ಬೊಳುವಾರು ಮಹಮ್ಮದ್ ಕುಂಞಿ ಅವರ ‘ಮೋನುಸ್ಮತಿ’ ಲೋಕಾರ್ಪಣೆ

Update: 2022-02-27 18:23 GMT

ಪುತ್ತೂರು, ಫೆ.27: ಸುಮಾರು 22ಕ್ಕೂ ಅಧಿಕ ಕಥೆ ಕಾದಂಬರಿಗಳನ್ನು ಬರೆದು, 28ಕ್ಕೂ ಅಧಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಬೊಳುವಾರು ಮಹಮ್ಮದ್ ಕುಂಞಿ ಅವರ ಬದುಕು ಎಲ್ಲರಿಗೂ ಮಾದರಿಯಾಗಿದ್ದು, ಅವರು ಮೋನುಸ್ಮತಿ ಮೂಲಕ ಬ್ಯಾರಿ ಸಮುದಾಯದ ತಲ್ಲಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಐಎಎಸ್‌ನ ಪ್ರಾಧ್ಯಾಪಕಿ ಫರ್ಝಾನ ಅಶ್ರಫ್ ಯು.ಟಿ. ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಪುತ್ತೂರಿನ ಬಹುವಚನಂನ ಪದ್ಮಿನಿ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನ ಬೆಂಗಳೂರು ಮತ್ತು ಬಹುವಚನಂ ಸಾಂಸ್ಕೃತಿಕ ಸಂಘಟನೆಯ ಸಹಯೋಗದಲ್ಲಿ ಬೊಳುವಾರು ಮಹಮ್ಮದ್ ಕುಂಞಿಯವರ ‘ಮೋನುಸ್ಮತಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹತ್ತಿರ ಇದ್ದವರನ್ನು ಪೊರೆಯುವುದು ಕನ್ನಡ ನಾಡಿನ ಸಂಸ್ಕೃತಿಯಾಗಿದೆ. ಬೊಳುವಾರು ಅವರು ಈ ಭಾವನೆಯನ್ನು ಯಾವುದೇ ಕಾರಣಕ್ಕೂ ಬಲಿಕೊಡದೆ ಉಳಿಸಿಕೊಂಡಿದ್ದಾರೆ ಎಂದರು.

ಮೋನುಸ್ಮತಿಯನ್ನು ತನ್ನದೇ ಆದ ವಿಶಿಷ್ಟ ಕನ್ನಡದಲ್ಲಿ ಚೇತೋಹಾರಿ, ತಾಜಾತಣದಿಂದ ಕಟ್ಟಿಕೊಟ್ಟಿರುವ ಬೊಳುವಾರು ಅವರು ಕನ್ನಡಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ. ಸಮಾಜ ಸೆಕ್ಯುಲರಿಸಂ ಎನಿಸಿಕೊಳ್ಳಲು ಧಾರ್ಮಿಕತೆಯಿಂದ ಹೊರಬರಬೇಕು ಎಂಬುವುದು ಸಮಂಜಸವಲ್ಲ. ನಮ್ಮಲ್ಲಿನ ಬಹುತ್ವದ ಸಂಸ್ಕೃತಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ ಎಂದು ಫರ್ಝಾನ ಹೇಳಿದರು.

ಮೋನುಸ್ಮತಿ ಕೃತಿ ಪರಿಚಯ ಮಾಡಿದ ಉಪನ್ಯಾಸಕ, ಸಾಹಿತಿ ಡಾ.ನರೇಂದ್ರ ರೈ ಮಾತನಾಡಿ, ಮೋನುಸ್ಮತಿಯ ಮೂಲಕ ಬೊಳುವಾರು ಅವರು ಒಳ್ಳೆಯ ಸುಂದರ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಮೋನುಸ್ಮತಿಯಲ್ಲಿ ಗಾಂಧಿಯ ಭಾರತವಿದೆ. ಅವರ ಮುತ್ತುಪ್ಪಾಡಿ ಒಂದು ಬಹುತ್ವದ ಭಾರತ. ಭಾರತವೆಂದರೆ ಭೂಗೋಳ ಅಲ್ಲ. ಆದು ಭಾವಗೋಳ. ಬಹುಸಂಸ್ಕೃತಿಯ ಭಾಗವಾಗಿರುವ ಭಾರತವನ್ನು ಮೋನುಸ್ಮತಿಯಲ್ಲಿ ತೋರಿಸಿದ್ದಾರೆ. ನಾನು ಬರೆದ ಬರಹ ಹೀಗೇ ಇರಬೇಕು ಎನ್ನುವ ತಯಾರಿಯೊಂದಿಗೆ ಬರೆದಿದ್ದಾರೆ. ಬೇರೆಯವರನ್ನು ನೋಯಿಸಿಲ್ಲ. ಎಲ್ಲರನ್ನೂ ಇವರು ನೆನೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ಕೃತಿಕಾರ ಬೊಳುವಾರು ಮಹಮ್ಮದ್ ಕುಂಞಿ ಮಾತನಾಡಿ, ತನ್ನ ಬದುಕಿನ ಬದಲಾವಣೆಗೆ ಕಾರಣರಾದ ಹಿರಿಯರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಬೊಳುವಾರು ಅವರ ಬದುಕು ಬದಲಿಸಿದ ಅವರ ಶಿಕ್ಷಕಿ ಅಪ್ಪಿ ಬಾಯಿ ಟೀಚರ್ ಅನುಪಸ್ಥಿತಿಯಲ್ಲಿ ಬೊಳುವಾರು ಶಾಲೆಯ ಶಿಕ್ಷಕಿ ನಿವೇದಿತಾ ಟೀಚರ್, ಕೈತುತ್ತು ಉಣಿಸಿದ ಪರಮೇಶ್ವರಿ ಅಕ್ಕ ಅವರ ಮೊಮ್ಮಗ ಪ್ರಸಾದ್ ಕೌಶಲ್, ವೆಂಕಪ್ಪ ಗೌಡ ಅವರ ಪುತ್ರ ವಸಂತ ಮತ್ತು ಕಾಲೇಜು ಓದಿಸಿದ್ದ ಹಾಜಿ ಕಡಬಕಾರ್ ಅಬ್ದುಲ್ ಖಾದರ್ ಅವರ ಪುತ್ರ ಶಾಹುಲ್ ಹಮೀದ್ ಅವರಿಗೆ ಗೌರವಾರ್ಪಣೆ ಮಾಡಿದರು. ಬೊಳುವಾರು ಮಹಮ್ಮದ್ ಕುಂಞಿ ದಂಪತಿಯನ್ನು ಬಹುವಚನಂ ವತಿಯಿಂದ ಗೌರವಿಸಲಾಯಿತು.

ಬಹುವಚನಂನ ಡಾ.ಶ್ರೀಶ ಕುಮಾರ್ ಎಂ.ಕೆ. ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರ್ವಹಿಸಿದರು. ರಂಗಕರ್ಮಿ ಹಾಗೂ ಬೊಳುವಾರು ಮಹಮ್ಮದ್ ಕುಂಞಿ ಅವರ ಸಹೋದರ ಐ.ಕೆ.ಬೊಳುವಾರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News