×
Ad

ಉಕ್ರೇನ್: ತೆರವು ಕಾರ್ಯಾಚರಣೆ ನಡೆಸುವ ಏರ್ ಇಂಡಿಯಾ ವಿಮಾನಗಳ ಪ್ರಯಾಣ ವೆಚ್ಚ ಗಂಟೆಗೆ 7-8 ಲಕ್ಷ ರೂ.‌

Update: 2022-02-27 23:10 IST
Photo : PTI

ಮುಂಬೈ, ಫೆ. 27: ಉಕ್ರೇನ್‌ನಲ್ಲಿರುವ ನೂರಾರು ಭಾರತೀಯರನ್ನು ಏರ್ ಇಂಡಿಯಾ ತೆರವುಗೊಳಿಸುತ್ತಿದೆ. ಇದರ ಪ್ರಯಾಣ ವೆಚ್ಚ 1.10 ಕೋಟಿ ರೂಪಾಯಿಗಿಂತಲೂ ಅಧಿಕವಾಗಲಿದೆ. ವಿಮಾನಗಳ ಸಂಚಾರದ ಅವಧಿ ಅವಲಂಬಿಸಿ ಈ ಮೊತ್ತದಲ್ಲಿ ಏರಿಕೆಯಾಗಲಿದೆ. ರೊಮಾನಿಯಾ ಹಾಗೂ ಹಂಗೇರಿ ಸೇರಿದಂತೆ ಸಂಘರ್ಷ ಪೀಡಿತ ನೆರೆಯ ದೇಶಗಳಿಂದ ಜನರನ್ನು ಭಾರತಕ್ಕೆ ಮರಳಿ ತರಲು ಡ್ರೀಮ್‌ಲೈನರ್ ಎಂದು ಕರೆಯಲಾಗುವ ಬೋಯಿಂಗ್ 787 ವಿಮಾನದ ಸಂಚಾರ ಸೇವೆಯನ್ನು ಏರ್ ಇಂಡಿಯಾ ನೀಡುತ್ತಿದೆ. 

ಡ್ರೀಮ್ ಲೈನರ್ ವಿಶೇಷ ವಿಮಾನದ ಸಂಚಾರದ ಪ್ರತಿ ಗಂಟೆಗೆ ಸುಮಾರು 7ರಿಂದ 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ನಾವು ಎಲ್ಲಿಗೆ ಹೋಗುತ್ತೇವೆ ಹಾಗೂ ಎಷ್ಟು ದೂರ ಹೋಗುತ್ತೇವೆ ಎನ್ನುವುದರ ಮೇಲೆ ಒಟ್ಟು ಮೊತ್ತ ಅವಲಂಬಿಸಿದೆ. ಈ ಒಟ್ಟು ಮೊತ್ತ ಸಿಬ್ಬಂದಿ, ತೈಲ, ಸಂಚಾರ, ಇಳಿಯುವುದು ಹಾಗೂ ಪಾರ್ಕಿಂಗ್ ಗೆ ಸಂಬಂಧಿಸಿ ವೆಚ್ಚವನ್ನು ಒಳಗೊಂಡಿದೆ. ದೀರ್ಘಾವಧಿಯ ಪ್ರಯಾಣವಾದುದರಿಂದ ವೈಮಾನಿಕ ಸಿಬ್ಬಂದಿಯ ಎರಡು ತಂಡಗಳು ಇರುತ್ತವೆ. 

ಈ ವೆಚ್ಚ ಕೂಡ ಒಟ್ಟು ವೆಚ್ಚದಲ್ಲಿ ಸೇರಿದೆ. ವಿಮಾನದ ನಿರ್ಗಮನದ ಕಾರ್ಯಾಚರಣೆಯನ್ನು ಒಂದು ಸಿಬ್ಬಂದಿ ತಂಡ ನಿರ್ವಹಿಸಿದರೆ, ಆಗಮನದ ಕಾರ್ಯಾಚರಣೆಯನ್ನು ಇನ್ನೊಂದು ಸಿಬ್ಬಂದಿ ತಂಡ ನಿರ್ವಹಿಸುತ್ತದೆ ಎಂದು ವಾಯು ಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಪ್ರಸ್ತುತ ಭಾರತದ ಬುಕಾರೆಸ್ಟ್ (ರೊಮಾನಿಯಾ) ಹಾಗೂ ಬುಡಾಪೆಸ್ಟ್ ಗೆ ಏರ್ ಇಂಡಿಯಾದ ವಿಮಾನಗಳು ಸಂಚಾರ ನಡೆಸುತ್ತಿದೆ. ವಿಮಾನ ಯಾನ ಸಂಸ್ಥೆಗೆ ಇವೆರೆಡೂ ಆಫ್ ಲೈನ್ ನಿಲ್ದಾಣಗಳು. 

ಅಂದರೆ, ಈ ಸ್ಥಳಗಳಿಗೆ ವಿಮಾನ ಯಾನ ಸಂಸ್ಥೆಯ ನಿಗದಿತ ಸೇವೆ ಇಲ್ಲ. ಬುಡಾಪೆಸ್ಟ್ ನಿಂದ ದಿಲ್ಲಿಗೆ ಆಗಮಿಸಿದ ವಿಮಾನ ಪ್ರಯಾಣಕ್ಕೆ 6 ಗಂಟೆಗಳನ್ನು ತೆಗೆದುಕೊಂಡಿದೆ. ದಿಲ್ಲಿಯಿಂದ ಬುಕಾರೆಸ್ಟ್ ಗೆ ತಲುಪಿದ ಇನ್ನೊಂದು ವಿಮಾನ ಪ್ರಯಾಣಕ್ಕೆ 7 ಗಂಟೆಗಳನ್ನು ತೆಗೆದುಕೊಂಡಿದೆ. ಬುಕಾರೆಸ್ಟ್ ನಿಂದ ದಿಲ್ಲಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನ ಪ್ರಯಾಣಕ್ಕೆ 5 ಗಂಟೆ ತೆಗೆದುಕೊಂಡಿದೆ. ಈ ವಿಮಾನ ಸಂಚಾರದ ಪ್ರತಿ ಗಂಟೆಗೆ 7ರಿಂದ 8 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದುದರಿಂದ ಎಲ್ಲ ಸಂಚಾರಕ್ಕೆ 1.10 ಕೋಟಿ ರೂಪಾಯಿ ವೆಚ್ಚವಾಗಲಿದೆ. ಸಂಚಾರದ ಅವಧಿ ಹೆಚ್ಚಾದರೆ ವೆಚ್ಚ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಈ ತೆರವು ಕಾರ್ಯಾಚರಣೆಯ ವಿಮಾನದ ಪ್ರಯಾಣ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ವಾಯು ಯಾನ ಸಂಸ್ಥೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News