ಹಿಜಾಬ್ ವಿವಾದ: ಉಳ್ಳಾಲ ಭಾರತ್ ಪಿಯು ಕಾಲೇಜಿಗೆ ಇಂದೂ ರಜೆ

Update: 2022-02-28 05:12 GMT

ಉಳ್ಳಾಲ, ಫೆ.28: ಹಿಜಾಬ್ ವಿಚಾರವಾಗಿ ಇಲ್ಲಿನ ಭಾರತ್ ಪ.ಪೂ. ಕಾಲೇಜಿನಲ್ಲಿ ವಿವಾದ ಸೃಷ್ಟಿ ಆಗಿದ್ದರಿಂದ ಕಾಲೇಜಿಗೆ ಶುಕ್ರವಾರದಿಂದ ಘೋಷಿಸಿದ್ದ ರಜೆಯನ್ನು ಸೋಮವಾರಕ್ಕೂ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡಾ ಪಿಯು ತರಗತಿಗಳು ನಡೆದಿಲ್ಲ.

ಕಳೆದ ಗುರುವಾರದಿಂದ ಭಾರತ್ ಪ.ಪೂ.ಕಾಲೇಜಿನ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರ ತರಗತಿಗೆ ಪ್ರವೇಶಿಸುವುದಕ್ಕೆ ಸರಕಾರದ ಆದೇಶ ಎಂಬ ಕಾರಣ ಮುಂದಿಟ್ಟು ಆಡಳಿತ ಸಮಿತಿ ನಿರ್ಬಂಧ ವಿಧಿಸಿದೆ. ಶುಕ್ರವಾರವೂ ಹಿಜಾಬ್ ಧರಿಸಿ ತರಗತಿಗೆ ಬರುವ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದ ಕಾರಣಕ್ಕೆ ಆಕ್ರೋಶ ಗೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ಸಾರಲಾಗಿತ್ತು. ಈ ಬಗ್ಗೆ ಶಾಸಕ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆದಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ.

ಸೋಮವಾರ ತರಗತಿ ಆರಂಭವಾಗಬೇಕಿದ್ದರೂ ಮಂಗಳವಾರ ಶಿವರಾತ್ರಿ ರಜೆ ಇರುವ ಕಾರಣ ಬುಧವಾರದಿಂದ ಸರಕಾರದ ನಿಯಮ ಪಾಲನೆಯೊಂದಿಗೆ ತರಗತಿ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಪಾಠ ಮುಗಿದಿದೆ

ಹಿಜಾಬ್ ಸಮಸ್ಯೆ ಏನಿದ್ದರೂ ಆಡಳಿತ ಮಂಡಳಿ ತೀರ್ಮಾನ. ಸದ್ಯ ಪಠ್ಯ ಚಟುವಟಿಕೆ ಮುಗಿದಿದೆ. ಈ ವಿದ್ಯಾರ್ಥಿಗಳಿಗೆ ರಿವಿಜನ್ ಮಾಡುತ್ತಿದ್ದೇವೆ. ಮಾರ್ಚ್ 15 ರಂದು ಸಿದ್ದತಾ ಪರೀಕ್ಷೆ ಗೆ ವೇಳಾಪಟ್ಟಿ ಪ್ರಕಟ ಗೊಂಡಿದೆ. ಮಾರ್ಚ್ ಕೊನೆಯ ವಾರದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಭಾರತ್ ಪಪೂ ಕಾಲೇಜಿನ ಪ್ರಾಂಶುಪಾಲೆ ಕಲಾವತಿ ತಿಳಿಸಿದ್ದಾರೆ.

ಸರ್ಕಾರದ ನಿಯಮ ಪಾಲನೆ

 ಭಾರತ್ ಪಪೂ ಕಾಲೇಜು ಅನುದಾನಿತ ಕಾಲೇಜು. ಆದ್ದರಿಂದ ಬುಧವಾರದಿಂದ ಸರಕಾರದ ನಿಯಮ ಪಾಲನೆಯೊಂದಿಗೆ ತರಗತಿ ಆರಂಭಿಸಲಾಗುವುದು.

ಮನೋಜ್ ಸಾಲ್ಯಾನ್, ಆಡಳಿತ ಮಂಡಳಿ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News