ಬಿಜೆಪಿ ಶಾಸಕನ ಮುಸ್ಲಿಂ ವಿರೋಧಿ ಟೀಕೆ, ವ್ಯಕ್ತಿಯ ಹತ್ಯೆ ಕುರಿತು ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ
ಪಾಟ್ನಾ,ಫೆ.28: ಹಲವಾರು ವಿಷಯಗಳ ಕುರಿತು ನಿತೀಶಕುಮಾರ ಸರಕಾರವನ್ನು ಪೇಚಿಗೆ ಸಿಲುಕಿಸಲು ನಿರ್ಧರಿಸಿದ್ದ ಪ್ರತಿಪಕ್ಷಗಳ ಕೋಲಾಹಲದಿಂದಾಗಿ ಕಲಾಪ ಸಲಹಾ ಸಮಿತಿಯ ತುರ್ತುಸಭೆಗಾಗಿ ಬಿಹಾರ ವಿಧಾನಸಭೆಯನ್ನು ಸೋಮವಾರ ಮುಂದೂಡುವಂತಾಗಿತ್ತು.
ಪೂರ್ವಾಹ್ನ 11 ಗಂಟೆಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಪ್ರತಿಪಕ್ಷಗಳ ಹಲವಾರು,ಮುಖ್ಯವಾಗಿ ಆರ್ಜೆಡಿಯ ಸದಸ್ಯರು ಸದನದ ಬಾವಿಗೆ ಲಗ್ಗೆಯಿಟ್ಟು ಬಿಜೆಪಿ ಶಾಸಕ ಹರಿಭೂಷಣ ಠಾಕೂರ್ ಬಚೌಲ್ ಅವರ ಅಮಾನತಿಗೆ ಆಗ್ರಹಿಸಿದರು.
ಕಳೆದ ವಾರ ಮಾಧ್ಯಮಗಳಿಗೆ ನೀಡಿದ್ದ ಮುಸ್ಲಿಂ ವಿರೋಧಿ ಹೇಳಿಕೆಗಾಗಿ ಬಚೌಲ್ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತದಲ್ಲಿ ವಾಸವಾಗಿರುವ ಮುಸ್ಲಿಮರ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಬೇಕು ಮತ್ತು ಅವರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸಬೇಕು ಎಂದು ಬಚೌಲ್ ಹೇಳಿದ್ದರು.
ಸ್ಪೀಕರ್ ವಿ.ಕೆ.ಸಿನ್ಹಾ ಅವರು ಪದೇ ಪದೇ ಮನವಿ ಮಾಡಿಕೊಂಡ ಬಳಿಕ ತಮ್ಮ ಆಸನಗಳಿಗೆ ಮರಳಿದ ಪ್ರತಿಪಕ್ಷ ಶಾಸಕರು ತಮ್ಮನ್ನು ಕಳವಳಕ್ಕೀಡು ಮಾಡಿರುವ ವಿಷಯಗಳನ್ನು ಅವರಿಗೆ ವಿವರಿಸಿದರು.
ಬಚೌಲ್ ಟೀಕೆಯಲ್ಲದೆ ಸಮಷ್ಟಿಪುರದಲ್ಲಿ ಶಂಕಿತ ಗೋರಕ್ಷಕರಿಂದ ಜೆಡಿಯುದ ಮುಸ್ಲಿಂ ಕಾರ್ಯಕರ್ತನ ಹತ್ಯೆ ಮತ್ತು ಪಾನನಿಷೇಧ ಜಾರಿಯಲ್ಲಿ ಪೊಲೀಸರ ಅತಿರೇಕಗಳ ಬಗ್ಗೆಯೂ ಪ್ರತಿಪಕ್ಷ ಸದಸ್ಯರು ಪ್ರಸ್ತಾಪಿಸಿದರು.
ಸರಕಾರದ ಪರವಾಗಿ ಉತ್ತರ ನೀಡಲು ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ ಚೌಧರಿ ಮುಂದಾದರಾದರೂ,ಅತೃಪ್ತ ಪ್ರತಿಪಕ್ಷ ಸದಸ್ಯರು ಕಲಾಪ ಸಲಹಾ ಸಮಿತಿಯ ಸಭೆಗಾಗಿ ಒತ್ತಾಯವನ್ನು ಮುಂದುವರಿಸಿದ್ದರು. 11:45ಕ್ಕೆ ಸಭೆಯನ್ನು ಕರೆದ ಸ್ಪೀಕರ್ ಅದಕ್ಕಾಗಿ ಸದನವನ್ನು ಮುಂದೂಡಿದರು.