ಸಂತ ರವಿದಾಸ ಎಂಬ ಉತ್ತರ ಭಾರತದ ಬಸವಣ್ಣ

Update: 2022-02-21 11:57 GMT

ಗುರು ರವಿದಾಸರು ಒಬ್ಬ ಸಮಾಜ ಸುಧಾರಕ ಸಂತರಾಗಿದ್ದರು. ಅವರಿಗೆ ಭಕ್ತಿಗಿಂತಲೂ ಸಮಾಜ ಸುಧಾರಣೆ ಮುಖ್ಯವೆನಿಸಿತ್ತು. ಭಕ್ತಿ ಮಾರ್ಗದ ಮೂಲಕ ಸಮಾಜ ಬದಲಾವಣೆಯ ಆಶಯವನ್ನು ಅವರು ಹೊಂದಿದ್ದರು.

ಐದು ಸಾವಿರ ವರ್ಷಗಳಿಂದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಉಸಿರು ಗಟ್ಟಿಸುವ ವಾತಾವರಣದಲ್ಲಿ ನಲುಗಿದ ಭಾರತ ಮತ್ತೆ ಅಡ್ಡಹಾದಿ ಹಿಡಿದ ದಿನಗಳಿವು. ಧರ್ಮದ ಹೆಸರಿನಲ್ಲಿ ಮತ್ತೆ ವರ್ಣಾಶ್ರಮ ಪದ್ಧತಿಯನ್ನು ಹೇರುವ ಮಸಲತ್ತು ನಡೆದಿರುವ ಈ ದಿನಗಳಲ್ಲಿ ಬಾಬಾಸಾಹೇಬರ ಸಂವಿಧಾನ ಮತ್ತು ತ್ರಿವರ್ಣ ರಾಷ್ಟ್ರ ಧ್ವಜಗಳ ಮೇಲೆ ಬಹಿರಂಗವಾಗಿ ಮತ್ತು ಅಂತರಂಗದಲ್ಲಿ ದಾಳಿಗಳು ನಡೆದಿವೆ. ಇಂಥ ಸಂಕಟದ ಸನ್ನಿವೇಶದಲ್ಲಿ ಬಸವಣ್ಣ, ತುಕಾರಾಮ, ಜ್ಞಾನೇಶ್ವರ, ಕಬೀರರಂಥವರು ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ. ಈ ಸಾಲಿನಲ್ಲಿ ಹೆಚ್ಚು ಬೆಳಕಿಗೆ ಬಾರದ ಹೆಸರು ಸಂತ ಗುರು ರವಿದಾಸ ಅವರದ್ದು.

ಅಸಮಾನತೆಯ ಕೆಟ್ಟ ವ್ಯವಸ್ಥೆಯ ಜೊತೆ ಜೊತೆಗೆ ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕೆಂಬ ಸಂದೇಶ ಸಾರಿದ ಅದಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹಾನ್ ಸುಧಾರಕರು ಕೂಡ ಈ ನೆಲದಲ್ಲಿ ಆಗಿ ಹೋಗಿದ್ದಾರೆ. ಬಸವಣ್ಣನವರಂತೆ ಶ್ರೇಣೀಕೃತ ವ್ಯವಸ್ಥೆಯ ಮೇಲ್ತುದಿಯಿಂದ ಕೆಳಗಿಳಿದು ಬಂದು ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಂಡವರು ಒಂದೆಡೆ ಇದ್ದಾರೆ. ಅದೇ ರೀತಿ ಸಮಾಜದ ತಳ ಸಮುದಾಯಗಳಿಂದ ಮೇಲೆದ್ದು ಬಂದು ವಿವೇಕದ ಬೆಳಕನ್ನು ನೀಡಿದವರೂ ಇದ್ದಾರೆ. ಭಕ್ತಿಪಂಥದಲ್ಲಿ ಎಲ್ಲರೂ ಸಮಾನರಾಗಿದ್ದರೂ ತಳ ಸಮುದಾಯದಿಂದ ಬಂದ ಸಂತರಿಗೆ, ಶರಣರಿಗೆ, ಗುರುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಿಲ್ಲ.

ಇಂಥ ತುಳಿತಕ್ಕೊಳಗಾದ ಸಮುದಾಯದಿಂದ ಬಂದವರು ಗುರು ರವಿದಾಸ.

