ಉದಯೋನ್ಮುಖ ಕ್ರಿಕೆಟಿಗನ ಶಸ್ತ್ರಚಿಕಿತ್ಸೆಗೆ 31 ಲಕ್ಷ ರೂ.ನೆರವು ನೀಡಿದ ಕೆ.ಎಲ್. ರಾಹುಲ್

Update: 2022-02-22 17:27 GMT

 ಬೆಂಗಳೂರು, ಫೆ. 22: ಅಪರೂಪದ ರಕ್ತದ ಕಾಯಿಲೆಗೆ ಚಿಕಿತ್ಸೆ ನೀಡಲು ತುರ್ತು ಅಸ್ಥಿ ಮಜ್ಜೆಯ ಕಸಿ(ಬಿಎಂಟಿ)ಅಗತ್ಯವಿರುವ 11 ವರ್ಷದ ಉದಯೋನ್ಮುಖ ಕ್ರಿಕೆಟಿಗನಿಗೆ 31 ಲಕ್ಷ ರೂ. ನೆರವು ನೀಡಿರುವ ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಮಾನವೀಯತೆ ಮೆರೆದಿದ್ದಾರೆ.

ಮುಂಬೈ ಶಾಲಾ ಬಾಲಕ, ಭಾರತ ಕ್ರಿಕೆಟ್ ಜರ್ಸಿಯನ್ನು ಧರಿಸಲು ಬಯಸಿರುವ ವರದ್ ಸೆಪ್ಟಂಬರ್ 2021ರಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ರಕ್ತ ತಜ್ಞರ ಆರೈಕೆಯಲ್ಲಿದ್ದಾನೆ. ವರದ್ ಅವರ ಪೋಷಕರಾದ ವಿಮಾ ಏಜೆಂಟ್ ಸಚಿನ್ ನಲವಡೆ ಹಾಗೂ ಗೃಹಿಣಿ ಸ್ವಪ್ನಾ ಅವರು ತಮ್ಮ ಮಗನ ಚಿಕಿತ್ಸೆಗಾಗಿ ಪಾವತಿಸಲು ಅಗತ್ಯವಿರುವ 35 ಲಕ್ಷ ರೂ. ಸಂಗ್ರಹಿಸಲು ಗಿವ್ ಇಂಡಿಯಾದಲ್ಲಿ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದರು.
ವರದ್ ಕುರಿತು ತಿಳಿದ ತಕ್ಷಣ ರಾಹುಲ್ ತಂಡವು ಗಿವ್ ಇಂಡಿಯಾದ ಸಂಪರ್ಕಕ್ಕೆ ಬಂದಿದೆ. ಚಿಕಿತ್ಸೆಗೆ ಅಗತ್ಯವಿರುವ 35 ಲಕ್ಷ ರೂ. ಪೈಕಿ 31 ಲಕ್ಷ ರೂ. ದೇಣಿಗೆ ನೀಡಲು ರಾಹುಲ್ ಮುಂದಾದರು.ವರದ್‌ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

‘‘ವರದ್ ಅವರ ಸ್ಥಿತಿಯ ಬಗ್ಗೆ ನನಗೆ ತಿಳಿದಾಗ ನನ್ನ ತಂಡವು ಗಿವ್ ಇಂಡಿಯಾದೊಂದಿಗೆ ಸಂಪರ್ಕದಲ್ಲಿತ್ತು. ಇದರಿಂದ ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ನನಗೆ ಖುಷಿಯಾಗಿದೆ. ಅವರು ಬೇಗನೆ ಚೇತರಿಸಿಕೊಂಡು ಕನಸುಗಳನ್ನು ಈಡೇರಿಸಿಕೊಳ್ಳಲಿ. ನನ್ನ ಕೊಡುಗೆಯು ಹೆಚ್ಚು ಹೆಚ್ಚು ಜನರು ಮುಂದೆ ಬರಲು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ರಾಹುಲ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಐದನೇ ತರಗತಿಯ ಶಾಲಾ ಬಾಲಕ ವರದ್‌ಗೆ ಸೆಪ್ಟಂಬರ್ 2021ರಲ್ಲಿ ಅಪರೂಪದ ರಕ್ತದ ಕಾಯಿಲೆ ಕಂಡುಬಂದ ಬಳಿಕ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವರದ್ ಅವರ ರಕ್ತದ ಪ್ಲೇಟ್‌ಲೆಟ್ ಮಟ್ಟ ತುಂಬಾ ಕಡಿಮೆಯಾಗಿದ್ದು, ರೋಗ ನಿರೋಧಕ ಶಕ್ತಿ ಕುಂದಿತ್ತು. ಸಾಮಾನ್ಯ ಜ್ವರ ಗುಣಮುಖವಾಗಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ವರದ್ ಅವರ ಸ್ಥಿತಿಗೆ ಅಸ್ಥಿಮಜ್ಜೆಯ ಕಸಿ ಮಾತ್ರ ಶಾಶ್ವತ ಚಿಕಿತ್ಸೆಯಾಗಿತ್ತು.

ಮಧ್ಯಮ ವರ್ಗದ ಕುಟುಂಬವು ಹಣದ ಕೊರತೆಯನ್ನು ಎದುರಿಸಿತು. ವರದ್ ಅವರ ತಂದೆ ಮಗನ ಕ್ರಿಕೆಟಿನಾಗುವ ಕನಸು ಜೀವಂತವಾಗಿಡಲು ತೆಗೆದಿಟ್ಟಿದ ಹಣವನ್ನು ಖರ್ಚು ಮಾಡಿದರು. ‘‘ವರದ್ ಶಸ್ತ್ರಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿರುವ ಕೆ.ಎಲ್.ರಾಹುಲ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಅವರು ನೀಡಿದ ಸಹಾಯದಿಂದ ಕಡಿಮೆ ಅವಧಿಯಲ್ಲಿ ಅಸ್ಥಿಮಜ್ಜೆಯ ಕಸಿ ಮಾಡಲು ಸಾಧ್ಯವಾಯಿತು’’ ಎಂದು ವರದ ಅವರ ತಾಯಿ ಸ್ವಪ್ನಾ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News