ದೇಶಾದ್ಯಂತ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಅನುಷ್ಠಾನಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ

Update: 2022-02-26 17:30 GMT
ಎಬಿಡಿಎಂ

ಹೊಸದಿಲ್ಲಿ,ಫೆ.26: ಐದು ವರ್ಷಗಳ ಅವಧಿಗೆ 1,600 ಕೋ.ರೂ.ವೆಚ್ಚದಲ್ಲಿ ದೇಶಾದ್ಯಂತ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ (ಎಬಿಡಿಎಂ) ಅನುಷ್ಠಾನಕ್ಕೆ ಕೇಂದ್ರ ಸಂಪುಟವು ಶನಿವಾರ ಹಸಿರು ನಿಶಾನೆಯನ್ನು ತೋರಿಸಿದೆ. ಕೇಂದ್ರದ ಈ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಜಾರಿಗೊಳಿಸಲಿದೆ.

‌ಎಬಿಡಿಎಂ ಅಡಿ ನಾಗರಿಕರು ತಮ್ಮ ಆಯುಷ್ಮಾನ ಭಾರತ ಆರೋಗ್ಯ ಖಾತೆ ಸಂಖ್ಯೆಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದರೊಂದಿಗೆ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಜೋಡಣೆಗೊಳಿಸಬಹುದು. ಇದು ವ್ಯಕ್ತಿಗಳ ದೀರ್ಘಾವಧಿಯ ಆರೋಗ್ಯ ದಾಖಲೆಗಳ ಸೃಷ್ಟಿಯನ್ನು ಸಾಧ್ಯವಾಗಿಸುತ್ತದೆ ಮತ್ತು ಆಸ್ಪತ್ರೆಗಳಿಂದ ಕ್ಲಿನಿಕಲ್ ನಿರ್ಧಾರ ಕೈಗೊಳ್ಳುವಿಕೆಯನ್ನು ಉತ್ತಮಗೊಳಿಸುತ್ತದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಯೋಜನೆಯು ಟೆಲಿಮೆಡಿಸಿನ್‌ನಂತಹ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಸೇವೆಗಳ ರಾಷ್ಟ್ರೀಯ ಪೋರ್ಟೆಬಿಲಿಟಿಯನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿಕೆಯು ತಿಳಿಸಿದೆ. ಕೋವಿನ್,ಆರೋಗ್ಯ ಸೇತು ಮತ್ತು ಇ-ಸಂಜೀವಿನಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಲ್ಲಿ ತಂತ್ರಜ್ಞಾನವು ನಿರ್ವಹಿಸಬಲ್ಲ ಪಾತ್ರವನ್ನು ಪ್ರದರ್ಶಿಸುವುದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ರಕ್ಷಣೆ ಪರಿಸರ ವ್ಯವಸ್ಥೆಯಾದ್ಯಂತ ಡಿಜಿಟಲ್ ಆರೋಗ್ಯ ಪರಿಹಾರಗಳು ಹೆಚ್ಚಿನ ಲಾಭಗಳನ್ನು ನೀಡುತ್ತಿವೆ. ಆದಾಗ್ಯೂ ಇಂತಹ ಪರಿಹಾರಗಳನ್ನು ಸಮಗ್ರಗೊಳಿಸುವ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್,ಚಂಡಿಗಡ,ದಾದ್ರಾ ಮತ್ತು ನಗರ ಹವೇಲಿ-ದಮನ್ ಮತ್ತು ದಿಯು,ಪುದುಚೇರಿ,ಅಂದಮಾನ್ ಮತ್ತು ನಿಕೋಬಾರ್ ದ್ವೀಪಸಮೂಹ ಹಾಗೂ ಲಕ್ಷದ್ವೀಪಗಳಲ್ಲಿ ಎಬಿಡಿಎಂ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ. ಈ ವರ್ಷದ ಫೆ.24ಕ್ಕೆ ಇದ್ದಂತೆ 17,33,69,087 ಆಯುಷ್ಮಾನ ಭಾರತ ಆರೋಗ್ಯ ಖಾತೆಗಳನ್ನು ಸೃಷ್ಟಿಸಲಾಗಿದ್ದು,ಎಬಿಡಿಎಂನಲ್ಲಿ 10,114 ವೈದ್ಯರು ಮತ್ತು 17,319 ಆಸ್ಪತ್ರೆಗಳ ನೋಂದಣಿಯಾಗಿದೆ ಎಂದು ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News