'ನಮ್ಮ ಹಕ್ಕಿನ ಹೋರಾಟದ ಮಧ್ಯೆ ಕುಟುಂಬವನ್ನು ಎಳೆದು ತರಬೇಡಿ': ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರ ಮನವಿ

Update: 2022-02-23 12:54 GMT

ಉಡುಪಿ, ಫೆ.23: ‘ಹಿಜಾಬ್ ನಮ್ಮ ಹಕ್ಕು. ಅದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ಮಧ್ಯೆ ನಮ್ಮ ಕುಟುಂಬದವರನ್ನು ಎಳೆದು ತರಬೇಡಿ, ಅವರ ವಿಡಿಯೋ ಮಾಡಬೇಡಿ, ಅವರಿಗೆ ಹೊಡೆಯಬೇಡಿ’ ಎಂದು ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ಉಡುಪಿಯಲ್ಲಿ ಮಾಧ್ಯಮದವರ ಮುಂದೆ ಮನವಿ ಮಾಡಿದರು.

‘ಇದು ವಿದ್ಯಾರ್ಥಿನಿಯರ ವಿಚಾರ. ನಾವು ನಮ್ಮ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ. ನಮ್ಮ ಹೋರಾಟದ ಮಧ್ಯೆ ನಮ್ಮ ಕುಟುಂಬವನ್ನು ಯಾಕೆ ಎಳೆದು ತರುತ್ತೀರಿ? ಆ ಅಧಿಕಾರ ಯಾರಿಗೂ ಇಲ್ಲ. ನಾವು ನಮ್ಮ ಹಕ್ಕಿಗಾಗಿ ಇನ್ನು ಕೂಡ ಹೋರಾಟ ಮಾಡುತ್ತೇವೆ. ಆ ಹಕ್ಕು ಪಡೆಯಲು ನಾವು ಕೋರ್ಟ್ ಮೆಟ್ಟಿಲೇರಿದ್ದೇವೆ’ ಎಂದು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ತಿಳಿಸಿದರು.

'ಮಾಧ್ಯಮದ ವಿರುದ್ಧ ಕ್ರಮ'

ಕಾಲೇಜು ಆಡಳಿತ ಮಂಡಳಿಯು ನಮ್ಮ ಫೋನ್ ನಂಬರ್, ವಿಳಾಸಗಳಿರುವ ದಾಖಲೆಗಳನ್ನು ಸೋರಿಕೆ ಮಾಡಿದ ಪರಿಣಾಮ ನಮಗೆ ಅಪರಿಚಿತ ನಂಬರ್‌ಗಳಿಂದ ಹಲವು ಬೆದರಿಕೆ ಕರೆಗಳು ಬರಲು ಆರಂಭಿಸಿತು. ಅದಕ್ಕಾಗಿ ನಾವು ಸಿಮ್‌ನ್ನು ಬದಲಾಯಿಸಿದ್ದೇವೆ. ಅದರ ನಂತರ ಖಾಸಗಿ ಟಿವಿ ವಾಹಿನಿಯವರು ಹಿಡನ್ ಕ್ಯಾಮೆರಾ ಇಟ್ಟುಕೊಂಡು ಮನೆಗೆ ಬಂದರು. ತಮ್ಮ ಮಿತಿಯನ್ನು ಉಲ್ಲಂಘಿಸಿ ನಮ್ಮ ಖಾಸಗಿತನದ ಬಗ್ಗೆ ಚಿತ್ರೀಕರಣ ಮಾಡಿದರು ಎಂದು ಆಲಿಯಾ ಅಸ್ಸಾದಿ ಆರೋಪಿಸಿದರು.