ಅದೇನೇ ಇರಲಿ, ಬಸವಣ್ಣನವರಂತೆ ಜಾತಿಶ್ರೇಷ್ಠತೆಯ ತಾರತಮ್ಯ ವಿರೋಧಿಸಿದ ಗುರು ರವಿದಾಸರಂಥವರ ಬಗ್ಗೆ ಇನ್ನಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಿದೆ.

ಇತ್ತೀಚೆಗೆ ಉತ್ತರ ಭಾರತದಲ್ಲಿ ಸಂತ ರವಿದಾಸ ಜಯಂತಿಯನ್ನು ವ್ಯಾಪಕವಾಗಿ ಆಚರಿಸಲಾಯಿತು. ರಾಜಕಾರಣಿಗಳು ರವಿದಾಸರ ಜಯಂತಿಯ ಸಂದೇಶಗಳನ್ನು ನೀಡಿದರು.

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರವಿದಾಸರ ನೆನಪು ಮಾಡಿಕೊಳ್ಳುವುದು ರಾಜಕಾರಣಿಗಳಿಗೆ ಅನಿವಾರ್ಯವಾಗಿತ್ತು.

ಗುರು ರವಿದಾಸ ಅವರು ಕಾಶಿ ಹತ್ತಿರದ ಗೋವರ್ಧನಪುರಿ ಎಂಬಲ್ಲಿ 1368ರ ಫೆಬ್ರವರಿ 15ರಂದು ಚಮ್ಮಾರ ಮನೆತನದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಜನನ ವರ್ಷದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿದ್ದರೂ ರವಿದಾಸರ ಭಕ್ತರ ನಂಬಿಕೆಯ ಪ್ರಕಾರ, ರವಿದಾಸ 1376ರಲ್ಲಿ ಜನಿಸಿದರು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.

ಕಬೀರ, ಸಂತ ತುಕಾರಾಮ, ನಾಮದೇವರಂತೆ ರವಿದಾಸ ಅವರು ಕೂಡ ತಳ ಸಮುದಾಯದಿಂದ ಬಂದು ಭಕ್ತಿ ಮಾರ್ಗದಲ್ಲಿ ಸಾಗಿ ಸಮಾಜ ಸುಧಾರಣೆಗೆ ಶ್ರಮಿಸಿದವರು. ಇವರ ಬಗ್ಗೆ ಕನ್ನಡದಲ್ಲಿ ಎಷ್ಟೇ ಹುಡುಕಿದರೂ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಈ ಕೊರತೆ ನೀಗಿಸಿದವರು ಕಲಬುರಗಿಯ ಡಾ.ಸೂರ್ಯಕಾಂತ ಎಸ್.ಸುಜ್ಯಾತ ಅವರು. ಕೆಲ ತಿಂಗಳ ಹಿಂದೆ ಅವರು ಸಂತ ರವಿದಾಸರ ಕುರಿತು ತಾವೇ ಬರೆದ ಪುಸ್ತಕವನ್ನು ನನಗೆ ಓದಲು ಕೊಟ್ಟಿದ್ದರು. ಕಾರಣಾಂತರಗಳಿಂದ ನನಗೆ ಓದಲು ಆಗಿರಲಿಲ್ಲ. ಇತ್ತೀಚೆಗೆ ಅವರು ಕೊಟ್ಟ ರವಿದಾಸ ಪುಸ್ತಕ ಓದತೊಡಗಿದಾಗ ಅನೇಕ ಅಪರೂಪದ ಸಂಗತಿಗಳು ಗೊತ್ತಾದವು.

ಕಬೀರರು ಜನಿಸಿದ ಕಾಶಿ ಸಮೀಪದ ಊರಿನಲ್ಲೇ ಚಮ್ಮಾರ ದಂಪತಿಗಳಿಗೆ ಜನಿಸಿದ ರವಿದಾಸರು ಬಾಲ್ಯದಲ್ಲೇ ಭಕ್ತಿಯ ಮಾರ್ಗ ಹಿಡಿದರು. ಜೊತೆಗೆ ಜಾತಿ ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಧ್ವನಿಯೆತ್ತಿದರು. ಚಿಕ್ಕ ವಯಸ್ಸಿನಲ್ಲಿ ಭಾರತವನ್ನು ಸುತ್ತಿದರು. ಕಬೀರ ದಾಸ ಮತ್ತು ಗುರು ನಾನಕರು ರವಿದಾಸರ ಸಮಕಾಲೀನರಾಗಿದ್ದರು.

