ಪ್ರಶಾಂತ್‌ ಕಿಶೋರ್‌ ಜೊತೆ ನಿತೀಶ್‌ ಕುಮಾರ್‌ ಭೋಜನ ಕೂಟ: ರಾಜಕೀಯ ವಲಯದಲ್ಲಿ ಅಚ್ಚರಿ !

Update: 2022-02-19 16:19 GMT

ಪಾಟ್ನಾ,ಫೆ.19: ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಜೊತೆ ತನ್ನ ಭವಿಷ್ಯವು ಊಹಾಪೋಹಗಳಿಗೆ ವಿಷಯವಾಗಿರುವ ಸಮಯದಲ್ಲೇ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಶುಕ್ರವಾರ ರಾತ್ರಿ ತನ್ನ ಮಾಜಿ ಬಾಸ್,ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಭೋಜನದಲ್ಲಿ ಭಾಗಿಯಾಗಿದ್ದು ಅಚ್ಚರಿಯನ್ನು ಮೂಡಿಸಿದೆ.

2020ರಲ್ಲಿ ಕಿಶೋರ್ ಅವರನ್ನು ನಿತೀಶ್ ತನ್ನ ಜೆಡಿಯು ಪಕ್ಷದ ನಂ.2 ಸ್ಥಾನದಿಂದ ಕಿತ್ತುಹಾಕಿದ ಬಳಿಕ ಇದು ಅವರ ನಡುವಿನ ಮೊದಲ ಭೇಟಿಯಾಗಿದೆ. ದಿಲ್ಲಿಯಲ್ಲಿರುವ ಬಿಹಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಇಬ್ಬರೂ ಎರಡು ಗಂಟೆಗಳ ಕಾಲ ಜೊತೆಯಲ್ಲಿದ್ದರು ಎನ್ನಲಾಗಿದೆ.

ಭೋಜನ ಕೂಟ ನಡೆಸಿದ್ದನ್ನು ನಿತೀಶ್ ಸುದ್ದಿಗಾರರಿಗೆ ದೃಢಪಡಿಸಿದರಾದರೂ ಕಿಶೋರ್ ಜೊತೆಗೆ ತನಗೆ ಹಳೆಯ ಸಂಬಂಧವಿದೆ ಮತ್ತು ಇದರಲ್ಲಿ ವಿಶೇಷ ಅರ್ಥವನ್ನು ಹುಡುಕಬೇಕಿಲ್ಲ ಎಂದಿದ್ದಾರೆ. ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದ ಕಿಶೋರ್,ನಿತೀಶ್ ಒಮೈಕ್ರಾನ್ ಸೋಂಕಿಗೆ ತುತ್ತಾಗಿದ್ದಾಗ ತಾನು ಅವರಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ ಮತ್ತು ಆಗ ಅವರು ತನ್ನನ್ನು ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅದು ನಿನ್ನೆ ಸಾಕಾರಗೊಂಡಿದೆ ಎಂದು ಹೇಳಿದರು.
  ‌
ತಮ್ಮಿಬ್ಬರ ಮಾತುಕತೆಯ ಯಾವುದೇ ತಕ್ಷಣದ ಪರಿಣಾಮವನ್ನು ತಳ್ಳಿಹಾಕಿದ ಕಿಶೋರ್, ರಾಜಕೀಯವಾಗಿ ತಾವಿಬ್ಬರೂ ಪ್ರತ್ಯೇಕ ಧ್ರುವಗಳಾಗಿದ್ದೇವೆ ಎಂದರು. ಪ.ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಗೆಲುವಿನೊಂದಿಗೆ ದೊಡ್ಡ ಸುದ್ದಿ ಮಾಡಿದ್ದ ಕಿಶೋರ್ 2024ರ ಸಾರ್ವತ್ರಿಕ ಚುನಾವಣೆಗಾಗಿ ಬಿಜೆಪಿ-ನಿತೀಶ್ ಮೈತ್ರಿಯ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪೂರ್ವಭಾವಿ ಪ್ರಯತ್ನದಲ್ಲಿ ಸಕ್ರಿಯರಾಗಿದ್ದಾರೆ.

