ಸುರತ್ಕಲ್: ಚುನಾಯಿತ ಜನಪ್ರತಿನಿಧಿಗಳ ವಂಚನೆ ಬಗ್ಗೆ ಅಣುಕು ದರ್ಶನದ ಮೂಲಕ ವಿಭಿನ್ನ ಪ್ರತಿಭಟನೆ
ಸುರತ್ಕಲ್, ಫೆ,20: ಸಾಮಾಜಿಕ ಹೋರಾಟಗಾರ ಆಸಿಫ್ ಆಪದ್ಭಾಂಧವ ಅವರ ನೇತೃತ್ವದಲ್ಲಿ ಎನ್‌ಐಟಿಕೆ ಅಕ್ರಮ ಟೋಲ್ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಸತತ 14 ದಿನದಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ರವಿವಾರ ಟೆಂಪೋ ಟ್ಯಾಕ್ಸಿ ಯೂನಿಯನ್‌ಗಳು ಮತ್ತಿತರ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಧರಣಿಯ ವೇದಿಕೆಗೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಆಸಿಫ್ ಕಳೆದ ಹದಿನಾಲ್ಕು ದಿನಗಳಿಂದ ಹಗಲು ರಾತ್ರಿ ಧರಣಿಯಲ್ಲಿ ಕೂತಿದ್ದೇವೆ. ಈ ಅಕ್ರಮ ಟೋಲ್ಗೇಟ್ ಮುಚ್ಚುವವರೆಗೂ ಹೋರಾಟ ಕೊನೆಗೊಳ್ಳುವುದಿಲ್ಲ. ಈ ನಡುವೆ ನಮ್ಮ ಹೋರಾಟವನ್ನು ಹತ್ತಿಕ್ಕಲು ರಾಜಕೀಯವಾಗಿ ಷಡ್ಯಂತರ ನಡೆದಿದೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ. ಹೋರಾಟ ಮುಂದುವರಿಯಲಿದೆ ಎಂದರು.
ಸಂಜೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಟೋಲ್ ಮಾಫಿಯಾದ ಜೊತೆ ಭಾಗಿಯಾಗಿರುವ ಜನಪ್ರತಿನಿಧಿಗಳು ಚುನಾವಣೆಯ ಮೊದಲು ಹಾಗೂ ಚುನಾವಣೆಯ ನಂತರ ಮತದಾರರಿಗೆ ಮಂಕುಬೂದಿ ಎರಚಿ ವಂಚಿಸುತ್ತಿರುವ ಕುರಿತು ಅಣುಕು ಪ್ರದರ್ಶನದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು.
ಚಾಲಕರ ಒಕ್ಕೂಟ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಗೌರವಾಧ್ಯಕ್ಷ ಸತೀಶ್ ದೇವಾಡಿಗ, ಕಿನ್ನಿಗೋಳಿ ಚಾಲಕ-ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಕಾರ್ಯದರ್ಶಿ ಹರೀಶ್, ರಾಮ್ಪ್ರಸಾದ್ ಶೆಟ್ಟಿ, ಫಾರೂಕ್, ಅವಿನಾಶ್, ಕರ್ನಿರೆ ಗುತ್ತು ಮನೆತನದ ಕುಟುಂಬಸ್ಥರು, ಎಸ್‌ಡಿಪಿಐ ಮುಖಂಡರಾದ ಯಾಸೀರ್ ಅರ್ಕುಳ, ಲ್ಯಾನ್ಸಿ ಥಾಮಸ್, ಇರ್ಫಾನ್ ಕಾಲನಿ, ಹನೀಫ್ ಕಾವೂರು, ಮುಹಮ್ಮದ್ ಅರಾಫತ್, ಫಯಾಝ್ ಸುಲ್ತಾನ್, ಕರ್ನಿರೆ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ದೊಡ್ಡಕೆರೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡರು.