ವಲಸೆ ಕಾರ್ಮಿಕರಿಗೆ ವೇತನ ವಂಚನೆ

Update: 2022-03-01 11:10 GMT

ಜಗತ್ತಿನಾದ್ಯಂತ ಕೊರೋನ ಹಾವಳಿಯ ಭೀಕರತೆಗೆ ಸಾಕ್ಷಿಯಾದ 2020ರ ಜೂನ್ ಹಾಗೂ 2021ರ ಡಿಸೆಂಬರ್ ನಡುವಿನ ಅವಧಿಯಲ್ಲಿ ಭಾರತ, ಇಂಡೋನೇಶ್ಯ, ಬಾಂಗ್ಲಾದೇಶ, ನೇಪಾಳ ಹಾಗೂ ಫಿಲಿಪ್ಫೀನ್ಸ್ ದೇಶಗಳ 3106ಕ್ಕೂ ಅಧಿಕ ವಲಸೆ ಕಾರ್ಮಿಕರು ತಮಗೆ ನ್ಯಾಯವಾಗಿ ದೊರೆಯಬೇಕಾಗಿದ್ದ ಒಟ್ಟು 25.5 ದಶಲಕ್ಷ ಡಾಲರ್ ಮೊತ್ತದ ವೇತನಗಳಿಂದ ವಂಚಿತರಾಗಿದ್ದಾರೆಂದು ‘ಮಧ್ಯಪ್ರಾಚ್ಯ ದೇಶಗಳಲ್ಲಿ ದಕ್ಷಿಣ ಏಶ್ಯದ ಕಾರ್ಮಿಕರ ವೇತನ ಕಳವು’ (wage theft from south asian workers)ಕುರಿತ ವರದಿಯೊಂದು ಬಹಿರಂಗಪಡಿಸಿದೆ.

ಮಾಲಕರು ಹಾಗೂ ನೇಮಕಾತಿ ಸಂಸ್ಥೆಗಳು ಕಾರ್ಮಿಕರ ವೇತನ ಪಾವತಿಯಲ್ಲಿ ಹಾಗೂ ಅವರಿಗೆ ಲಭ್ಯವಾಗಬೇಕಾದ ಸವಲತ್ತುಳ ನೀಡಿಕೆಯಲ್ಲಿ ಮಾಡುವ ಉಲ್ಲಂಘನೆಗಳನ್ನು ‘ವೇತನ ಕಳವು’ ಎಂದು ವರದಿಯಲ್ಲಿ ಪರಿಗಣಿಸಲಾಗಿದೆ.

‘ವೇತನ ಕಳವಿನ ವಿರುದ್ಧ ನ್ಯಾಯಕ್ಕಾಗಿ ಅಭಿಯಾನ’ (justice for wage theft      ) ಕುರಿತ ವೆಬ್‌ಸೈಟ್ ಮೂಲಕ ಸಂಗ್ರಹಿಸಲಾದ ಕಾರ್ಮಿಕರ ವೇತನ ಚೀಟಿ (ಪೇಸ್ಲಿಪ್)ಗಳು ಹಾಗೂ ಕಂಪೆನಿ ಪತ್ರಗಳು ಮತ್ತಿತರ ದಾಖಲೆಗನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ 14 ತಿಂಗಳುಗಳ ಅವಧಿಯಲ್ಲಿ ಪ್ರತಿಯೊಬ್ಬಕಾರ್ಮಿಕನಿಗೆ ಸರಾಸರಿ 7,217 ಡಾಲರ್ ವೇತನ ಪಾವತಿಯಾಗಿಲ್ಲವೆಂದು ಏಶ್ಯದಲ್ಲಿನ ವಲಸಿಗರ ವೇದಿಕೆಯು ಸಿದ್ಧಪಡಿಸಿರುವ ಪ್ರತ್ಯೇಕ ವರದಿಯೊಂದು ಅಂದಾಜಿಸಿದೆ.

