ರಾಜ್ಯದ ಬಜೆಟ್ ಅನ್ನು ʼಕಪ್ಪು ಮೈಬಣ್ಣದ ವಧುವಿಗೆʼ ಹೋಲಿಸಿದ್ದ ರಾಜಸ್ಥಾನ ಬಿಜೆಪಿ ಅಧ್ಯಕ್ಷನಿಂದ ಕ್ಷಮೆಯಾಚನೆ
ಜೈಪುರ,ಫೆ.24: ರಾಜ್ಯ ಮುಂಗಡಪತ್ರವನ್ನು ಮೇಕಪ್ ಮಾಡಿಕೊಂಡ ಕಪ್ಪು ಮೈಬಣ್ಣದ ವಧುವಿಗೆ ಹೋಲಿಸಿದ್ದ ತನ್ನ ವಿವಾದಾತ್ಮಕ ಹೇಳಿಕೆಗಾಗಿ ರಾಜಸ್ಥಾನ ಬಿಜೆಪಿಯ ಅಧ್ಯಕ್ಷ ಸತೀಶ ಪೂನಿಯಾ ಅವರು ಗುರುವಾರ ಕ್ಷಮೆ ಯಾಚಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು 2022-23ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಿಯಾ,ಮುಂಗಡಪತ್ರ ಬಣ್ಣ ಬಳಿದುಕೊಂಡಿರುವಂತೆ ಕಾಣುತ್ತಿದೆ. ಅದು ಕಪ್ಪು ಮೈಬಣ್ಣದ ವಧುವನ್ನು ಬ್ಯೂಟಿ ಪಾರ್ಲರ್ ಗೆ ಕರೆದೊಯ್ದು ಮೇಕಪ್ ಮಾಡಿದಂತಿದೆ ಎಂದು ಹೇಳಿದ್ದರು.
ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದ್ದು,ಮಹಿಳೆಯರ ವಿರುದ್ಧ ಇಂತಹ ಭಾಷೆ ಬಳಸಿದ್ದಕ್ಕಾಗಿ ಆಡಳಿತ ಕಾಂಗ್ರೆಸ್ ಪೂನಿಯಾ ವಿರುದ್ಧ ದಾಳಿ ನಡೆಸಿತ್ತು.
‘ಮುಂಗಡಪತ್ರಕ್ಕೆ ಪ್ರತಿಕ್ರಿಯಿಸುವಾಗ ನಾನು ಸಹಜವಾಗಿ ಕೆಲವು ಶಬ್ದಗಳನ್ನು ಬಳಸಿದ್ದೆ. ಸಾಮಾನ್ಯವಾಗಿ ನಾನು ಇಂತಹ ಶಬ್ದಗಳನ್ನು ಬಳಸುವುದಿಲ್ಲ. ನನ್ನ ಶಬ್ದಗಳು ಯಾರದೇ ಭಾವನೆಗಳಿಗೆ ನೋವನ್ನುಂಟು ಮಾಡಿದ್ದರೆ ನಾನು ವಿನಮ್ರನಾಗಿ ಕ್ಷಮೆ ಯಾಚಿಸುತ್ತೇನೆ ’ ಎಂದು ಪೂನಿಯಾ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ,ರಾಜಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ರೆಹಾನಾ ರಯಾಝ್ ಮತ್ತಿತರರು ಪೂನಿಯಾ ಹೇಳಿಕೆಯನ್ನು ಖಂಡಿಸಿದ್ದರು.