ಪ್ರಾಥಮಿಕ ನ್ಯಾಯಾಂಗ ಮೂಲಸೌಕರ್ಯಗಳ ಕೊರತೆಗೆ ಸಿಜೆಐ ಎನ್.ವಿ.ರಮಣ ವಿಷಾದ

Update: 2022-02-26 17:48 GMT
ಎನ್.ವಿ.ರಮಣ

ಹೊಸದಿಲ್ಲಿ,ಫೆ.26: ದೇಶದಲ್ಲಿ ಪ್ರಾಥಮಿಕ ನ್ಯಾಯಾಂಗ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಶನಿವಾರ ವಿಷಾದವನ್ನು ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು ಖಾಲಿ ಇರುವ ಹುದ್ದೆಗಳ ಭರ್ತಿಗೆ ಮಾತ್ರವಲ್ಲ, ಬೌದ್ಧಿಕ ಆಸ್ತಿ ವ್ಯಾಜ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಉಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯಕ್ಕೂ ಒತ್ತು ನೀಡಿದರು.


ದಿಲ್ಲಿ ಉಚ್ಚ ನ್ಯಾಯಾಲಯವು ಆಯೋಜಿಸಿದ್ದ ‘ಬೌದ್ಧಿಕ ಆಸ್ತಿ ವ್ಯಾಜ್ಯಗಳ ನ್ಯಾಯನಿರ್ಣಯ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅವರು,‘ನ್ಯಾಯಾಂಗ ಮೂಲಸೌಕರ್ಯದಲ್ಲಿ ಸುಧಾರಣೆಯ ಅಗತ್ಯವಿದೆ. ಆದರೆ ದುರದೃಷ್ಟವಶಾತ್ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಾನು ಭಾರತದ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ವಹಿಸಿಕೊಂಡಾಗಿನಿಂದಲೂ ನ್ಯಾಯಾಂಗ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮೇಲ್ವಿಚಾರಣೆಗಾಗಿ ಸಾಂಸ್ಥಿಕ ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ಕೇವಲ ಹಣವನ್ನು ಹಂಚಿಕೆ ಮಾಡಿದರೆ ಸಾಲದು,ಸವಾಲು ಇರುವುದು ಲಭ್ಯ ಸಂಪನ್ಮೂಲಗಳ ಗರಿಷ್ಠ ಬಳಕೆಯಲ್ಲಿ. ಕೇಂದ್ರ ಮತ್ತು ರಾಜ್ಯಗಳಲ್ಲಿ ಶಾಸನಬದ್ಧ ಪ್ರಾಧಿಕಾರಗಳನ್ನು ಸ್ಥಾಪಿಸುವಂತೆ ನಾನು ಸರಕಾರವನ್ನು ಓಲೈಸುತ್ತಲೇ ಇದ್ದೇನೆ ಮತ್ತು ಶೀಘ್ರವೇ ಧನಾತ್ಮಕ ಉತ್ತರವನ್ನು ಆಶಿಸುತ್ತಿದ್ದೇನೆ ’ ಎಂದರು.


ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಹೂಡಿಕೆದಾರ ಸ್ನೇಹಿಯಾಗಿದೆ ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂಬ ವಿದೇಶಿ ಹೂಡಿಕೆದಾರರಿಗೆ ತನ್ನ ಸಂದೇಶವನ್ನು ನ್ಯಾ.ರಮಣ ಪುನರುಚ್ಚರಿಸಿದರು.ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಭಾರತವು ಇಂದು ಎಲ್ಲ ಕಡೆಗಳಿಂದಲೂ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಗಮನವನ್ನು ಹೆಚ್ಚಿಸಬೇಕಾದ ಹಂತದಲ್ಲಿದೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳು ಅದರಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ಹೊಂದಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News