ಬ್ರೆಝಿಲ್: ಚಂಡಮಾರುತದಿಂದ ಮೃತರ ಸಂಖ್ಯೆ 189ಕ್ಕೆ ಏರಿಕೆ
Update: 2022-02-23 22:58 IST
ಸಾಂದರ್ಭಿಕ ಚಿತ್ರ
ರಿಯೊಡಿಜನೈರೊ, ಫೆ.23: ಕಳೆದ ವಾರ ಬ್ರೆಝಿಲ್‌ನ ಪೆಟ್ರೊಪೊಲಿಸ್ ನಗರಕ್ಕೆ ಅಪ್ಪಳಿಸಿದ್ದ ಚಂಡಮಾರುತದಿಂದ ಉಂಟಾದ ದಿಢೀರ್ ಪ್ರವಾಹ, ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 186ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ಸುಮಾರು 69 ಮಂದಿ ನಾಪತ್ತೆಯಾಗಿದ್ದಾರೆ. ನಗರದಲ್ಲೆಡೆ ಕೆಸರು, ಮಣ್ಣು, ತ್ಯಾಜ್ಯದ ರಾಶಿ ಹಾಗೂ ಕುಸಿದ ಕಟ್ಟಡಗಳ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ . ಫೆಬ್ರವರಿ 15ರಂದು ಪೆಟ್ರೊಪೊಲಿಸ್ ನಗರದಲ್ಲಿ ಹಲವೆಡೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರಲ್ಲಿ 33 ಮಕ್ಕಳೂ ಸೇರಿದ್ದಾರೆ ಎಂದು ರಕ್ಷಣಾ ಕಾರ್ಯ ತಂಡವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹಲವು ಮನೆಗಳು ಸಂಪೂರ್ಣ ನೆಲಸಮವಾಗಿದ್ದು ಮನೆ ಕಳೆದುಕೊಂಡ 850ಕ್ಕೂ ಅಧಿಕ ಮಂದಿಗೆ ತಾತ್ಕಾಲಿಕ ಶಿಬಿರಗಳಲ್ಲಿ ನೆಲೆ ಕಲ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.