‘‘ಜನ್ಮದಿಂದ ಯಾವ ವ್ಯಕ್ತಿಯೂ ನೀಚನಾಗಲಾರ ಕೇವಲ ಕೆಟ್ಟ ಕೆಲಸಗಳಿಂದ ಮನುಷ್ಯ ನೀಚನಾಗುತ್ತಾನೆ’’ ಎಂದು ಸಂತ ರವಿದಾಸರು ಹೇಳುತ್ತಾರೆ. ಜಾತಿಯ ಗರ್ವವನ್ನು ಬಿಟ್ಟು ಮನುಷ್ಯರಾಗಲು ಯತ್ನಿಸಬೇಕೆಂದು ಅವರು ಹೇಳುತ್ತಾರೆ.

ಮೈತುಂಬ ಜಾತೀಯತೆಯನ್ನು ತುಂಬಿಕೊಂಡ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಕರ್ನಾಟಕದ ಶರಣರು ವಚನಗಳನ್ನು ರಚಿಸಿದಂತೆ ರವಿದಾಸರು ಜನ ಭಾಷೆಯಲ್ಲಿ ದೋಹಾಗಳನ್ನು ರಚಿಸಿದರು. ಅವರ ಎರಡು ಸಾಲಿನ ದೋಹಾಗಳು ಭಾರತದ ಅನೇಕ ಕಡೆ ಅತ್ಯಂತ ಜನಪ್ರಿಯವಾಗಿವೆ.

ಸಂತ ರವಿದಾಸರು ನಿಜ ಅರ್ಥದ ಧರ್ಮ ನಿರಪೇಕ್ಷವಾದಿ ಆಗಿದ್ದರು. ಹಿಂದೂ, ಮುಸಲ್ಮಾನರನ್ನು ಸಮಾನವಾಗಿ ಕಾಣುತ್ತಿದ್ದರು.

‘‘ಹಿಂದೂ-ಮುಸಲ್ಮಾನರು ಸ್ನೇಹಿತರಾಗಿರಬೇಕು’’ ಎಂದು ತಮ್ಮ ಒಂದು ದೋಹಾದಲ್ಲಿ ಹೇಳುತ್ತಾರೆ.

‘‘ಮನುಷ್ಯ ದೇಹವು ಎಲುಬು, ರಕ್ತ ಹಾಗೂ ಮಾಂಸದಿಂದ ರೂಪುಗೊಂಡಿದೆ. ಒಂದೇ ಬಿಂದುವಿನಿಂದ ಉತ್ಪತ್ತಿಯಾಗಿದೆ. ಹೀಗಿರುವಾಗ ಬ್ರಾಹ್ಮಣ, ಅಬ್ರಾಹ್ಮಣ, ಆ ಜಾತಿ, ಈ ಜಾತಿ ಎಂಬ ಭೇದವೇಕೆ? ಇದರಲ್ಲಿ ಜನ್ಮಾಧರಿತ ಶ್ರೇಷ್ಠತೆ ಎಲ್ಲಿ ಬರುತ್ತದೆ’’ ಎಂದು ರವಿದಾಸರು ಪ್ರಶ್ನಿಸುತ್ತಾರೆ.

ಸಂತ ರವಿದಾಸರು ತಮ್ಮ ಇನ್ನೊಂದು ದೋಹಾದಲ್ಲಿ ‘‘ಯಾರನ್ನು ರಾಮ ಎನ್ನುತ್ತೇವೆಯೋ ಅವನೇ ರಹೀಮನೂ ಆಗಿದ್ದಾನೆ. ಹಾಗೇ ರಾಮ, ರಹೀಮರು ಒಂದೇ ಎಂದಾದರೆ ಕಾಬಾ, ಕಾಶಿ , ಮಂದಿರ, ಮಸೀದಿಗಳು ಒಂದೇ’’ ಎಂದು ರವಿದಾಸರು ಹೇಳಿದ್ದಾರೆ.

ಗುರು ರವಿದಾಸರು ಒಬ್ಬ ಸಮಾಜ ಸುಧಾರಕ ಸಂತರಾಗಿದ್ದರು. ಅವರಿಗೆ ಭಕ್ತಿಗಿಂತಲೂ ಸಮಾಜ ಸುಧಾರಣೆ ಮುಖ್ಯವೆನಿಸಿತ್ತು. ಭಕ್ತಿ ಮಾರ್ಗದ ಮೂಲಕ ಸಮಾಜ ಬದಲಾವಣೆಯ ಆಶಯವನ್ನು ಅವರು ಹೊಂದಿದ್ದರು.

