ತನ್ನ 5.3 ಲಕ್ಷ ಡಾಲರ್ ಮೌಲ್ಯದ ಷೇರುಗಳನ್ನು ಚಾಲಕ, ಸಹಾಯಕರಿಗೆ ಉಡುಗೊರೆಯಾಗಿ ನೀಡಿದ ಐಡಿಎಫ್‍ಸಿ ಬ್ಯಾಂಕ್ ಸಿಇಒ
ಹೊಸದಿಲ್ಲಿ: ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ಲಿಮಿಟೆಡ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ವಿ ವೈದ್ಯನಾಥನ್ ಅವರು ತಾನು ಹೊಂದಿರುವ ಬ್ಯಾಂಕಿನ 5,30,000 ಡಾಲರ್ ಮೌಲ್ಯದ ಷೇರುಗಳನ್ನು ತಮ್ಮ ಚಾಲಕ, ತರಬೇತುದಾರ ಮತ್ತು ನಿವಾಸ ಹಾಗೂ ಕಚೇರಿಯಲ್ಲಿರುವ ತಮ್ಮ ಸಹಾಯಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಖಾಸಗಿ ರಂಗದ ಹಣಕಾಸು ಸಂಸ್ಥೆಯಾಗಿರುವ ಐಡಿಎಫ್‍ಸಿ ಫಸ್ಟ್ ಬ್ಯಾಂಕ್‍ನಲ್ಲಿ ತಾವು ಹೊಂದಿರುವ ಒಟ್ಟು ಪಾಲುದಾರಿಕೆಯಲ್ಲಿ ಶೇ 3.7ರಷ್ಟು ಅಥವಾ 9 ಲಕ್ಷ ಶೇರುಗಳನ್ನು ವೈದ್ಯನಾಥನ್ ತಮ್ಮ ಚಾಲಕ, ಸಹಾಯಕರಿಗೆ ಹಸ್ತಾಂತರಿಸಿದ್ದಾರೆ. ಫಲಾನುಭವಿಗಳು ತಮಗೆ ದೊರಕುವ ಹಣವನ್ನು ಮನೆಗಳನ್ನು ಖರೀದಿಸಲು ಬಳಸಲಿದ್ದಾರೆ ಎಂದು ಎಕ್ಸ್‍ಚೇಂಜ್ ಫೈಲಿಂಗ್‍ನಲ್ಲಿ ತಿಳಿಸಲಾಗಿದೆ.
ಎಕ್ಸ್ ಚೇಂಜ್ ಫೈಲಿಂಗ್‍ನಲ್ಲಿರುವ ಮಾಹಿತಿಯ ಪ್ರಕಾರ 54 ವರ್ಷದ ವೈದ್ಯನಾಥನ್ ಅವರು ಜನವರಿ 2018ರಿಂದೀಚೆಗೆ ತಮ್ಮಲ್ಲಿರುವ ಒಟ್ಟು ಪಾಲುದಾರಿಕೆಯ ಶೇ 38ರಷ್ಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ಮೊದಲು ಕ್ಯಾಪಿಟಲ್ ಫಸ್ಟ್ ಇದರ ಮುಖ್ಯಸ್ಥರಾಗಿದ್ದರೆ ನಂತರ ಈ ಸಂಸ್ಥೆ ಐಡಿಎಫ್‍ಸಿಯೊಂದಿಗೆ ವಿಲೀನಗೊಂಡು ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ರಚಿಸಲಾಗಿತ್ತು. ಈ ಹಿಂದೆ ಅವರು 2020ರಲ್ಲಿ ತಮ್ಮ ಮಾಜಿ ಗಣಿತ ಶಿಕ್ಷಕರಿಗೂ ಇದೇ ರೀತಿ ಉಡುಗೊರೆ ನೀಡಿದ್ದರು. ವರ್ಷಗಳ ಹಿಂದೆ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಪ್ರವೇಶ ಪಡೆದಿದ್ದರೂ ಅಲ್ಲಿಗೆ ಪ್ರಯಾಣಿಸಲು ಹಣವಿಲ್ಲದೇ ಇದ್ದಾಗ ತಮಗೆ ರೂ. 500 ನೀಡಿ ಸಹಕರಿಸಿದ್ದ ಗಣಿತ ಶಿಕ್ಷಕರನ್ನು ಮರೆಯದೆ ಅವರಿಗೆ ಉಡುಗೊರೆಯನ್ನು ವೈದ್ಯನಾಥನ್ ನೀಡಿದ್ದರು.
ಇನ್ನೂ 2 ಲಕ್ಷ ಶೇರುಗಳನ್ನು ಟ್ರಸ್ಟ್ ಒಂದರ ಸಮಾಜ ಕಲ್ಯಾಣ ಚಟುವಟಿಕೆಗಳಿಗಾಗಿ ಮಾರಾಟ ಮಾಡಲಾಗಿತ್ತು.