ಕೃಷಿ, ಗ್ರಾಮೀಣ ಬದುಕಿಗೆ ಬಜೆಟ್ ಸ್ಪಂದಿಸಲಿ

Update: 2022-02-21 08:04 GMT

ಕರ್ನಾಟಕದ ವಿವಿಧ ಭಾಗಗಳಲ್ಲಿ ಗ್ರಾಮೀಣ ಸಮುದಾಯಗಳೊಂದಿಗೆ ದಶಕಗಳಿಂದಲೂ ಕೆಲಸ ಮಾಡುತ್ತ್ತ ಬಂದಿರುವ 40ಕ್ಕೂ ಹೆಚ್ಚು ಸಂಘಟನೆಗಳನ್ನೊಳಗೊಂಡ ‘ನಮ್ಮೂರ ಭೂಮಿ ನಮಗಿರಲಿ’ ವೇದಿಕೆಯು ಕರ್ನಾಟಕದ ಈ ಸಾಲಿನ ಬಜೆಟ್‌ನಲ್ಲಿ ಗ್ರಾಮೀಣ ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಏನೇನಿರಬೇಕು ಎನ್ನುವ ಶಿಫಾರಸೊಂದನ್ನು ಮಾಡಿದ್ದು, ಅದನ್ನು ಬಜೆಟ್‌ನಲ್ಲಿ ಸೇರಿಸಲು ಸರಕಾರವನ್ನು ಒತ್ತಾಯಿಸಿದೆ.

 ಈ ಹಿಂದೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ನೆರವಾಗುತ್ತಿದ್ದ ಅನೇಕ ಉತ್ತಮ ಯೋಜನೆಗಳನ್ನು ಈಗ ಕೈಬಿಡಲಾಗಿದೆ. ಅವುಗಳಿಗೆ ಮರುಚಾಲನೆ ನೀಡಿ ಈ ವರ್ಷದ ಆಯವ್ಯಯದಲ್ಲಿ ಒಳಗೊಳ್ಳಿಸಬೇಕು. ಅವುಗಳೆಂದರೆ:

ಕೃಷಿ ಇಲಾಖೆ

ನೀರು ಮತ್ತು ಗೊಬ್ಬರಗಳ ಬಳಕೆಯ ದಕ್ಷತೆ ಹೆಚ್ಚಿಸಲು ಸಾಮರ್ಥ್ಯಾಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕಾಗಿ ರಾಜ್ಯಾದ್ಯಂತ 40 ಪ್ರಾತ್ಯಕ್ಷಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಉತ್ತಮ ಕೃಷಿ ಪದ್ಧತಿಗಳು, ನೂತನ ತಂತ್ರಜ್ಞಾನಗಳು ಮತ್ತು ಕೊಯ್ಲೋತ್ತರ ನಿರ್ವಹಣೆಗಳ ಬಗ್ಗೆ ಕೃಷಿಕರಿಗೆ ಪ್ರಾತ್ಯಕ್ಷಿಕೆ. ಆಹಾರ ಸಂಸ್ಕರಣಾ ವಲಯದ ಬಲವರ್ಧನೆ ಮತ್ತು ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಸಿಎಫ್‌ಟಿಆರ್‌ಐ, ಭಾ.ತೋ.ಸಂ.ಸಂ(ಐಐಎಚ್‌ಆರ್), ‘ಅಪಿಡ’ಗಳ ಸಹಭಾಗಿತ್ವದಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್‌ನಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಲು ಕೋಟಿ ರೂ. ವೆಚ್ಚದಲ್ಲಿ 2500 ಗ್ರಾಮಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ರೈತರಿಗೆ ಭೂ ಸಂಪನ್ಮೂಲಯಾದಿಯ ತರಬೇತಿ ನೀಡಿ ಕಾರ್ಡ್‌ಗಳನ್ನು ವಿತರಿಸಿಸುವುದು.

‘ಕೃಷಿ ಭಾಗ್ಯ’ ಯೋಜನೆಯಲ್ಲಿ ಕೃಷಿ ಹೊಂಡಗಳು. ಈ ಯೋಜನೆಯಲ್ಲಿ ಸಂರಕ್ಷಣಾ ನೀರಾವರಿಗಾಗಿ 2014ರಿಂದ 2017-18ರವರೆಗೆ 600 ಕೋಟಿ ಎತ್ತಿಡುತ್ತಿದ್ದು ನಂತರ ಇದನ್ನು ನಿಲ್ಲಿಸಲಾಗಿದೆ. ಈ ಅತ್ಯಂತ ಜನಪ್ರಿಯ ಯೋಜನೆಯನ್ನು ಪುನರ್ ಪ್ರಾರಂಭಿಸಬೇಕು. ಮತ್ತು ಎಲ್ಲಾ ಬಗೆಯ ರೈತರಿಗೂ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಬೇಕು.