ಭಾರತದಲ್ಲಿ ವೇತನ

ಮಧ್ಯಪ್ರಾಚ್ಯದ ಐದುರಾಷ್ಟ್ರಗಳಲ್ಲಿ 2 ಸಾವಿರಕ್ಕೂ ಅಧಿಕ ಕಾರ್ಮಿಕರಿಂದ 19.2 ದಶಲಕ್ಷ ಡಾಲರ್ ಮೊತ್ತದ ವೇತನ ಹಾಗೂ ಇತರ ಬಾಕಿ ಹಣ ನೀಡದೆ ವಂಚಿಸಲಾಗುತ್ತಿದೆಯೆಂಬುದನ್ನು ವೇತನ ಕಳವು ಕುರಿತ ದತ್ತಾಂಶವು ತೋರಿಸಿಕೊಟ್ಟಿದೆ. ಭಾರತದಲ್ಲಿ ಸಾವಿರಾರು ಕಾರ್ಮಿಕರು 16.3 ದಶಲಕ್ಷ ಡಾಲರ್‌ಗಿಂತಲೂ ತಮಗೆ ಲಭಿಸಬೇಕಾಗಿದ್ದ ಹಣದಿಂದ ವಂಚಿತರಾಗಿದ್ದಾರೆ.

ಮಧ್ಯ ಏಶ್ಯ ಪ್ರಾಂತದಲ್ಲಿ ಕಾರ್ಮಿಕರಿಗೆ ಅವರ ಬಾಕಿ ವೇತನವನ್ನು ನೀಡದೆ ಇರುವ ವಲಯಗಳಲ್ಲಿ ಕಟ್ಟಡ ನಿರ್ಮಾಣ ವಲಯವು ಅತ್ಯಂತ ಕುಖ್ಯಾತವಾಗಿದೆ.ಈ ಸಮಸ್ಯೆ ನಿವಾರಣೆಗೆ ಇರುವ ಮಾರ್ಗಗಳೆಂದರೆ, ಸರಕಾರವುಸಂಧಾನದ ಮೂಲಕ ವೇತನ ಬಾಕಿಯನ್ನು ಇತ್ಯರ್ಥಪಡಿಸಬೇಕು, ವೇತನ ಕಳವಿನ ಪ್ರಕರಣಗಳಲ್ಲಿ ಖಾಸಗಿ ವಲಯದ ಮಾಲಕರನ್ನು ಕಾನೂನುಕ್ರಮಗಳ ಮೂಲಕ ಹೊಣೆಗಾರರನ್ನಾಗಿ ಮಾಡಬೇಕೆಂದು ಏಶ್ಯದಲ್ಲಿನ ವಲಸಿಗ ವೇದಿಕೆ ವರದಿ ತಿಳಿಸಿದೆ.

‘‘ವಿಶ್ವದಾದ್ಯಂತ ದೈತ್ಯಾಕಾರವಾಗಿ ಕಾಡುತ್ತಿರುವ ಈ ವೇತನ ವಂಚನೆಯ ಸಮಸ್ಯೆಯ ಒಂದು ಭಾಗವನ್ನಷ್ಟೇ ಏಶ್ಯದ ವಲಸಿಗ ವೇದಿಕೆಯ ವರದಿಯು ಬಯಲಿಗೆಳೆದಿದೆ. ದಾಖಲೀಕರಣದ ಕೊರತೆಯಿಂದಾಗಿ ಇತರ ಅಸಂಖ್ಯ ಪ್ರಕರಣಗಳು ವರದಿಯಾಗದೆ ಉಳಿದಿವೆ ಹಾಗೂ ಅಗೋಚರವಾಗಿವೆ’’ ಎಂದು ವೇದಿಕೆಯ ಪ್ರಾದೇಶಿಕ ಸಮನ್ವಯಕಾರರಾಗಿರುವ ವಿಲಿಯಂ ಗೋಯಿಸ್ ತಿಳಿಸಿದ್ದಾರೆ.

