×
Ad

ಕ್ಷೇತ್ರ ಪುನರ್ವಿಂಗಡಣೆಯ ಆರೆಂಟು ತಿಂಗಳುಗಳಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಅಮಿತ್ ಶಾ

Update: 2022-02-22 22:48 IST
ಅಮಿತ್ ಶಾ

ಹೊಸದಿಲ್ಲಿ,ಫೆ.22: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಪೂರ್ಣಗೊಳ್ಳುವ ಹಂತದಲ್ಲಿದೆ. ಅದು ಮುಗಿದ ಆರೆಂಟು ತಿಂಗಳುಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ರಂಜನಾ ದೇಸಾಯಿ ನೇತೃತ್ವದ ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಅಧಿಕಾರಾವಧಿಯು ಮಾ.6ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಅದು ಇನ್ನೂ ಎರಡು ತಿಂಗಳು ವಿಸ್ತರಣೆಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.
ಆಯೋಗವು ಫೆ.6ರಂದು ತನ್ನ ಕರಡು ವರದಿಯನ್ನು ಸಲ್ಲಿಸಿದ್ದು, ಜಮ್ಮುವಿನಲ್ಲಿ ಆರು ಮತ್ತು ಕಾಶ್ಮೀರದಲ್ಲಿ ಒಂದು ಸೇರಿದಂತೆ ಒಟ್ಟು ಏಳು ಹೊಸ ವಿಧಾನಸಭಾ ಕ್ಷೇತ್ರಗಳ ಸೃಷ್ಟಿ ಮತ್ತು ಇತರ ಕೆಲವು ಕ್ಷೇತ್ರಗಳ ಗಡಿಗಳ ಮರು ರೂಪಿಸುವಿಕೆಯನ್ನು ಪ್ರಸ್ತಾವಿಸಲಾಗಿದೆ. ಈ ಬದಲಾವಣೆಗಳೊಂದಿಗೆ ಜಮ್ಮು-ಕಾಶ್ಮೀರ ವಿಧಾನಸಭೆಯು ಒಟ್ಟು 90 ಸ್ಥಾನಗಳನ್ನು ಹೊಂದಲಿದೆ. ಕ್ಷೇತ್ರಗಳ ಸಂಖ್ಯೆ ಜಮ್ಮುವಿನಲ್ಲಿ 37 ರಿಂದ 43ಕ್ಕೆ ಮತ್ತು ಕಾಶ್ಮೀರದಲ್ಲಿ 46 ರಿಂದ 47ಕ್ಕೆ ಹೆಚ್ಚಲಿದೆ. 24 ಸ್ಥಾನಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಾಗಿರುತ್ತವೆ.
ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡಗಳಿಗೆ ಒಂಭತ್ತು ಸ್ಥಾನಗಳ ಮೀಸಲಾತಿಯನ್ನು ಆಯೋಗವು ಪ್ರಸ್ತಾವಿಸಿದೆ. ಏಳು ಸ್ಥಾನಗಳು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರಲಿವೆ. ಆದರೆ ಆಯೋಗದ ಶಿಫಾರಸುಗಳನ್ನು ಜಮ್ಮು-ಕಾಶ್ಮೀರದಲ್ಲಿನ ಪ್ರಾದೇಶಿಕ ಪಕ್ಷಗಳು ಬಲವಾಗಿ ವಿರೋಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News