ಈ ಹಿಂದೆ ಮಳೆಯಾಶ್ರಿತ ಕೃಷಿ ಮತ್ತು ರೈತರ ಒತ್ತಾಸೆಗಾಗಿ ಎತ್ತು-ಬಂಡಿ ಯೋಜನೆ ಮತ್ತು ಜಾನುವಾರು ಅಭಿವೃದ್ಧಿ ಒತ್ತಾಸೆಗೆ ಪಶು ಭಾಗ್ಯದಂತಹ ಉತ್ತಮ ಯೋಜನೆಗಳಿದ್ದು ಅವುಗಳನ್ನು ಈಗ ಕೈಬಿಡಲಾಗಿದೆ. ಈ ಯೋಜನೆಗಳನ್ನು ಮರಳಿ ತರಬೇಕು ಮತ್ತು ಮಳೆಯಾಶ್ರಿತ ಕೃಷಿಯ ಜೀವಾಳವಾದ ಎತ್ತುಗಳನ್ನು ಮತ್ತು ನಾಟಿ ಹಸುಗಳನ್ನು ಪಶುಭಾಗ್ಯ ಯೋಜನೆಯಲ್ಲಿ ಸೇರಿಸಬೇಕು.

ತೋಟಗಾರಿಕೆ ಇಲಾಖೆ

ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಕೃಷಿಗೆ ಒತ್ತು ಕೊಡಲು ರಾಸಾಯನಿಕಗಳ ಮೂಲಕ ಒದಗಿಸುವ ಪೌಷ್ಟಿಕಾಂಶವನ್ನು ಸಾವಯವದಲ್ಲಿ ಒದಗಿಸಲು ನೀರಿನಲ್ಲಿ ಕರಗುವಂತಹ ಗೊಬ್ಬರಗಳೂ, ಸೂಕ್ಷ್ಮ- ಪೌಷ್ಟಿಕಾಂಶಗಳು, ಹೈಡ್ರೋಜಲ್ ಇತ್ಯಾದಿಗಳಿಗೆ ನೆರವು ನೀಡಲು 200 ಕೋಟಿ ರೂ.ಗಳನ್ನು ಒದಗಿಸುವ ಯೋಜನೆಯನ್ನು ಮತ್ತೆ ತರಬೇಕು.

ರಾಜ್ಯದ ತೋಟಗಾರಿಕೆ ಬೆಳೆಗಳ ರೈತರ ಬೆನ್ನೆಲುಬಾಗಿರುವ ಹಾಪ್‌ಕಾಮ್ಸ್‌ಗಳಲ್ಲಿ ಉತ್ತಮ ಸೇವೆಯನ್ನು ಒದಗಿಸಲು ಮತ್ತು ವಿಸ್ತರಿಸಲು ಸಂಸ್ಥೆಯನ್ನು ಬಲಪಡಿಸುವ ಯೋಜನೆಯನ್ನು ಮರು ಪ್ರಾರಂಭ ಮಾಡಬೇಕು.

ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರಕಾರ ಖರೀದಿಸಿ ರೈತರಿಗೆ ನೆರವಾಗುತ್ತದೆ. ಕೇಂದ್ರ ಸರಕಾರದ ಅನುದಾನ ಬಿಡುಗಡೆ ವಿಳಂಬವಾದಾಗ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಅನುವಾಗುವಂತೆ ಸ್ಥಾಪಿಸಲಾಗಿರುವ ಆವರ್ತ ನಿಧಿಯ ಮೊತ್ತವನ್ನು ಅವಶ್ಯಕತೆಗೆ ಅನುಗುಣವಾಗಿ 2000 ಕೋಟಿ ರೂ.ಗಳವರೆಗೆ ಹೆಚ್ಚಿಸುವ ಯೋಜನೆಯನ್ನು ಕೈಬಿಟ್ಟಿದ್ದು ಅದನ್ನು ಪುನರ್ ಪ್ರಾರಂಭ ಮಾಡಬೇಕು.

ಕರ್ನಾಟಕದಲ್ಲಿ 75ಶೇ. ಸಣ್ಣ ಅತೀ ಸಣ್ಣ ರೈತರಿದ್ದು ಅವರು ಬಹುತೇಕ ಮಳೆಯಾಶ್ರಿತ ರೈತರೇ ಆಗಿದ್ದಾರೆ. ಇಂತಹ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಯಾಗಲು ಬಯಸಿದ್ದಲ್ಲಿ ಅಂತಹವರಿಗೆ ಪ್ರತಿ ಹೆಕ್ಟೇರಿಗೆ ಐದು ಸಾವಿರದಂತೆ ಗರಿಷ್ಠ ಹತ್ತು ಸಾವಿರ ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸುವ ಯೋಜನೆಯನ್ನು ಕೈಬಿಡಲಾಗಿದೆ. ಈ ಉತ್ತಮ ಯೋಜನೆಗೆ ಮರುಚಾಲನೆ ಕೊಟ್ಟು ಪ್ರಸ್ತುತ ಸೂಕ್ತ ಮೊತ್ತ ಎತ್ತ್ತರಿಸಬೇಕು. ಕನಿಷ್ಠ ನೀರಾವರಿ ಬಯಸುವ ಉತ್ತಮ ಗುಣಮಟ್ಟದ ವಿವಿಧ ಹಣ್ಣಿನ ಸಸಿಗಳನ್ನು ಈ ರೈತರಿಗೂ ಸಬ್ಸಿಡಿ ದರದಲ್ಲಿ ಒದಗಿಸಲು ಬೇಕಾದ ಮೊತ್ತವನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು.

