ಉಕ್ರೇನಿನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ಐವರು ವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿ ಲಭ್ಯ

Update: 2022-02-25 15:45 GMT
ನಿಯಮ ರಾಘವೇಂದ್ರ / ರೋಹನ್ ಧನಂಜಯ 

ಉಡುಪಿ, ಫೆ.25: ರಶ್ಯದಿಂದ ತೀವ್ರವಾದ ಮಿಲಿಟರಿ ದಾಳಿಗೆ ತುತ್ತಾಗಿರುವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಸಾವಿರಾರು ಮಂದಿ ವಿದ್ಯಾರ್ಥಿಗಳಲ್ಲಿ ಅಲ್ಲಿನ ವಿವಿಧ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಕಲಿಯುತ್ತಿರುವ ಉಡುಪಿ ಜಿಲ್ಲೆಯ ಐವರು ವಿದ್ಯಾರ್ಥಿಗಳ ಮಾಹಿತಿ ಜಿಲ್ಲಾಡಳಿತಕ್ಕೆ ದೊರೆತಿದೆ.

ಈ ಎಲ್ಲಾ ಐವರು ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸದ್ಯ ಸುರಕ್ಷಿತ ಸ್ಥಳಗಳಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರಲ್ಲಿ ಬ್ರಹ್ಮಾವರದ ರೋಹನ್ ಧನಂಜಯ ಬಾಗ್ಲಿ ಕೊನೆಯ ವರ್ಷದ ಎಂಬಿಬಿಎಸ್‌ನಲ್ಲಿ ಕಲಿಯುತಿದ್ದರೆ, ಮೂವರು ಕಳೆದ ಡಿಸೆಂಬರ್ ತಿಂಗಳ ಬಳಿಕವಷ್ಟೇ ಉಕ್ರೇನಿಗೆ ತೆರಳಿ ಅಲ್ಲಿನ ವಿವಿಧ ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡಿದ್ದರು.

ಸದ್ಯ ಮಾಹಿತಿ ಲಭ್ಯವಾಗಿರುವ ಐವರಲ್ಲಿ ರೋಹನ್, ಬಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ. ಅವರ ಪುತ್ರರಾಗಿದ್ದು ಖಾರ್ಕೀವ್‌ನ ನೇಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಕಲಿಯುತಿದ್ದಾರೆ. ಉಳಿದಂತೆ ಪರ್ಕಳದ ನಿವಾಸಿಯಾಗಿದ್ದು ಸದ್ಯ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ವ್ಯವಸ್ಥಾಪಕರಾಗಿರುವ ಬಿ.ವಿ.ರಾಘವೇಂದ್ರದ ಪುತ್ರ ನಿಯಮ ರಾಘವೇಂದ್ರ, ಉದ್ಯಾವರ ಸ್ಮಾಲರದ ರಾಜೇಶ್ ಎಂಬವರ ಪುತ್ರ ಮೃಣಾಲ್, ಮೂಡುತೋನ್ಸೆ ಕೆಮ್ಮಣ್ಣಿನ ಮೆಲ್ವಿನ್ ಫೆರ್ನಾಂಡೀಸ್ ಎಂಬವರ ಪುತ್ರ ಗ್ಲೆನ್‌ವಿಲ್ ಫೆರ್ನಾಂಡೀಸ್ ಹಾಗೂ ಕಲ್ಯಾಣಪುರದ ವಿಲಿಯಮ್ ಡಿಸೋಜರ ಪುತ್ರಿ ಆ್ಯನಿಫ್ರೆಡ್ ಡಿಸೋಜ ಕೂಡ ಯುದ್ಧ ಬಾಧಿತ ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದಾರೆ.

ನಿಯಮ ರಾಘವೇಂದ್ರ: ಮಣಿಪಾಲ ಮಾಧವ ಕೃಪ ಶಾಲೆಯಲ್ಲಿ ಕಲಿತ ನಿಯಮ ರಾಘವೇಂದ್ರ 2021ರಲ್ಲಿ ಪಿಯುಸಿ ತೇರ್ಗಡೆಯಾದ ಬಳಿಕ ಕಳೆದ ಡಿಸೆಂಬರ್ ತಿಂಗಳಲ್ಲಿ ಉಕ್ರೇನಿನ ವಿನ್ನಿಸಿಯಾ ನೇಶನಲ್ ಪಿರವೋ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಕಲಿಯಲು ತೆರಳಿದ್ದಾರೆ.

ಅವರೀಗ ಬಂಕರ್‌ನಲ್ಲಿ ಸುರಕ್ಷಿತವಾಗಿದ್ದು, ಪೊಲಂಡ್ ಮೂಲಕ ಅಲ್ಲಿದ್ದ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿಯಮ ರಾಘವೇಂದ್ರ ಮನೆಗೆ ಆಗಾಗ ದೂರವಾಣಿ ಕರೆ ಮಾಡುತಿದ್ದಾರೆ ಎಂದು ತಂದೆ ಬಿ.ವಿ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡುವರೆನ್ನುವ ವಿಶ್ವಾಸವನ್ನು ಮನೆಯವರು ಹೊಂದಿದ್ದಾರೆ.

