×
Ad

ಉಕ್ರೇನ್‌ನಲ್ಲಿ ಸಿಲುಕಿರುವವರನ್ನು ಕರೆತರಲು ʼಆಪರೇಶನ್‌ ಗಂಗಾʼ: ಮುಂಬೈ ತಲುಪಿದ 219 ಭಾರತೀಯರು

Update: 2022-02-26 22:47 IST
photo/twitter

ಮುಂಬೈ: ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ನಡುವೆ ಉಕ್ರೇನಿಲ್ಲೇ ಸಿಲುಕಿದ್ದ  ಭಾರತೀಯರನ್ನು ಭಾರತ ಸರ್ಕಾರವು ʼಆಪರೇಷನ್‌ ಗಂಗಾʼ ಮೂಲಕ ತಾಯ್ನಾಡಿಗೆ ಯಶಸ್ವಿಯಾಗಿ ಕರೆತಂದಿದೆ.

ಅದರ ಭಾಗವಾಗಿ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಶನಿವಾರ ಮುಂಬೈ ಹಾಗೂ ದಿಲ್ಲಿಗೆ ಎರಡು ವಿಮಾನಗಳು ಹೊರಟಿದ್ದು, 219 ಭಾರತೀಯರನ್ನು ಹೊತ್ತ ಏರ್‌ ಇಂಡಿಯಾ ವಿಮಾನವು ಶನಿವಾರ ಸಂಜೆ ಮುಂಬೈಗೆ ಬಂದು ತಲುಪಿದೆ.

ಇನ್ನು ದಿಲ್ಲಿಗೆ ಹೊರಟಿರುವ 250 ಭಾರತೀಯ ನಾಗರಿಕರನ್ನು ಹೊತ್ತ ಏರ್‌ ಇಂಡಿಯಾ ವಿಮಾನವು ಟೇಕ್‌-ಆಫ್‌ ಆಗಿದೆ ಎಂದು ವಿದೇಶಾಂಗ ಸಚಿವ ಡಾ. ಜೈ ಶಂಕರ್‌ ತಿಳಿಸಿದ್ದಾರೆ.

ರಷ್ಯಾ ಹಾಗೂ ಉಕ್ರೇನ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಮಾನಯಾನವು ನಿಷೇಧಿಸಲ್ಪಟ್ಟಿದ್ದರಿಂದ ಕಂಗಾಲಾಗಿದ್ದ ಭಾರತೀಯರು, ಉಕ್ರೇನ್‌ನಿಂದ ರೊಮೇನಿಯಾಕ್ಕೆ ಸ್ಥಳಾಂತರಗೊಂಡಿದ್ದರು.

ಮುಂಬೈಗೆ ತಲುಪಿದ ಭಾರತೀಯರನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌, “ಮಾತೃಭೂಮಿಗೆ ಮರಳಿ ಸ್ವಾಗತ!, ಮುಂಬೈ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಭಾರತೀಯರ ಮುಖದಲ್ಲಿನ ನಗು ನೋಡಿ ಸಂತೋಷವಾಯಿತು.” ಎಂದು ಟ್ವೀಟ್‌ ಮಾಡಿದ್ದಾರೆ.

ವಿದೇಶಾಂಗ ಸಚಿವ ಡಾ. ಎಸ್‌ ಜೈ ಶಂಕರ್‌, ‘ಎಲ್ಲರಿಗೂ ಸ್ವಾಗತ. ‘ಆಪರೇಷನ್ ಗಂಗಾ’ದ ಮೊದಲ ಹೆಜ್ಜೆ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಖುದ್ದು ತಾನೇ ಮೇಲ್ವಿಚಾರಣೆ ನಡೆಸುತ್ತಿದ್ದೆ ಎಂದು ಅವರು ತಿಳಿಸಿರುವುದಾಗಿ ndtv.com ವರದಿ ಮಾಡಿದೆ.

‘ಉಕ್ರೇನ್‌ನಿಂದ ಹಿಂದಿರುಗುವ ಎಲ್ಲಾ ವಿದ್ಯಾರ್ಥಿಗಳಿಗೆ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಉಚಿತ ಸೇವೆಗಳನ್ನು ನೀಡುತ್ತದೆ. ನಾವು ಅವರಿಗೆ ಉಚಿತ ಕೋವಿಡ್ ಪರೀಕ್ಷೆ, ಲಸಿಕೆ, ಆಹಾರ ಮತ್ತು ಇತರ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತೇವೆ’ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News