ಈವರೆಗಿನ ಕಿಶೋರ್ ಅವರ ಏಕೈಕ ರಾಜಕೀಯ ತಿರುವಾಗಿದ್ದ ಜೆಡಿಯು ಜೊತೆಗಿನ ನಂಟು ಕೆಲವೇ ತಿಂಗಳುಗಳಲ್ಲಿ ಹದಗೆಟ್ಟಿತ್ತು ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸುವುದರೊಂದಿಗೆ ಅಂತ್ಯಗೊಂಡಿತ್ತು.

ತನ್ನ ಇತ್ತೀಚಿನ ಸಂದರ್ಶನಗಳಲ್ಲಿ ನಿತೀಶ್ ಜೊತೆಗಿನ ತನ್ನ ಸೌಹಾರ್ದಯುತ ಸಂಬಂಧಗಳ ಬಗ್ಗೆ ಮಾತನಾಡಿದ್ದ ಕಿಶೋರ್,ತಾನು ಮರುಸಂಪರ್ಕ ಹೊಂದಲು ಬಯಸಿರುವ ಕೆಲವೇ ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದಾರೆ ಎಂದು ಹೇಳಿದ್ದರು.

ಕಿಶೋರ್ ವಿಶೇಷವಾಗಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗಿನ ತನ್ನ ವ್ಯವಹಾರಗಳಲ್ಲಿ ಪ್ರಕ್ಷುಬ್ಧತೆಯನ್ನು ನಿಭಾಯಿಸುತ್ತಿರುವ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಬೆಳವಣಿಗೆಯು ಪ್ರತಿಯೊಬ್ಬರನ್ನೂ ಊಹಾಪೋಹದಲ್ಲಿರಿಸುವ ಅವರ ಕಾರ್ಯತಂತ್ರಕ್ಕೆ ಅನುಗುಣವಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಬಂಗಾಳ ಚುನಾವಣೆಗಳ ಬಳಿಕ ತೃಣಮೂಲ ಕಾಂಗ್ರೆಸ್ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕಿಶೋರ್ ಅವರ ರಾಜಕೀಯ ಸಲಹಾ ತಂಡ ಐ-ಪ್ಯಾಕ್ ಮಮತಾ ಬ್ಯಾನರ್ಜಿ ಮತ್ತು ಹೆಚ್ಚೆಚ್ಚು ಮಹತ್ವಾಕಾಂಕ್ಷಿಯಾಗುತ್ತಿರುವ ಅಭಿಷೇಕ ನಡುವಿನ ಕಚ್ಚಾಟದಲ್ಲಿ ಸಿಕ್ಕಿಕೊಂಡಿದೆ.

ನಿತೀಶ್ ಪಾಲಿಗೂ ಕಿಶೋರ್ ಜೊತೆಗಿನ ಭೇಟಿಯು ಆಳವಾದ ಉದ್ದೇಶವನ್ನು ಹೊಂದಿದೆ. ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ತನ್ನನ್ನು ಟೀಕಿಸುತ್ತಿರುವ ಬಿಜೆಪಿಗೆ ಸಂದೇಶವೊಂದನ್ನು ರವಾನಿಸಲು ಕಿಶೋರ್ ಜೊತೆಗಿನ ತನ್ನ ಭೇಟಿಯನ್ನು ಬಹಿರಂಗಗೊಳಿಸಲು ನಿತೀಶ್ ನಿರ್ಧರಿಸಿದ್ದರು ಎಂದು ಅವರ ನಿಕಟ ಮೂಲಗಳು ತಿಳಿಸಿವೆ.
2020ರಲ್ಲಿ ಬಿಹಾರದಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ ಮೈತ್ರಿಕೂಟದಲ್ಲಿ ತೀರ ಕಡಿಮೆ ಸ್ಥಾನಗಳನ್ನು ಹೊಂದಿರುವ ನಿತೀಶ್ ಬಿಜೆಪಿಯನ್ನು ಅಂಕೆಯಲ್ಲಿಡಲು ಹರಸಾಹಸ ಪಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News