ಸದಸ್ಯರು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿದರೆ ವಾಟ್ಸ್ಆ್ಯಪ್ ಗ್ರೂಪ್ ನ ಅಡ್ಮಿನ್‌ಗಳು ಹೊಣೆಯಲ್ಲ: ಕೇರಳ ಹೈಕೋರ್ಟ್
ತಿರುವನಂತಪುರ,ಫೆ.24: ಕೇರಳ ಉಚ್ಚ ನ್ಯಾಯಾಲಯವು ಬುಧವಾರ ಪ್ರಮುಖ ತೀರ್ಪೊಂದರಲ್ಲಿ ವಾಟ್ಸ್ಆ್ಯಪ್ ಗುಂಪಿನ ಸದಸ್ಯರು ಪೋಸ್ಟ್ ಮಾಡುವ ಯಾವುದೇ ಆಕ್ಷೇಪಾರ್ಹ ವಿಷಯಗಳಿಗೆ ಅಡ್ಮಿನ್ ಗಳನ್ನು ಹೊಣೆಯಾಗಿಸುವಂತಿಲ್ಲ ಎಂದು ಎತ್ತಿಹಿಡಿದಿದೆ.
ಕ್ರಿಮಿನಲ್ ಕಾನೂನಿನಲ್ಲಿ ಪ್ರಾತಿನಿಧಿಕ ಬಾಧ್ಯತೆಯು ಶಾಸನವು ಅದನ್ನು ಸೂಚಿಸಿದಾಗ ಮಾತ್ರ ಅನ್ವಯವಾಗುತ್ತದೆ ಎಂದು ನ್ಯಾ.ಕೌಸರ್ ಎಡಪ್ಪಾಗತ್ ಅವರು ಅಭಿಪ್ರಾಯಿಸಿದರು.
ಅಪರಾಧವು ಕ್ರಿಮಿನಲ್ ಉದ್ದೇಶವನ್ನು ಒಳಗೊಂಡಿರಬೇಕು ಹಾಗೂ ಅಪರಾಧವನ್ನು ರೂಪಿಸಲು ಕೃತ್ಯ ಮತ್ತು ಉದ್ದೇಶ ಎರಡೂ ಮೇಳೈಸಿರಬೇಕು ಎನ್ನುವುದು ಅಪರಾಧ ನ್ಯಾಯಶಾಸ್ತ್ರದ ಮೂಲ ತತ್ವವಾಗಿದೆ ಎಂದೂ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿತು.
ಪ್ರಕರಣದಲ್ಲಿಯ ಅರ್ಜಿದಾರ ‘ಫ್ರೆಂಡ್ಸ್’ ಹೆಸರಿನ ವಾಟ್ಸ್ಆ್ಯಪ್ ಗುಂಪನ್ನು ಹುಟ್ಟುಹಾಕಿದ್ದು,ಆತನೊಂದಿಗೆ ಇತರ ಇಬ್ಬರೂ ಅಡ್ಮಿನ್ಗಳಾಗಿದ್ದರು. ಈ ಇಬ್ಬರ ಪೈಕಿ ಓರ್ವ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾನೆ. 2020,ಮಾರ್ಚ್ನಲ್ಲಿ ಮೊದಲ ಆರೋಪಿಯು ಮಕ್ಕಳ ಅಶ್ಲೀಲ ಚಿತ್ರಗಳನ್ನು ಗುಂಪಿನಲ್ಲಿ ಪೋಸ್ಟ್ ಮಾಡಿದ್ದ.
ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಪೊಕ್ಸೊ ಕಾಯ್ದೆಗಳಡಿ ಗುಂಪಿನ ಅಡ್ಮಿನ್ಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಅರ್ಜಿದಾರ ಗುಂಪನ್ನು ಸೃಷ್ಟಿಸಿದ್ದರಿಂದ ಆತನನ್ನು ಎರಡನೇ ಆರೋಪಿಯನ್ನಾಗಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆತ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ.
ವಾಟ್ಸ್ಆ್ಯಪ್ ಗುಂಪಿನ ಅಡ್ಮಿನ್ ಮತ್ತು ಸದಸ್ಯರ ನಡುವೆ ಒಡೆಯ-ಸೇವಕ ಅಥವಾ ಮುಖ್ಯಸ್ಥ-ಏಜೆಂಟ್ ಸಂಬಂಧವಿರುವುದಿಲ್ಲ. ಗುಂಪಿನ ಸದಸ್ಯ ಮಾಡಿರುವ ಪೋಸ್ಟ್ಗಾಗಿ ಅಡ್ಮಿನ್ ಅನ್ನು ಹೊಣೆಯಾಗಿಸುವುದು ಕ್ರಿಮಿನಲ್ ಕಾನೂನಿನ ಮೂಲತತ್ವಗಳಿಗೆ ವಿರುದ್ಧವಾಗುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.