×
Ad

'ಪಂಜಾಬ್ ಪೊಲಿಟಿಕ್ಸ್ ಟಿವಿ'ಯ ಆ್ಯಪ್, ವೆಬ್‍ಸೈಟ್, ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಿದ ಕೇಂದ್ರ

Update: 2022-02-22 19:57 IST

ಹೊಸದಿಲ್ಲಿ: ವಿದೇಶಿ ಮೂಲದ ಪಂಜಾಬ್ ಪೊಲಿಟಿಕ್ಸ್ ಟಿವಿ ಇದರ ಆ್ಯಪ್‍ಗಳು, ವೆಬ್‍ಸೈಟ್ ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇಂದು ಹೇಳಿದೆ.

ಈ ಮಾಧ್ಯಮ ಸಂಸ್ಥೆಯು ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆಗೆ ಸೇರಿದೆ ಹಾಗೂ ಈ ಸಂಘಟನೆಯು ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಸಾರ್ವಜನಿಕ ಸುವ್ಯವಸ್ಥೆಯನ್ನು ಹದಗೆಡಿಸಲು ಆನ್‍ಲೈನ್ ವೇದಿಕೆಗಳನ್ನು ಬಳಸಲು ಯತ್ನಿಸಲಿದೆ ಎಂಬ ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ.

ಹೊಸ, ವಿವಾದಿತ ಐಟಿ ನಿಯಮಗಳ ಆಧಾರದಲ್ಲಿ ಈ ಸುದ್ದಿ ಸಂಸ್ಥೆಯ ಡಿಜಿಟಲ್ ಮಾಧ್ಯಮ ಸಂಪನ್ಮೂಲಗಳನ್ನು ನಿರ್ಬಂಧಿಸಲು ಕೇಂದ್ರ ಸರಕಾರ ತನ್ನ ತುರ್ತು ಅಧಿಕಾರವನ್ನು ಬಳಸಿದೆ.

ಪಂಜಾಬ್ ಪೊಲಿಟಿಕ್ಸ್ ಟಿವಿಯ ಇದೀಗ ನಿರ್ಬಂಧಿತ ಆ್ಯಪ್‍ಗಳು, ವೆಬ್‍ಸೈಟ್‍ಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳಲ್ಲಿರುವ ವಿಷಯಗಳು  ಮತೀಯ ಸೌಹಾರ್ದತೆಯನ್ನು ಕೆಡಿಸುವ, ಪ್ರತ್ಯೇಕತಾವಾದವನ್ನು ಉತ್ತೇಜಿಸುವ ಮತ್ತು ದೇಶದ ಸಾರ್ವಭೌಮತ್ವ ಮತ್ತು ಏಕತೆಗೆ ಭಂಗವುಂಟು ಮಾಡುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News