ಪುಟಿನ್ ಅಭಯ: ಉಕ್ರೇನ್ ‌ನಲ್ಲಿ ಅತಂತ್ರರಾದ ಭಾರತೀಯರಿಗೆ ಸಿಹಿ ಸುದ್ದಿ...

Update: 2022-02-26 02:27 GMT

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‌ ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಿದ್ದಾರೆ. ಉಕ್ರೇನ್‌ನಿಂದ ರೊಮೇನಿಯಾ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿ ರಾಜಧಾನಿ ಬುಡಾಪೆಸ್ಟ್‌ ಗೆ ರಸ್ತೆ ಮೂಲಕ ಪ್ರಯಾಣಿಸಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಏರ್‌ಇಂಡಿಯಾದ ನಾಲ್ಕು ವಿಮಾನಗಳು ಕಾರ್ಯ ನಿರ್ವಹಿಸಲಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಉಕ್ರೇನ್‌ನ ಪಾಶ್ಚಿಮಾತ್ಯ ಗಡಿಗಳ ಮೂಲಕ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನದ ಬೆನ್ನಲ್ಲೇ ರಷ್ಯಾ ಅಧ್ಯಕ್ಷರು ಭಾರತೀಯರ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದಾರೆ. ಭಾರತೀಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಷ್ಯಾ ಪಡೆಗಳಿಗೆ ಸೂಚನೆ ನೀಡಿದ್ದಾಗಿ ಅವರು ಹೇಳಿದ್ದಾರೆ. ಸ್ಥಳಾತರಗೊಳ್ಳುವವರು ಪೂರ್ವ ಯೂರೋಪಿಯನ್ ದೇಶಗಳ ರಾಜಧಾನಿ ತಲುಪಿದ ಬಳಿಕ ಭಾರತಕ್ಕೆ ಕಳುಹಿಸುವ ಸಮಯವನ್ನು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆಸಿ ಪರಿಸ್ಥಿತಿ ಪರಾಮರ್ಶಿಸುವರು.

ಏರ್‌ಇಂಡಿಯಾ ವಿಮಾನಗಳು ಚಾರ್ಟರ್ಡ್ ವಿಮಾನಗಳಾಗಿದ್ದು, ಇದರ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇದರೊಂದಿಗೆ ಯುದ್ಧಪೀಡಿತ ಉಕ್ರೇನ್‌ನಲ್ಲಿರುವ 16 ಸಾವಿರ ಭಾರತೀಯರ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಶುಕ್ರವಾರ ಸಂಜೆಯ ವೇಳೆಗೆ 200 ಮಂದಿ ಭಾರತೀಯರನ್ನು ಪಶ್ಚಿಮ ಉಕ್ರೇನ್‌ನಿಂದ ರೊಮಾನಿಯಾಗೆ ಸುಸೀವಾ ಗಡಿ ಮೂಲಕ ಕರೆದೊಯ್ಯಲಾಗಿದೆ.

ಮೊದಲ ಎರಡು ವಿಮಾನಗಳು ಪ್ರಕಾರ ಶುಕ್ರವಾರ ರಾತ್ರಿ 9 ಹಾಗೂ 10.30ಕ್ಕೆ ಟೇಕಾಫ್ ಆಗಬೇಕಿತ್ತು. ಆದರೆ ಯುದ್ಧ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಟೇಕಾಫ್ ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News