ಒಳನಾಡು ಮೀನುಗಾರಿಕೆಯಲ್ಲಿ ಮಹಿಳಾ ಮೀನುಗಾರರಿಗೆ ಮೀನು ಮಾರಾಟಕ್ಕೆ ಒತ್ತಾಸೆಯಾಗಿ ‘ಮಹಿಳಾ ಮೀನುಗಾರ ಸಬಲೀಕರಣ ಯೋಜನೆ’ಯಲ್ಲಿ ದ್ವಿಚಕ್ರ ವಾಹನಗಳನ್ನು ನೀಡಲು 5 ಕೋಟಿ ರೂ.ಗಳನ್ನು ಎತ್ತಿಡಲಾಗಿತ್ತು. ಅದನ್ನು ಕೈಬಿಡಲಾಗಿದ್ದು ಪ್ರಸ್ತುತ ಬಜೆಟ್‌ನಲ್ಲಿ ಮತ್ತೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.

ಈ ವರ್ಷದ ಆಯವ್ಯಯದಲ್ಲಿ ಹೊಸದಾಗಿ ಸೇರಿಸಲು ಶಿಫಾರಸು ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು

ಮಹಿಳಾ ರೈತರ ಉದ್ಯಮಶೀಲತೆ:

 ಕರ್ನಾಟಕದ ವಿವಿಧ ಕೃಷಿ ವಲಯಗಳಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದು, ಮಹಿಳೆಯರಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಕುಶಲತೆ ಮತ್ತು ಉದ್ಯಮಶೀಲತೆ ಬೆಳೆಸಲು ಸಹಾಯಧನಕ್ಕಾಗಿ ಸೂಕ್ತ ಮೊತ್ತವನ್ನು ಎತ್ತಿಡಬೇಕು. ಇಲ್ಲಿ ಸೀಗೇಕಾಯಿ, ಬಿದಿರು ಮುಂತಾದ ಸ್ಥಳೀಯ ಉತ್ಪನ್ನಗಳಿಗೂ ಒತ್ತು ಕೊಡಬೇಕು.

ರೈತರ ಸಂತೆಗಳು:

 ರೈತರ ಸಂತೆಗಳ ಬಗ್ಗೆ ಒಲವು ಹೆಚ್ಚಾಗುತ್ತಿದೆ. ರಾಜ್ಯ ಹೆದ್ದಾರಿಗಳನ್ನೂ ಒಳಗೊಂಡಂತೆ ರೈತರು ಅಲ್ಲಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಕೆಲವು ಸಂತೆಯ ಸ್ವರೂಪ ಪಡೆದುಕೊಳ್ಳುತ್ತಿವೆ. ಪ್ರಾರಂಭಕ್ಕೆ ರಾಜ್ಯದ ವಿವಿಧೆಡೆಗಳಲ್ಲಿ ಇಂತಹ ನೂರು ರೈತರ ಸಂತೆಗಳಿಗೆ ಸ್ಥಳಗಳನ್ನು ಗುರುತಿಸಿ ಅಲ್ಲಿ ಕುಡಿಯುವ ನೀರು, ಶೌಚಾಲಯಗಳನ್ನು ಒಳಗೊಂಡಂತೆ ಕನಿಷ್ಠ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ ಸೂಕ್ತ ಮೊತ್ತ ಎತ್ತಿಡಬೇಕು. ಬೆಲೆ ಸ್ಥಿರೀಕರಣ ಮೊತ್ತ: ಒಮ್ಮೆಗೇ ಕಟಾವಿಗೆ ಬರುವ ಟೊಮ್ಯಾಟೊ, ಈರುಳ್ಳಿ, ಆಲೂಗೆಡ್ಡೆ (TOP)ಗಳ ಬೆಲೆ ಸ್ಥಿರೀಕರಣಕ್ಕೆ ಸೂಕ್ತ ಮೊತ್ತವನ್ನು ಎತ್ತಿಡಬೇಕು. ಇವುಗಳಂತೆಯೇ ಒಮ್ಮೆಗೇ ಕಟಾವಿಗೆ ಬರುವ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಈ ಪಟ್ಟಿಯಲ್ಲಿ ಸೇರಿಸಬೇಕು.

ರೈತ ಉತ್ಪಾದಕ ಸಂಸ್ಥೆಗಳು(FPO) : ಈಗ ಹಲವಾರು ಇಲಾಖೆಗಳ ಮೂಲಕ ರಚನೆಯಾಗುತ್ತಿದ್ದು ಅವುಗಳಲ್ಲಿ ಸಹಕಾರಿ ಸ್ಪರ್ಧಾತ್ಮಕತೆ ಮತ್ತು ಏಕರೂಪತೆ ತರಲು ಕೆಎಂಎಫ್ ಮಾದರಿಯಲ್ಲಿ ಎಫ್‌ಪಿಒಗಳ ಒಕ್ಕೂಟ ರಚನೆ ಮಾಡಬೇಕು. ಮತ್ತು ಉತ್ಪನ್ನಗಳ ಏಕರೂಪದ ಗುಣಮಟ್ಟ ಮನದಂಡ ಮತ್ತು ಮಾರುಕಟ್ಟೆ ಕೌಶಲ್ಯಾಭಿವೃದ್ಧಿ, ಬ್ರಾಂಡಿಂಗ್ ಇತ್ಯಾದಿಗಳಿಗೆ ಸೂಕ್ತ ಮೊತ್ತವನ್ನು ಈ ಬಜೆಟ್‌ನಲ್ಲಿ ಎತ್ತಿಡಬೇಕು.