ನನ್ನ ಅಜ್ಜಿ ಮುತ್ತು ಅಣ್ಣನ ವಿಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡಿದ್ದಾರೆ. ನಮ್ಮ ಬಗ್ಗೆ ತುಂಬಾ ಕೆಟ್ಟಾದಾಗಿ ಚಿತ್ರಿಸಿದ್ದಾರೆ. ಇದರ ಪರಿಣಾಮ ನಮ್ಮ ಸಹಪಾಠಿ ಹಝ್ರ ಶಿಫಾಳ ತಂದೆಯ ಹೊಟೇಲಿನ ಮೇಲೆ ದಾಳಿ ಮಾಡಿ ಅಣ್ಣನಿಗೆ ಹೊಡೆಯಲಾಯಿತು. ಸರಕಾರ ಕೂಡಲೇ ಈ ಮಾಧ್ಯಮದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಹೊಟೇಲಿನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

'ಇದೆಲ್ಲ ರಾಜಕೀಯ ಆಟ'

ಇವತ್ತು ಹಿಜಾಬ್ ಕುರಿತು ರಾಜ್ಯದಲ್ಲಿ ನಡೆಯುತ್ತಿರುವುದು ರಾಜಕೀಯ ಆಟ. ನಮ್ಮ ವಿಚಾರವನ್ನು ಮುಂದಿಟ್ಟುಕೊಂಡು ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಇದೆಲ್ಲವೂ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದಾರೆ ಎಂದು ಆಲಿಯಾ ಅಸ್ಸಾದಿ ಆರೋಪಿಸಿದರು.

ರಾಜ್ಯದ ಹೆಚ್ಚಿನ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ ಕಾಲೇಜಿನ ಹೊರಗಡೆ ಉಳಿದುಕೊಂಡಿದ್ದಾರೆ. ಇದರಿಂದ ಅವರು ತುಂಬಾ ನೊಂದಿದ್ದಾರೆ. ಆದುದರಿಂದ ಹೈಕೋರ್ಟ್ ಆದಷ್ಟು ಬೇಗ ಅಂತಿಮ ತೀರ್ಪನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಉಗ್ರರ ಲಿಂಕ್ ಕುರಿತ ಪ್ರಶ್ನೆಗೆ ಉತ್ತರಿಸಿ ಆಲಿಯಾ, ಅದರ ಬಗ್ಗೆ ನಾವು ಪ್ರತಿಕ್ರಿಯೆ ಕೊಡಲ್ಲ. ಇದು ವಿದ್ಯಾರ್ಥಿಗಳ ಹಕ್ಕಿನ ಹೋರಾಟ ವಿಚಾರವಾಗಿದೆ. ಅವರು ಏನೇ ಹೇಳಲಿ. ಅವರು ಅನಕ್ಷರಸ್ಥ ಜನರು. ನಾವು ಅದನ್ನೆಲ್ಲ ಕೇರ್ ಮಾಡಲ್ಲ ಎಂದು ಹೇಳಿದರು. ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸ ಇದೆ. ನಮ್ಮ ವಿಚಾರವನ್ನು ಕೂಡ ಹೈಕೋರ್ಟ್ ಆಲಿಸಿದೆ. ಆದುದರಿಂದ ನಮ್ಮ ಪರವಾಗಿ ತೀರ್ಪು ನೀಡುವ ವಿಶ್ವಾಸ ನಮಗೆ ಇದೆ ಎಂದರು.

'ಓದಲು ಏಕಾಗ್ರತೆ ಕಷ್ಟ'

ಕಳೆದ ಎರಡು ತಿಂಗಳಿಂದ ಮನೆಯಲ್ಲಿಯೇ ಓದಲು ಪ್ರಯತ್ನ ಮಾಡುತ್ತಿದ್ದೇವೆ. ತುಂಬಾ ಒತ್ತಡ, ಮಾನಸಿಕ ಕಿರುಕುಳದ ಜೊತೆ ಬೆದರಿಕೆಗಳು ಬರುವುದಿರಿಂದ ಓದಿನ ಕಡೆ ಏಕಾಗ್ರತೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಅಲ್ಮಾಝ್ ತಿಳಿಸಿದರು.

