್ರಸನ್ನ, ಚಿಂತಕ ನರೇಂದ್ರ ನಾಯಕ್, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಬೆಂಗಳೂರಿನ ಎ. ನಾರಾಯಣ, ಮಂಗಳೂರು ವಿಶ್ವವಿದ್ಯಾಲಯದ ಪರಿಣಿತ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ರಾಜಾರಾಮ್ ತೋಳ್ಪಾಡಿ, ಫಾ. ವಿಲಿಯಂ ಮಾರ್ಟಿಸ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ಸುಂದರ್ ಮಾಸ್ಟರ್, ಶ್ಯಾಮ್‌ ರಾಜ್ ಬಿರ್ತಿ, ಮುಹಮ್ಮದಾಲಿ ಕಮ್ಮರಡ್ಡಿ, ಮುಹಮ್ಮದ್ ಮೌಲನಾ, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಇದ್ರಿಸ್ ಹೂಡೆ, ಯಾಸೀನ್ ಕುಂದಾಪುರ, ಇಬ್ರಾಹಿಂ ಕೋಟ, ರಫೀಕ್ ಪಡುಬಿದ್ರಿ, ಪ್ರೊ. ಫಣಿರಾಜ್, ಹುಸೇನ್ ಕೋಡಿಬೆಂಗ್ರೆ, ವಿದ್ಯಾ ದಿನಕರ್, ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು. ಸಹಬಾಳ್ವೆಯ ಯಾಸಿನ್ ಕೋಡಿಬೆಂಗ್ರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News