ಉತ್ತರಪ್ರದೇಶ: ನಕಲಿ ಎನ್ ಕೌಂಟರ್ ಗೆ ಸಂಬಂಧಿಸಿ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ‌

Update: 2022-02-20 17:28 GMT

ಶಾಹಜಹಾನ್ಪುರ, ಫೆ. 20: ಇಬ್ಬರು ಸಾವನ್ನಪ್ಪಿದ್ದ 2004ರ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಪೊಲೀಸ್ ಅಧೀಕ್ಷಕ ಸೇರಿದಂತೆ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಶಾಹಜಹಾನ್ಪುರದಲ್ಲಿರುವ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ‌

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 18 ಪೊಲೀಸರ ವಿರುದ್ಧ ಜಲಾಲಾಬಾದ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ರೈಮ್ ಬ್ರಾಂಚ್ ತನಿಖೆ ನಡೆಸಲಿದೆ ಎಂದು ಪೊಲೀಸ್ ಅಧೀಕ್ಷಕ ಎಸ್. ಆನಂದ್ ಹೇಳಿದ್ದಾರೆ. ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಜಲಾಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಚುಪುರದ ಇಬ್ಬರು ನಿವಾಸಿಗಳಾದ ಪ್ರಹ್ಲಾದ್ ಹಾಗೂ ಧನ್ಪಾಲ್ ರನ್ನು ಪೊಲೀಸರು 2004 ಅಕ್ಟೋಬರ್ 3ರಂದು ಸೆರೆ ಹಿಡಿದಿದ್ದರು. ಅನಂತರ ಅವರಿಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದರು. ಅಲ್ಲದೆ, ಅವರ ಮೃತದೇಹವನ್ನು ಕೊಂಡೊಯ್ದಿದ್ದರು ಎಂದು ಮೃತಪಟ್ಟವರ ಕುಟುಂಬಿಕರ ಪರ ವಕೀಲ ಏಜಾಝ್ ಹಸನ್ ಖಾನ್ ಅವರು ಹೇಳಿದ್ದಾರೆ. 

ಪ್ರಹ್ಲಾದ್ ಅವರ ಸಹೋದರ ರಾಮ್ ಕೀರ್ತಿ ಅವರು ಪ್ರಕರಣದ ತನಿಖೆ ನಡೆಸುವಂತೆ ವಿವಿಧ ಆಯೋಗ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅನಂತರ ಅವರು 2012 ನವೆಂಬರ್ 24ರಂದು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರು, ಘಟನೆ ನಡೆದು ಹಲವು ದಿನಗಳಾಯಿತು. ಅಲ್ಲದೆ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಮನವಿ ತಿರಸ್ಕರಿಸಿದ್ದರು. 

ಅನಂತರ ರಾಮ್‌ಕೀರ್ತಿ ಅವರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸೌರಭ್ ದ್ವಿವೇದಿ ಅವರ ಮುಂದೆ ಪುನರ್ ಪರಿಶೀಲನಾ ಮನವಿ ಸಲ್ಲಿಸಿದ್ದರು. ‘‘ಆಗಿನ ಜಿಲ್ಲಾ ದಂಡಾಧಿಕಾರಿ ಅಮಿತ್ ಘೋಷ್ ಅವರು ಈ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಯವರಿಂದ ತನಿಖೆ ನಡೆಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅವರು ಇಡೀ ಪ್ರಕರಣ ಸಂಶಯದಿಂದ ಕೂಡಿದೆ ಎಂಬುದನ್ನು ಪತ್ತೆ ಮಾಡಿದ್ದರು’’ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಪರಿಗಣಿಸಿದ ಸಿಜೆಎಂ ಅಭಾ ಪಾಲ್ ಅವರು ಪುನರ್ ಪರಿಶೀಲನಾ ಮನವಿ ಆಲಿಸಿದರು. ಅಲ್ಲದೆ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಜನವರಿ 28ರಂದು ಆದೇಶಿಸಿದರು ಎಂದು ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News