ನಿಮ್ಮ ನಿರ್ಬಂಧ ಹಿಜಾಬ್ ಧರಿಸುವ ನಮ್ಮ ನಿರ್ಧಾರವನ್ನು ಇನ್ನಷ್ಟು ಬಲಪಡಿಸುತ್ತದೆ:ಒಲಿಂಪಿಕ್ಸ್ ಪದಕ ವಿಜೇತೆ ಇಬ್ತಿಹಾಜ್
ಕ್ರೀಡಾ ಕೂಟಗಳಲ್ಲಿ ಹಿಜಾಬ್ ನಿಷೇಧಿಸುವ ಫ್ರಾನ್ಸ್ ಸಂಸತ್ತಿನ ನಿರ್ಣಯವನ್ನು ಕಟುವಾಗಿ ವಿರೋಧಿಸಿರುವ ಒಲಿಂಪಿಯನ್ ಪದಕ ವಿಜೇತೆ ಅಮೆರಿಕ ಕ್ರೀಡಾಪಟು ಇಬ್ತಿಹಾಜ್ ಮುಹಮ್ಮದ್ "ನಿಮ್ಮ ನಿರ್ಬಂಧ ಹಿಜಾಬ್ ಧರಿಸುವ ನಮ್ಮಮನೋಬಲವನ್ನು ಇನ್ನಷ್ಟು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಇಬ್ತಿಹಾಜ್ ಅಮೇರಿಕಾದ ಫೆನ್ಸಿಂಗ್ ( ಕತ್ತಿವರಸೆ ) ತಂಡದ ಸದಸ್ಯರಾಗಿದ್ದು ಒಲಿಂಪಿಕ್ಸ್ ನಲ್ಲಿ ಹಿಜಾಬ್ ಧರಿಸಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದ ಪ್ರಪ್ರಥಮ ಅಮೇರಿಕನ್ ಮುಸ್ಲಿಂ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
"ಫ್ರೆಂಚ್ ಸರಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಫ್ರಾನ್ಸ್, ಭಾರತ, ಕ್ಯುಬೆಕ್ ಇತ್ಯಾದಿ ದೇಶಗಳಲ್ಲಿ ಕಾನೂನಿನ ಹೆಸರಲ್ಲಿ ಧಾರ್ಮಿಕ ಭೇದಭಾವ ಅನುಸರಿಸುತ್ತಿವೆ. ಧಾರ್ಮಿಕ ಸ್ವಾತಂತ್ರ್ಯ ನಾವೆಲ್ಲರೂ ಯಾವುದೇ ಬೆಲೆ ತೆತ್ತಾದರೂ ರಕ್ಷಿಸಬೇಕಾದ ಮಾನವ ಹಕ್ಕು ಎಂದು ಇಬ್ತಿಹಾಜ್ ಹೇಳಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿ ಈ ಭೇದಭಾವವನ್ನು ವಿರೋಧಿಸಬೇಕು. ನಮ್ಮ ಸೋದರಿಯರ ಧಾರ್ಮಿಕ ಹಕ್ಕುಗಳನ್ನು ಸರಕಾರಗಳು ತಾರತಮ್ಯ ಧೋರಣೆ ಅನುಸರಿಸಿ ಉಲ್ಲಂಘಿಸಿದ್ರೆ ನಾವು ಮೂಕ ಪ್ರೇಕ್ಷಕರಾಗುವುದಿಲ್ಲ. ಯಾವುದೇ ಧಾರ್ಮಿಕ ನಂಬಿಕೆಯ ಪ್ರತಿ ಮಹಿಳೆ ತನಗಿಷ್ಟದ ಉಡುಪು ಧರಿಸಿ ಕ್ರೀಡೆಯಲ್ಲಿ ಭಾಗವಹಿಸಲು ಆಯ್ಕೆಯಿರಬೇಕು. ನಾವೆಲ್ಲರೂ ಒಟ್ಟಾಗಿ ಇದಕ್ಕಾಗಿ ಹೋರಾಡಬೇಕು ಎಂದು ಇಬ್ತಿಹಾಜ್ ಹೇಳಿದ್ದಾರೆ.