ತರಗತಿ ಪ್ರವೇಶ ಕಲ್ಪಿಸದ ಪರಿಣಾಮ ನಮಗೆ ಪಾಠಗಳು ಬಾಕಿ ಇವೆ. ಕೋವಿಡ್‌ನಿಂದ ನಮ್ಮ ಕಾಲೇಜು ಆರು ದಿನಗಳ ಕಾಲ ಬಂದ್ ಆಗಿದ್ದಾಗ ಆನ್‌ಲೈನ್ ತರಗತಿ ಮಾಡಲಾಗಿತ್ತು. ಅದಕ್ಕೆ ನಾವು ಜಾಯಿನ್ ಆಗಿದ್ದೆವು. ಈಗ ಯಾವುದೇ ಆನ್‌ಲೈನ್ ತರಗತಿಗಳು ನಡೆಯುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಇತರ ವಿದ್ಯಾರ್ಥಿನಿಗಳಾದ ರೇಶಮ್, ಮುಸ್ಕಾನ್ ಜೈನಾಬ್, ಸಫಾ ಹಾಜರಿದ್ದರು.

ಪ್ರಾಕ್ಟಿಕಲ್ ಪರೀಕ್ಷೆ ಮುಂದೂಡಲು ಮನವಿ

ಹಿಜಾಬ್ ಕುರಿತು ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಬೇಕು. ಈ ಬಗ್ಗೆ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಪಿಯು ಬೋರ್ಡಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹಿಜಾಬ್ ಕುರಿತು ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲ್ಮಾಝ್ ತಿಳಿಸಿದ್ದಾರೆ.

ಹಿಜಾಬ್ ಹಾಕಿಕೊಂಡು ತರಗತಿಗೆ ಬರಲು ಅವಕಾಶ ನೀಡಬೇಕೆಂದು ನಾವು ಹೈಕೋರ್ಟ್ ಅರ್ಜಿಗೆ ಹಾಕಿದ್ದೇವೆ. ಆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದುದರಿಂದ ನಾವು ಹಿಜಾಬ್ ಹಾಕದೆ ತರಗತಿ ಹೋಗದಿರುವುದರಿಂದ ಸರಕಾರ ಪರೀಕ್ಷೆಯನ್ನು ಮುಂದೂಡಬೇಕು. ಪರೀಕ್ಷೆ ಮುಂದೂಡಿದರೆ ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಎಲ್ಲರಿಗೂ ಓದಲು ಇನ್ನಷ್ಟು ಹೆಚ್ಚು ಸಮಯ ಸಿಗುತ್ತದೆ. ಆ ಮೂಲಕ ಹೆಚ್ಚು ಅಂಕ ಪಡೆಯಬಹುದೆಂದು ಅವರು ಹೇಳಿದರು.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಬಾಲಕಿಯರ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮೂವರು(ಅಲ್ಮಾಝ್, ಹಝ್ರ ಶಿಫಾ, ಬಿಬಿ ಆಯಿಷಾ) ಹಾಗೂ ಪ್ರಥಮ ವಿಜ್ಞಾನ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಕಲಿಯುತ್ತಿದ್ದಾರೆ.

‘ಎಲ್ಲ ಮಾಧ್ಯಮದವರು ನಮ್ಮ ಖಾಸಗಿತನವನ್ನು ಕಾಪಾಡುವಂತೆ ವಿನಂತಿ ಮಾಡುತ್ತೇನೆ. ಮಾಧ್ಯಮಗಳು ಪ್ರಸಾರ ಮಾಡಿದ ವಿಡಿಯೋದಿಂದಾಗಿ ನನ್ನ ಸಹಪಾಠಿ ಇಂದು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ಅನುಮತಿ ಇಲ್ಲದೆ ಮನೆಗೆ ಬಂದು ವಿಡಿಯೋ ಮಾಡಿ ವೈರಲ್ ಮಾಡುತ್ತಿದ್ದಾರೆ. ದಯವಿಟ್ಟು ನಮ್ಮ ಖಾಸಗಿತನವನ್ನು ಕಾಪಾಡಿ’

-ಅಲ್ಮಾಝ್, ವಿದ್ಯಾರ್ಥಿನಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News