ನೇರ ನಗದು ಬೆಂಬಲ:

 ಕೋವಿಡ್‌ನ ಬವಣೆಯಲ್ಲಿ ಬೆಂದು ಬಸವಳಿದಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರ ಪ್ರತಿ ಕುಟುಂಬಕ್ಕೆ ಕನಿಷ್ಠ ಹತ್ತು ಸಾವಿರ ರೂಪಾಯಿಗಳ ನೇರ ನಗದು ಬೆಂಬಲವನ್ನು ಸರಕಾರ ಈಗಿಂದೀಗಲೇ ಘೋಷಿಸಿ ಅದಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿಡಬೇಕು.

ಪರಿಹಾರ ಧನ: ಕಳೆದ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಅತಿವೃಷ್ಟಿ ಮತ್ತು ವಿದ್ವಂಸಕ ರೋಗ-ಕೀಟ ಬಾಧೆಯಿಂದ ರಾಜ್ಯದಲ್ಲಿ ಇಪ್ಪತ್ತರಿಂದ ಮುವ್ವತ್ತು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆನಾಶವಾಗಿದೆ. ಈ ಬಹುಪಾಲು ರೈತರಿಗೆ ಸರಕಾರ ಘೋಷಿಸಿದ ಬೆಳೆ ಪರಿಹಾರ ಸಿಕ್ಕಿಲ್ಲ. ಬೆಳೆಹಾನಿಯ ಜೊತೆಗೆ ರೈತರ ಜಮೀನಿಗೆ ಉಂಟಾದ ಹಾನಿಯನ್ನು ವೈಜ್ಞಾನಿಕವಾಗಿ ಅಂದಾಜು ಮಾಡಿ ರೈತರು ಚೇತರಿಸಿಕೊಂಡು ಮತ್ತೆ ಕೃಷಿಯಲ್ಲಿ ತೊಡಗಲು ಅಗತ್ಯವಾದ ಒತ್ತಾಸೆ ನೀಡಲು ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿಡಬೇಕು. ಹಾನಿಯ ಪ್ರಮಾಣವನ್ನು ಕಂಡುಹಿಡಿದು ಅದಕ್ಕೆ ನೀಡಬೇಕಾದ ಪರಿಹಾರವನ್ನು ನಿರ್ಧರಿಸುವ ಹೊಣೆಯನ್ನು ಪಂಚಾಯತ್‌ಗಳಿಗೆ ವಹಿಸಿಕೊಡಬೇಕು.

ಮಳೆಯಾಶ್ರಿತ ಕೃಷಿಗೆ ಬೀಜಗಳು: 

 ಮಳೆಯಾಶ್ರಿತ ಕೃಷಿ ಉಳಿದುಕೊಂಡು ಬಂದಿರುವುದೇ ಬಹುಬೆಳೆ/ಮಿಶ್ರಬೆಳೆ ಪದ್ಧತಿಯಿಂದ. ಮಳೆಯಾಶ್ರಿತ ಕೃಷಿಯಲ್ಲಿ ಬಳಸುತ್ತಿದ್ದ ಬಹುತೇಕ ಬೀಜಗಳು ನಾಶವಾಗಿ ಬಿಟಿ ಹತ್ತಿ, ಮೆಕ್ಕೆ ಜೋಳದಂತಹ ಬಹುರಾಷ್ಟ್ರೀಯ ಕಂಪೆನಿ ಬೀಜಗಳು ಆಕ್ರಮಿಸಿಕೊಂಡಿರುವುದೇ ಮಳೆಯಾಶ್ರಿತ ಕೃಷಿ ನೆಲಕಚ್ಚಲು ಮತ್ತು ಆಹಾರ-ಪೌಷ್ಟಿಕತೆ ಭದ್ರತೆ ಹಾಳಾಗಲು ಮುಖ್ಯ ಕಾರಣ. ಮಳೆಯಾಶ್ರಿತ ಕೃಷಿಗೆ ಹೊಂದುವಂತಹ ಏಕದಳ, ದ್ವಿದಳ, ಎಣ್ಣೆ ಕಾಳುಗಳು, ಸಾಂಬಾರು ಪದಾರ್ಥಗಳ ಬೀಜಗಳನ್ನು ಅಭಿವೃದ್ಧಿ ಪಡಿಸುವುದನ್ನು ನಿಲ್ಲಿಸಿರುವ ಕೃಷಿ ವಿ.ವಿಗಳಿಗೆ ಅವುಗಳನ್ನು ಅಭಿವೃದ್ಧಿಪಡಿಸುವ ಹೊಣೆ ಹೊರೆಸಿ ಅದಕ್ಕಾಗಿ ಸೂಕ್ತ ಮೊತ್ತ ಎತ್ತಿಡಬೇಕು. ಮತ್ತು ರೈತರಿಗೆ ವಿವಿಧ ಹಂಗಾಮುಗಳಿಗೆ ತಕ್ಕಂತೆ ವೈವಿಧ್ಯಮಯ ಬೀಜಗಳನ್ನು ಸಕಾಲದಲ್ಲಿ ಕನಿಷ್ಠ 50ಶೇ. ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲು ಈ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿಡಬೇಕು.