ಮೃಣಾಲ್:  ಕಳೆದ ಡಿಸೆಂಬರ್ ತಿಂಗಳಲ್ಲಷ್ಟೇ ಎಂಬಿಬಿಎಸ್ ಕಲಿಯಲೆಂದು ಉಕ್ರೇನಿನ ಖಾರ್ಕೀವ್‌ನಲ್ಲಿರುವ ನೇಶನಲ್ ಮೆಡಿಕಲ್ ಯುನಿವರ್ಸಿಟಿಗೆ ಸೇರ್ಪಡೆಗೊಂಡಿರುವ ಮೃಣಾಲ್ ತಾನಿರುವ ಹಾಸ್ಟೆಲ್‌ನಲ್ಲಿ ಸುರಕ್ಷಿತವಾಗಿ ರುವುದಾಗಿ ದೂರವಾಣಿ ಕರೆ ಮಾಡಿ ತಿಳಿಸಿದ್ದಾನೆ ಎಂದು ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಉದ್ಯೋಗಿ ಯಾಗಿರುವ ಆತನ ತಂದೆ ರಾಜೇಶ್ ಪತ್ರಿಕೆಗೆ ತಿಳಿಸಿದ್ದಾರೆ.

ಮೃಣಾಲ್ ಇರುವ ಹಾಸ್ಟೆಲ್‌ನಲ್ಲಿ 10-12 ಮಂದಿ ಭಾರತೀಯ ವಿದ್ಯಾರ್ಥಿಗಳು ಸಹ ಇದ್ದು, ಹಾಸ್ಟೆಲ್‌ನ ಹೊರಗೆ ಮಿಲಿಟರಿ ಪಡೆ ಇರುವುದಾಗಿ ತಿಳಿಸಿದ್ದಾನೆ ಎಂದರು. ಕಳೆದ ರಾತ್ರಿ ಉಕ್ರೇನ್-ಪೊಲಂಡ್ ಗಡಿ ತೆರೆದು ಅಲ್ಲಿರುವವರನ್ನು ಪೊಲಂಡ್‌ಗೆ ಕಳುಹಿಸುವ ಮಾಹಿತಿ ಸಿಕ್ಕಿತಾದರೂ, ಅದು ಯಶಸ್ವಿಯಾಗಲಿಲ್ಲ. ಈಗಲೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಜೇಶ್ ತಿಳಿಸಿದರು.

ಎರಡು ದಿನಗಳ ಹಿಂದೆ ಇಲ್ಲಿನ ಕೆಲವರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವೇಳೆ ವಿಮಾನ ನಿಲ್ದಾಣವನ್ನೇ ಮುಚ್ಚಿದ್ದರಿಂದ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ಮೃಣಾಲ್ ತಿಳಿಸಿರುವುದಾಗಿ ರಾಜೇಶ್ ಹೇಳಿದರು.

ಡಿಸೆಂಬರ್‌ನಲ್ಲಿ ಮೃಣಾಲ್ ಉಕ್ರೇನಿಗೆ ತೆರಳಿದ್ದರೂ, ಕೋವಿಡ್ ಹಾಗೂ ಇತರ ಕಾರಣಗಳಿಗಾಗಿ ಕ್ಲಾಸ್‌ಗಳು ಇನ್ನೂ ಪ್ರಾರಂಭಗೊಂಡಿರಲಿಲ್ಲ. ಆತನ ಅಡ್ಮಿಷನ್ ಪ್ರಕ್ರಿಯೆ ಮಾತ್ರ ಮುಗಿದಿದೆ, ಕ್ಲಾಸ್‌ಗಳು ಇನ್ನೂ ಪ್ರಾರಂಭಗೊಂಡಿ ರಲಿಲ್ಲ. ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಮುಂದಿನ ವಾರ ಆತ ಬರುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ಪರಿಸ್ಥಿತಿ ನೋಡಿ ತಾಯ್ನಿಡಿಗೆ ಮರಳುವ ಯೋಜನೆ ಇದೆ ಎಂದು ತನ್ನ ಏಕೈಕ ಪುತ್ರನ ಬಗ್ಗೆ ರಾಜೇಶ್ ತಿಳಿಸಿದರು.

ರೋಹನ್ ಸುರಕ್ಷಿತ: ಇದೇ ವೇಳೆ ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್‌ನಲ್ಲಿ ಓದುತ್ತಿರುವ ರೋಹನ್ ಬಾಗ್ಲಿ ಸುರಕ್ಷಿತವಾಗಿರುವುದಾಗಿ ಆತನ ತಂದೆ ಬ್ರಹ್ಮಾವರ ವಿಜ್ಞಾನ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ್ ತಿಳಿಸಿದ್ದಾರೆ. ಅವರನ್ನೆಲ್ಲಾ ಬಂಕರ್‌ಗಳಲ್ಲಿ ಇರಿಸಿದ್ದಾಗಿ ಆತ ತಿಳಿಸಿದ್ದಾನೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News