ಅಸ್ಪಶ್ಯ ಚಮ್ಮಾರ ಸಮುದಾಯದಿಂದ ಬಂದಿದ್ದ ರವಿದಾಸರಿಗೆ ದೇವಾಲಯದ ಒಳಗೆ ಹೋಗಿ ಪೂಜೆ ಸಲ್ಲಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ, ರಾಮ ಸೀತೆಯರ ಮಣ್ಣಿನ ಮೂರ್ತಿಗಳನ್ನು ಮಾಡಿ ಅವುಗಳನ್ನೇ ಪೂಜಿಸಲು ಆರಂಭಿಸಿದರು. ನಿತ್ಯವೂ ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿದ್ದರು. ಮೂಢನಂಬಿಕೆ, ಕಂದಾಚಾರವನ್ನು ಅವರು ವಿರೋಧಿಸುತ್ತಿದ್ದರು.

1511ರಲ್ಲಿ ದಿಲ್ಲಿಯ ಮುಸ್ಲಿಮ್ ದೊರೆ ಸಿಕಂದರ ಶಾಹ್ ಲೋದಿ ಗುರು ರವಿದಾಸರ ಭವ್ಯ ದೇವಾಲಯವನ್ನು ಕಟ್ಟಿಸಿದ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ದೇಗುಲವನ್ನು ನೆಲಸಮಗೊಳಿಸಿದರು. ಆಗ ಉತ್ತರ ಭಾರತದಲ್ಲಿ ಬಹುದೊಡ್ಡ ವಿವಾದ ಉಂಟಾಗಿತ್ತು.

ಆ ಕಾಲದಲ್ಲಿ ಸಮತಾವಾದಿ ಸಂತರೆಂದೇ ಹೆಸರಾಗಿದ್ದ ಗುರು ರವಿದಾಸರು ಹಿಂದೂ-ಮುಸಲ್ಮಾನ, ಬ್ರಾಹ್ಮಣ-ಶೂದ್ರ ಎಂದು ಭೇದ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಮನುಷ್ಯ ಸಮಾನತೆಯ ಸಮಾಜ ಅವರ ಕನಸಾಗಿತ್ತು. ಅಸ್ಪಶ್ಯ ಸಮುದಾಯದಲ್ಲಿ ಜನಿಸಿದರೂ ಸಂತ ರವಿದಾಸರು ಜಾತಿಯ ಸಂಕುಚಿತ ಎಲ್ಲೆಗಳನ್ನು ಮೀರಿ ಬೆಳೆದರು. ಚಿತ್ತೋಡ ರಾಜಮನೆತನದ ರಾಣಿ ಝಾಲಿ, ರಾಣಿ ಮೀರಾಬಾಯಿ, ದಿಲ್ಲಿಯ ರಾಜ ಸಿಕಂದರ ಶಾಹ್ ಲೋದಿ ಹೀಗೆ ಜಾತಿ ಮತವೆನ್ನದೇ ಆಸ್ತಿ, ಅಂತಸ್ತಿನ ಗೊಡವೆ ಇಲ್ಲದೇ ಸಾವಿರಾರು ಜನ ರವಿದಾಸರ ಶಿಷ್ಯತ್ವವನ್ನು ಸ್ವೀಕರಿಸಿದರು.