ರಾಗಿ-ಜೋಳ ಖರೀದಿ: ರಾಗಿ-ಜೋಳಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಪಡಿತರದಲ್ಲಿ ವಿತರಣೆ ಮಾಡುವ ಅತ್ಯುತ್ತಮ ಕಾರ್ಯಕ್ರಮಕ್ಕೆ ಅನೇಕ ತೊಡಕುಗಳಿವೆ. ಕಲ್ಲು-ಮಣ್ಣು ಮಿಶ್ರಿತ ಕಳಪೆ ರಾಗಿಯನ್ನು ಪಡಿತರದಾರರು ಇಷ್ಟಪಡದೇ ಸ್ವಚ್ಚವಾದ ರಾಗಿಯನ್ನು ಬಯಸುತ್ತಿರುವುದು ಈ ಯೋಜನೆಯ ಜನಪ್ರಿಯತೆಯನ್ನು ಕುಗ್ಗಿಸಿದೆ. ಪ್ರತೀ ರಾಗಿ ಖರೀದಿ ಕೇಂದ್ರದಲ್ಲೂ ಡೀ-ಸ್ಟೋನಿಂಗ್/ರಾಗಿ ಕ್ಲೀನಿಂಗ್ ಯಂತ್ರಗಳನ್ನು ಸ್ಥಾಪಿಸಿ ರೈತರಿಂದ ಖರೀದಿಸಿದ ರಾಗಿಯನ್ನು ಸ್ವಚ್ಚಗೊಳಿಸಿ ಪಡಿತರದಲ್ಲಿ ಹಂಚಿದಾಗ ರೈತರಿಗೂ-ಪಡಿತರದಾರರಿಗೂ ತುಂಬಾ ಸಹಾಯವಾಗುತ್ತದೆ. ಈ ಯಂತ್ರಗಳಿಗೆ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿರಿಸಬೇಕು.

ಸಿರಿಧಾನ್ಯ:

 ಕೇಂದ್ರ ಬಜೆಟ್‌ನಲ್ಲಿ ಸಿರಿಧಾನ್ಯ ಉತ್ತೇಜಿಸಲು ಒತ್ತು ಕೊಟ್ಟಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಆ ಸಂಬಂಧದ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದರಲ್ಲಿ ಉತ್ಪಾದನೆ ಹೆಚ್ಚಳ, ಪ್ರದೇಶ ವಿಸ್ತರಣೆ, ಬೀಜ, ಮೌಲ್ಯವರ್ಧನೆಗಳಿಗೆ ಒತ್ತುಕೊಡಲಾಗುತ್ತಿದ್ದು ಪ್ರೋತ್ಸಾಹ ಬೆಲೆ ಮತ್ತು ಖರೀದಿಯ ಪ್ರಸ್ತಾಪ ಇರುವುದಿಲ್ಲ. ಈ ಯೋಜನೆ ಯಶಸ್ವಿಯಾಗಬೇಕಾದರೆ ಸರಕಾರ ಬಜೆಟ್‌ನಲ್ಲಿ ಸಿರಿಧಾನ್ಯಗಳ ಪ್ರೋತ್ಸಾಹ ಬೆಲೆಯಲ್ಲಿ ಖರೀದಿಸಲು ಸೂಕ್ತ ಮೊತ್ತವನ್ನು ಎತ್ತಿ ಇಡಬೇಕು.

ರೈತರ ಸಾಲದ ಹೊರೆ:    

 ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಮೇಲೂ ಸಾಲ ಇದ್ದು ಅದರಲ್ಲಿ 50ಶೇ. ರೈತ ಕುಟುಂಬಗಳು ತಾಳಲಾರದ ಸಾಲಬಾಧೆಯಲ್ಲಿವೆ. ಪ್ರತಿ ಕುಟುಂಬ ಸರಾಸರಿ 1.5 ಲಕ್ಷ ಸಾಲ ಹೊತ್ತಿದ್ದು ಇದರಲ್ಲಿ ಖಾಸಗಿಯವರಿಂದ ಪಡೆದ ಸಾಲ ಸೇರ್ಪಡೆಯಾಗಿಲ್ಲ ಎಂದು ‘ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್(ಎನ್‌ಎಸ್‌ಒ)’ ಹೇಳುತ್ತದೆ. ಖಾತ್ರಿಯಾದ ಆದಾಯ ಇಲ್ಲದೆ ಬಹುತೇಕ ನಷ್ಟದಲ್ಲೇ ಮುಳುಗಿರುವ ರೈತರನ್ನು ಈ ಸಾಲಬಾಧೆಯಿಂದ ಮುಕ್ತಗೊಳಿಸಲು ಅವರ ಸಾಲಮನ್ನಾಕ್ಕಾಗಿ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿಡಬೇಕು.

