×
Ad

ಪುತ್ತೂರು: ಕಾರುಗಳ ನಡುವೆ ಢಿಕ್ಕಿ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Update: 2022-02-20 19:43 IST

ಪುತ್ತೂರು: ಕಾರುಗಳೆರಡರ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರವಿವಾರ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ ಎಂಬಲ್ಲಿ ನಡೆದಿದೆ. 

ಪುತ್ತೂರಿನಿಂದ ಸುಳ್ಯದ ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಡಿಕೇರಿಯಿಂದ ಪುತ್ತೂರು ಮಾರ್ಗವಾಗಿ ಬಜ್ಪೆಗೆ ಹೋಗುತ್ತಿದ್ದ ಹೊಂಡೈ ಕಾರು ಮುಖಾಮುಖಿ ಢಿಕ್ಕಿಯಾಗಿತ್ತು. ಅಪಘಾತದಿಂದ ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದು, ಹೊಂಡೈ ಕಾರಿನ ಚಾಲಕ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ರಾಜು(35) ಎಂದು ಗುರುತಿಸಲಾಗಿದೆ.

ಮಂಗಳೂರು ತಾಲೂಕಿನ ಬಜ್ಪೆ ನಿವಾಸಿಗಳಾದ ರಾಜು ಪೂಜಾರಿ(42) ಅವರ ಪತ್ನಿ ನೇತ್ರಾವತಿ(40), ಪುತ್ರಿ ಜ್ಯೋತಿ(25) ಹಾಗೂ ಪುತ್ರ ಚೇತನ್(22) ಗಾಯಗೊಂಡವರು. ಈ ಪೈಕಿ ಜ್ಯೋತಿ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಜು ಪೂಜಾರಿ ಅವರ ಕುಟುಂಬವು ತಲಕಾವೇರಿಗೆ ರವಿವಾರ ಮುಂಜಾನೆ ಮನೆಯಿಂದ ಹೊರಟಿದ್ದು, ಅಲ್ಲಿಗೆ ಹೋಗಿ ಹಿಂದಿರುಗಿ ಬರುವಾಗ ಈ ಘಟನೆ ಸಂಭವಿಸಿದೆ. 

ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News