ಬದುಕಿದ್ದಾಗ ಚಿತ್ರಹಿಂಸೆ ನೀಡಿ ಕೊಲ್ಲುವುದು, ಕೊಂದ ಮೇಲೆ ಪೂಜೆ, ಅರ್ಚನೆ ಮಾಡಿ ಅಲ್ಲೊಂದು ಮಂದಿರ ಕಟ್ಟಿ ದಂಧೆ ಆರಂಭಿಸುವುದು ನಮ್ಮ ನೆಲದ ಸಂಪ್ರದಾಯ. ಸಂತ ರವಿದಾಸರಿಗೂ ಕೊನೆಗೆ ಎಲ್ಲ ಸಮಾಜ ಸುಧಾರಕರಿಗಾದ ದುರಂತ ಅಂತ್ಯವೇ ಆಯಿತು. ಪುರೋಹಿತಶಾಹಿಗಳು ರಜಪೂತ ಅರಸರಿಗೆ ಕುಮ್ಮಕ್ಕು ನೀಡಿ ಸಂತ ರವಿದಾಸರನ್ನು ಖಡ್ಗದಿಂದ ಕತ್ತರಿಸಿ ಹಾಕುವಂತೆ ಮಾಡಿದರು ಎಂಬುದು ಇತಿಹಾಸಕಾರ ವಿಜಯಕುಮಾರ ತ್ರಿಶರಣರ ಅಭಿಪ್ರಾಯವಾಗಿದೆ. ರಾಜ ಮಹಲಿನಲ್ಲಿ ಸಂತ ರವಿದಾಸರನ್ನು ಕೊಂದು ಹಾಕಿದ ನಂತರ ಝಾಲಿ ಬಾಯಿ ರಾಣಿ ಅವರ ಸ್ಮಾರಕ ಕಟ್ಟಿಸಿದರು. ಇದನ್ನು ‘‘ರವಿದಾಸ ಕಿ ಛತರಿ’’ ಎಂದು ಕರೆಯಲಾಗುತ್ತದೆ.

ಈ ಬಾರಿ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಇರುವುದರಿಂದ ಬಿಜೆಪಿಗೆ ಮತ್ತೆ ಸಂತ ರವಿದಾಸರ ನೆನಪಾಗಿದೆ. ಜಾತಿ ಪದ್ದತಿ, ಅಸ್ಪಶ್ಯತೆ, ಲಿಂಗ ತಾರತಮ್ಯದ ವಿರುದ್ಧ ಬದುಕಿನುದ್ದಕ್ಕೂ ಹೋರಾಡಿದ ಸಂತ ರವಿದಾಸ ಅವರಿಗೆ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ. ಪ್ರತಿ ವರ್ಷ ಮಾಘ ಪೂರ್ಣಿಮೆಯ ದಿನದಂದು ಅವರೆಲ್ಲರೂ ರವಿದಾಸ ಜಯಂತಿ ದಿನ ಅವರ ಜನ್ಮಸ್ಥಳ ವಾರಣಾಸಿಗೆ ಬರುತ್ತಾರೆ.

ಈ ಬಾರಿ ಓಟಿಗಾಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ರಾಜಕಾರಣಿಗಳು ರವಿದಾಸರ ಜನ್ಮಸ್ಥಳಕ್ಕೆ ಬಂದು ಅವರ ನಾಮ ಸ್ಮರಣೆ ಮಾಡಿದರು.

ಸಿಕಂದರ ಲೋದಿ ಕಟ್ಟಿಸಿದ ರವಿದಾಸರ ದೇವಾಲಯವನ್ನು ಕೆಡವಿದವರೂ ಅವರನ್ನು ಹಾಡಿ ಹೊಗಳಿದರು.

ಕರ್ನಾಟಕದಲ್ಲಿ ಬಸವಣ್ಣನವರು, ಮಹಾರಾಷ್ಟ್ರದಲ್ಲಿ ಶಿವಾಜಿ ಹೀಗೆ ಚುನಾವಣಾ ರಾಜಕೀಯಕ್ಕೆ ಇತಿಹಾಸದ ಮಹಾಪುರುಷರ ಹೆಸರನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.

ಬುದ್ದ, ಬಸವಣ್ಣ, ಬಾಬಾಸಾಹೇಬರು ಬಯಸಿದ ಸಮಾನತೆಯ ಸಮಾಜವನ್ನು ಕಟ್ಟಲು ಶ್ರಮಿಸಬೇಕಾದ ಯುವ ಪೀಳಿಗೆಯ ದಾರಿ ಈಗ ಬೇರೆಯಾಗಿದೆ. ಭಾರತದ ಅನೇಕ ಸಾಮಾಜಿಕ ಸುಧಾರಣೆಗಳನ್ನು ವಿಫಲಗೊಳಿಸಿದವರು ಈ ಯುವಕರನ್ನು ದಾರಿ ತಪ್ಪಿಸಿದ್ದಾರೆ. ಆದರೆ, ಪರಿಸ್ಥಿತಿ ಹೀಗೇ ಇರುವುದಿಲ್ಲ. ಮತ್ತೆ ಬದಲಾವಣೆಯ ಚಲನೆ ಆರಂಭವಾಗುತ್ತದೆ. ಅದಕ್ಕಾಗಿ ಕಾಯಬೇಕಷ್ಟೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News