ಸಾವಯವ -ಸಹಜ ಕೃಷಿ: ದೇಶದಲ್ಲೇ ಮೊಟ್ಟಮೊದಲ ಸಾವಯವ ಕೃಷಿ ನೀತಿಯನ್ನು ತಂದ ಹೆಗ್ಗಳಿಕೆ ಹೊಂದಿದ ಕರ್ನಾಟಕ ಸರಕಾರ 2004ರಿಂದಲೂ ಸಾವಯವ- ಸಹಜ ಕೃಷಿಗೆ ಒತ್ತುಕೊಡುತ್ತಾ ಬಂದಿದೆ. ಮೊದಲಿಗೆ ‘ಸಾವಯವ ಭಾಗ್ಯ(ಗ್ರಾಮ)’, ನಂತರ ‘ಸಾವಯವ ಪರಿವಾರಗಳು’, ನಂತರ ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ ಹೀಗೆ ವಿವಿಧ ಹೆಸರುಗಳಲ್ಲಿ ಇದು ನಡೆಯುತ್ತಾ ಬಂದಿದೆ. ಸರಕಾರದ ಸಾವಯವ -ಸಹಜ ಕೃಷಿ ಕಾರ್ಯಕ್ರಮ 17 ವರ್ಷಗಳನ್ನು ಪೂರೈಸಿರುವಾಗ ಇದರ ಒಂದು ಆಮೂಲಾಗ್ರ ವಸ್ತುನಿಷ್ಠ ಮೌಲ್ಯಮಾಪನ ನಡೆಸಲು ಇದು ಸಕಾಲವಾಗಿರುತ್ತದೆ. ಕರ್ನಾಟಕದ ಕೃಷಿಯ ಜೀವಾಳವಾಗಿರುವ ಸಾವಯವ-ಸಹಜ ಕೃಷಿಗೆ ಈ ಸಾಲಿನ ಬಜೆಟ್‌ನಲ್ಲಿ ಇಂತಿಷ್ಟೆಂದು ಮೊತ್ತ ಎತ್ತಿಡುವ ಮೊದಲು ಇದರ ಮೌಲ್ಯಮಾಪನ ನಡೆಸಲು ಒತ್ತಾಯಿಸುತ್ತೇವೆ.

ಗ್ರಾಮೀಣ ಬದುಕು

ಬಗರ್ ಹುಕುಂ ಭೂಮಿಯ ಮಂಜೂರು: ಕರ್ನಾಟಕದಲ್ಲಿ 47ಶೇ. ಭೂರಹಿತರಿರುವುದಾಗಿ 2011ರ ಎನ್‌ಎಸ್‌ಎಸ್ ಡಾಟಾ ಹೇಳುತ್ತದೆ. ಈಗಾಗಲೇ ಫಾರಂ 51, 53, 57ಗಳ ಅಡಿಯಲ್ಲಿ ಅರ್ಜಿಗಳನ್ನು ಹಾಕಿ 10ರಿಂದ 50 ವರ್ಷಗಳಿಂದಲೂ ಕಾಯುತ್ತಿರುವ 10 ಲಕ್ಷಕ್ಕೂ ಹೆಚ್ಚು ಜನರಿಗೆ ತುರ್ತಾಗಿ ಭೂಮಿ ಮಂಜೂರು ಮಾಡಿ, ಉತ್ಪಾದನಾದಾಯಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ಎಕರೆಗೆ 10,000 ರೂ.ಗಳ ಪ್ರೋತ್ಸಾಹ ನೀಡಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಸೂಕ್ತ ಮೊತ್ತ ಎತ್ತಿರಿಸಬೇಕು.

ವಸತಿ: ಗ್ರಾಮೀಣ ಭಾಗದಲ್ಲಿ ನಿವೇಶನಕ್ಕಾಗಿ 94 ಮತ್ತು 94 ಸಿ ಅಡಿಯಲ್ಲಿ ಅರ್ಜಿಗಳನ್ನು ಹಾಕಿ ಕಾಯುತ್ತಿರುವ ಜನರಿಗೆ ತಕ್ಷಣ ನಿವೇಶನ ಮಂಜೂರು ಮಾಡಬೇಕು. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ ಯೋಜನೆಯಡಿ 2.02 ಕೋಟಿ ಮನೆಗಳನ್ನು 2022ರ ಆಗಸ್ಟ್ ಒಳಗೆ ಕಟ್ಟಿಕೊಡಬೇಕಾಗಿದ್ದು ಈ ಬಜೆಟ್‌ನಲ್ಲಿ ಅದಕ್ಕೆ ಸೂಕ್ತ ಮೊತ್ತವನ್ನು ಎತ್ತಿಡಬೇಕು.

