ಕಾಂಗ್ರೆಸ್ ನದ್ದು ಊರಿಗೆ ಮನುಷ್ಯನಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬ ಸ್ಥಿತಿ: ಸಚಿವ ಅಶೋಕ್

Update: 2022-02-19 08:25 GMT

ಮಂಗಳೂರು, ಫೆ.19: ಮಂಗಳೂರು, ಫೆ.19: ಊರಿಗೆ ಮನುಷ್ಯನಲ್ಲ ಸ್ಮಶಾನಕ್ಕೆ ಹೆಣವೂ ಅಲ್ಲ ಎಂಬ ಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಜಾಬ್ ಪರವಾಗಿ ಇದೆ ಎಂದು ಹೇಳಲು ಡಿ.ಕೆ.ಶಿವಕುಮಾರ್ ಬಿಡ್ತಿಲ್ಲ, ನಾವು ಹಿಂದೂ ಪರವಾಗಿ ಇದೆ ಎಂದು ಹೇಳಲು ಸಿದ್ದರಾಮಯ್ಯ ಬಿಡ್ತಿಲ್ಲ. ಇದು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಫೈಟ್ ಅಷ್ಟೇ ಎಂದು ಹೇಳಿದರು.

ವಿಧಾನಸಭೆಯಲ್ಲಿ ಹಿಜಾಬ್- ಕೇಸರಿ ಶಾಲು ವಿವಾದದ ಬಗ್ಗೆ ಯಾಕೆ ಕಾಂಗ್ರಸ್‍ ಮಾತಾಡ್ತಿಲ್ಲ? ಲಕ್ಷಾಂತರ ವಿದ್ಯಾರ್ಥಿಗಳಿಗೆ ಇವತ್ತು ಸಮಸ್ಯೆಯಾಗಿದೆ. ಆ ಕಾಳಜಿ ಕಾಂಗ್ರೆಸ್ ಗೆ ಬೇಕಲ್ವಾ? ಎಲ್ಲಿದೆ ಈ ಕಾಳಜಿ, ಈ ಬಗ್ಗೆ ಚರ್ಚೆ ಮಾಡಬೇಕಿತ್ತಲ್ವಾ? ಆದರೆ ಅವರು ಯಾಕೆ ಚರ್ಚೆ ಮಾಡುವುದಿಲ್ಲ ಅಂದರೆ ಚರ್ಚೆ ಮಾಡಿದ್ರೆ ಓಟು ಹೋಗುತ್ತದೆ. ಓಟು ಹೋಗುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. ಅದಕ್ಕೆ ಸಚಿವ ಈಶ್ವರಪ್ಪರನ್ನು ಹಿಡಿದುಕೊಂಡಿದ್ದಾರೆ ಅಷ್ಟೇ. ಇದು ಬಿಟ್ಟು ಕಾಂಗ್ರೆಸ್ ಗೆ ಬೇರೇನೂ ಉದ್ದೇಶ ಇಲ್ಲ ಎಂದು ಆರೋಪಿಸಿದರು.

 ಕಾಂಗ್ರೇಸ್ ಗೆ ಸ್ವಾರ್ಥ, ಈಶ್ವರಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮೂವರನ್ನು ಬಿಟ್ರೆ ಬೇರೇನಿದೆ ಎಂದು ಪ್ರಶ್ನಿಸಿದ ಸಚಿವರು, ಒಂದು ಸದನಕ್ಕೆ ಪ್ರತೀ ದಿನ ಒಂದು ಕೋಟಿ ರೂ. ಖರ್ಚಾಗುತ್ತದೆ. ಜನಗಳ ದುಡ್ಡು ತಗೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ದೆ ಹೊಡೆದರೆ  ಏನು ಅರ್ಥ ಬರುತ್ತೆ? ಜನರಿಗೆ ಮೋಸ ಮಾಡಿದಾಗೆ ಅಲ್ವಾ? ಕಾಂಗ್ರೆಸ್ ಅವರಿಗೆ ಬುದ್ಧಿ, ಮಾನ ಮರ್ಯಾದೆ ಏನಾದರೂ ಇದ್ದರೆ ಜನಗಳ‌ ವಿಷಯವಾಗಿ ಧ್ವನಿಯೆತ್ತಲಿ. ಅದು ಬಿಟ್ಟು ಡಿ.ಕೆ ಶಿವಕುಮಾರ್ ಅವರು ಈಶ್ವರಪ್ಪ ಮೇಲೇ ತೋಳು ಏರಿಸೋದು, ಹೊಡೆದಾಡೋದು. ಇದಕ್ಕೆ ವಿಧಾನಸಭೆಗೆ ಬರುವುದಾ? ಕೆಂಗಲ್‌ ಹನುಮಂತಯ್ಯ ವಿಧಾನಸೌಧ ಬಡವರಿಗೋಸ್ಕರ ಕಟ್ಟಿರುವುದು, ಕುಸ್ತಿ ಆಡೋಕೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News