ಉದ್ಯೋಗಖಾತ್ರಿ ಪ್ರೋತ್ಸಾಹಕ್ಕಾಗಿ ರಾಜ್ಯ ಸರಕಾರದ ಮಧ್ಯಪ್ರವೇಶ: ಉದ್ಯೋಗ ಖಾತ್ರಿಯಲ್ಲಿ ಕೇಂದ್ರ ಸರಕಾರದಿಂದ ಕೂಲಿಕಾರರ ಖಾತೆಗೆ ಪಾವತಿಯಾಗಬೇಕಾದ ಹಣದಲ್ಲಿ ಪ್ರತಿ ವರ್ಷವೂ ಕೊರತೆಯುಂಟಾಗಿ ಕೆಲಸಗಾರರು 3-4 ತಿಂಗಳು ಕಾಯಬೇಕಾಗುತ್ತದೆ. ಹಿಂದೆಲ್ಲಾ ಕೂಲಿ ಪಾವತಿ ತಡವಾದಾಗಲೆಲ್ಲ ರಾಜ್ಯ ಸರಕಾರವು ಕೂಲಿ ಕೊಟ್ಟು ಜನರನ್ನು ಕಾಪಾಡಿದೆ. ಈ ವರ್ಷವೂ ಕೂಡ ಉದ್ಯೋಗ ಖಾತ್ರಿಗಾಗಿ ಮುಂಗಡ ಹಣವನ್ನು ಎತ್ತಿಟ್ಟು ಕೂಲಿಕಾರರನ್ನು ಕಾಪಾಡಬೇಕು.

ಸಾಮಾಜಿಕ ಭದ್ರತೆ: ಬಡವರು, ದಲಿತರು, ವಿಧವೆಯರು, ವೃದ್ಧರು ಆಹಾರದ ಕೊರತೆಯಿಂದ ದೀನರಾಗಿ ಬದುಕುವಂತಾಗಬಾರದೆಂದು ಸರಕಾರವು ಸಾಮಾಜಿಕ ಭದ್ರತಾ ಯೋಜನೆಗಳನ್ನು ನಡೆಸುತ್ತಿದೆ. ಆದರೆ ಈ ಮೂಲಧ್ಯೇಯವೇ ಮಾಯವಾಗಿ ಭಿಕ್ಷುಕರಂತೆ ಭತ್ತೆಗಾಗಿ ಅಲೆಯುವ ಪ್ರಸಂಗ ಇಲ್ಲಿದೆ. ಪ್ರತಿ ತಿಂಗಳೂ ತಪ್ಪದೆ ಈ ಜನರಿಗೆ ವೇತನವು ಬರುವ ಜೊತೆಗೆ ಬೆಲೆಯೇರಿಕೆಗೆ ತಕ್ಕಂತೆ ಪಿಂಚಣಿಯ ಏರಿಕೆಯೂ ಆಗಬೇಕು. ಕೇಂದ್ರ ಸರಕಾರ ಈ ಯಾವುದೇ ಸಾಮಾಜಿಕ ಭದ್ರತಾ ಕಾರ್ಯಕ್ರಮಕ್ಕೆ 200 ರೂ.ಗಿಂತ ಹೆಚ್ಚಿಗೆ ಸಹಾಯಧನ ಇಟ್ಟಿಲ್ಲವಾದ್ದರಿಂದ ಉಳಿದಷ್ಟೂ ಹಣವನ್ನು ಮೀಸಲಿರಿಸುವ ಜವಾಬ್ದಾರಿ ರಾಜ್ಯ ಸರಕಾರದ್ದಾಗುತ್ತದೆ. ಕನಿಷ್ಠ ಕೂಲಿಯ ಅರ್ಧದಷ್ಟು ಎಂಬ ತತ್ವದ ಆಧಾರದ ಮೇಲೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಕನಿಷ್ಠ 7500ರೂ. ಹಣವನ್ನು ಯಾವುದೇ ಪಿಂಚಣಿದಾರರ ವೇತನಕ್ಕಾಗಿ ಮೀಸಲಿರಿಸಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಸೂಕ್ತ ಮೊತ್ತ ಎತ್ತಿಡಬೇಕು.

ಆಹಾರ ಭದ್ರತೆ: ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ರಾಗಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಪಡಿತರದಲ್ಲಿ ಜೋಳವನ್ನು ಕೊಡುವ ತಿರ್ಮಾನದಂತೆ ಬೆಂಬಲ ಬೆಲೆಯಲ್ಲಿ ಈ ಧಾನ್ಯಗಳನ್ನು ಖರೀದಿಸಲಾಗುತ್ತಿದೆ. ಆದರೆ ಇದು ಕೆಲವೇ ಕೆಲವು ತಿಂಗಳುಗಳು ಹಂಚಿಕೆಯಾಗುತ್ತಿವೆ. ಎಲ್ಲಾ ಕಾರ್ಡ್‌ದಾರರಿಗೆ ವರ್ಷದ 12 ತಿಂಗಳೂ ಕೊಡುವಷ್ಟು ರಾಗಿ-ಜೋಳಗಳನ್ನು ಸರಕಾರ ಖಡ್ಡಾಯವಾಗಿ ಖರೀದಿಸಬೇಕು. ಹಾಗೆಯೇ ಹಿಂದೆ ಕೊಡುತ್ತಿದ್ದಂತೆ ತೊಗರಿಬೇಳೆ ಮತ್ತು ಅಡುಗೆ ಎಣ್ಣೆಗಳ ವಿತರಣೆಯನ್ನು ಪ್ರಾರಂಭಿಸಬೇಕು. ಅದಕ್ಕಾಗಿ ಸೂಕ್ತ ಮೊತ್ತವನ್ನು ಬಜೆಟ್‌ನಲ್ಲಿ ಎತ್ತಿಡಬೇಕು. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಕೊಡುವುದನ್ನು ರಾಜ್ಯವು ಮತ್ತೆ ನಾಲ್ಕು ಜಿಲ್ಲೆಗಳಿಗೆ ವಿಸ್ತರಿಸಿರುವುದು ಶ್ಲಾಘನೀಯ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಬೇಕಾಗುವ ಮೊತ್ತವನ್ನು ಬಜೆಟ್‌ನಲ್ಲಿ ಎತ್ತಿಡಬೇಕು.

ಮಾತೃತ್ವ ಸಹಯೋಗ: ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟದೊಂದಿಗೆ ಹೆರಿಗೆ ಭತ್ತೆಗಳನ್ನು ನೀಡುವುದು ಅತ್ಯಂತ ಗೌರವಪೂರ್ಣವಾದ ಕಾರ್ಯಕ್ರಮ. ಆದರದು ಕಡಿಮೆ ಬಜೆಟ್ ಕಾರಣಕ್ಕೆ ಬಹುತೇಕ ಮಹಿಳೆಯರಿಗೆ ದಕ್ಕುವುದಿಲ್ಲ. ತಾಯಿಕಾರ್ಡು ಮಾಡಿಸಿದ್ದಾಗಲೂ ಜನನಿ ಸುರಕ್ಷಾ ಮತ್ತು ಹೆರಿಗೆ ಭತ್ಯೆಗಳು ಖಾತೆಗೆ ಜಮಾ ಆಗದ ಲಕ್ಷಾಂತರ ಕೇಸುಗಳಿವೆ. ಮಹಿಳೆಯರ ಘನತೆಯ ಬದುಕಿಗಾಗಿ ಜನನಿ ಸುರಕ್ಷಾ, ಹೆರಿಗೆ ಭತ್ಯೆ, ಅಂಗನವಾಡಿಯಲ್ಲಿ ಮಧ್ಯಾಹ್ನದ ಭೋಜನ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಎಲ್ಲವೂ ಪೂರ್ಣವಾಗಿ ಸಿಗಲೇಬೇಕು. ಇದಕ್ಕಾಗಿ ಸಾಕಷ್ಟು ಮೊತ್ತವನ್ನು ಕಾಯ್ದಿರಿಸಬೇಕು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪಶು ವೈದ್ಯ ಆಸ್ಪತ್ರೆಗಳು:  

ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಸುಮಾರು 50 ಪಿಎಚ್‌ಸಿಗಳು ಮತ್ತು ಅಷ್ಟೇ ಸಂಖ್ಯೆಯ ಪಶುವೈದ್ಯ ಆಸ್ಪತ್ರೆಗಳಿವೆ. ಜನ ದೂರದ ಹಳ್ಳಿಗಳಿಂದ ಬಹುದೂರ ಪ್ರಯಾಣಿಸಿ ಇಲ್ಲಿಗೆ ಬರಬೇಕು. ಅದನ್ನು ತಪ್ಪಿಸಿ ಜನರಿಗೆ 2-3 ಕಿ.ಮೀ ಆಸುಪಾಸಿನಲ್ಲಿ ತಮಗೆ ಮತ್ತು ತಮ್ಮ ರಾಸುಗಳಿಗೆ ವೈದ್ಯಕೀಯ ಸೇವೆ ಸಿಗುವಂತೆ ಸರಕಾರ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಸೂಕ್ತ ಮೊತ್ತವನ್ನು ಎತ್ತಿಡಬೇಕು. ರಾಜ್ಯದ ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಬೇಕಾಗುವ ಔಷಧಗಳನ್ನು ಖರೀದಿ ಮಾಡಿ ಸರಬರಾಜು ಮಾಡುವ ‘ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಎಂಡ್ ವೇರ್ ಹೌಸ್ ಸೊಸೈಟಿ’ಗೆ ಸಾಕಷ್ಟು ಮೊತ್ತವನ್ನು ಇರಿಸಬೇಕು ಮತ್ತು ಅದಕ್ಕೆ ಯಾವುದೇ ರಾಜಕೀಯ ಮಧ್ಯಪ್ರವೇಶವಿಲ್ಲದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಐಎಎಸ್ ಅಧಿಕಾರಿಯ ನೇಮಕ ಆಗಬೇಕು. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಕನಿಷ್ಠ ಒಬ್ಬರು ವೈದ್ಯ, ಸಾಕಷ್ಟು ಔಷಧಗಳ ಸರಬರಾಜು, ಕನಿಷ್ಠ ಸೌಲಭ್ಯಗಳು ಇರಲು ಬೇಕಾಗುವ ಬಜೆಟ್ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News