  ಸೂಕ್ತ ನಿಯಮಾವಳಿಗಳು ಹಾಗೂ ಅಹವಾಲುಗಳ ಇತ್ಯರ್ಥದಲ್ಲಿನ ಕೊರತೆಯು, ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆಯೆಂದು 2021ರ ಆಗಸ್ಟ್‌ನಲ್ಲಿ ವೇತನ ಕಳವು ಕುರಿತ ಪ್ರತ್ಯೇಕ ವರದಿಯೊಂದು ತಿಳಿಸಿದೆ. 2019 ಹಾಗೂ 2020ರ ಸಾಲಿನಲ್ಲಿ ಇತ್ಯರ್ಥವಾಗದೆ ಉಳಿದ ಕಾರ್ಮಿಕ ವ್ಯಾಜ್ಯ ಪ್ರಕರಣಗಳ ಸಂಖ್ಯೆಯು 6988 ಆಗಿದೆ. (ಯುಎಇ ಹೊರತುಪಡಿಸಿ ಗಲ್ಫ್ ಸಹಕಾರ ಮಂಡಳಿ ದೇಶಗಳನ್ನು ಮಾತ್ರವೇ ಈ ಅಂಕಿಅಂಶವು ಒಳಗೊಂಡಿದೆ) ಎಂದು ಅದು ಹೇಳಿದೆ.

  ‘‘ಕೊರೋನ ವೈರಸ್ ಹಾವಳಿ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾದ ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಸ್ವದೇಶಕ್ಕೆ ಕಳುಹಿಸುವ ಕಾರ್ಯಾಚರಣೆಯನ್ನು ಅವರ ಮಾತೃದೇಶ ಹಾಗೂ ಅವರು ಉದ್ಯೋಗದಲ್ಲಿರುವ ದೇಶಗಳು ಅವಸರವಸರವಾಗಿ ನಡೆಸಿದ್ದವು. ಆದರೆ ನ್ಯಾಯಾಲಯಗಳು ಹಾಗೂ ಕಾರ್ಮಿಕ ವಿವಾದ ಇತ್ಯರ್ಥಗೊಳಿಸುವ ವ್ಯವಸ್ಥೆಗಳು ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿದ್ದರಿಂದ ಸೂಕ್ತವಾದ ಬಾಕಿ ವೇತನ ಪಾವತಿ ಕಾರ್ಯವಿಧಾನವಿಲ್ಲದೆ ಅನೇಕ ಕಾರ್ಮಿಕರು ಬರಿಗೈಯಲ್ಲಿ ತಾಯ್ನೆಡಿಗೆ ವಾಪಸಾಗಬೇಕಾಯಿತು’’ ಎಂದು ‘ವೇತನ ಕಳವಿನ ವಿರುದ್ಧ ನ್ಯಾಯ’ ಅಭಿಯಾನದ ವೆಬ್‌ಸೈಟ್ ಹೇಳಿದೆ. ‘‘ವೇತನ ಪಾವತಿಯಲ್ಲಿ ವಂಚನೆಯ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ ಮತ್ತು ಅವುಗಳನ್ನು ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಅಥವಾ ಈಗ ಅಸ್ತಿತ್ವದಲ್ಲಿರುವ ವ್ಯಾಜ್ಯ ಪರಿಹಾರ ಕಾರ್ಯವಿಧಾನಗಳ ಮೇಲಿನ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ’’ ಎಂದು ಅದು ಹೇಳಿದೆ.

 ಕೇರಳದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಕೊರೋನ ಹಾವಳಿಯ ಸಂದರ್ಭದಲ್ಲಿ ಆ ರಾಜ್ಯದ 5 ಲಕ್ಷಕ್ಕೂ ಅಧಿಕ ಕಾರ್ಮಿಕರು ಉದ್ಯೋಗ ಕಳೆದುಕೊಂಡು ತಾಯ್ನೋಡಿಗೆ ವಾಪಾಸಾದರು. ಆ ಸಂದರ್ಭದಲ್ಲಿ ಕೇರಳ ಸರಕಾರವು ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಯು ಉಚಿತ ಸಹಾಯವಾಣಿಯನ್ನು ಆರಂಭಿಸಿತು ಹಾಗೂ ವೇತನ ಕಳವು ಪ್ರಕರಣಗಳ ಬಗ್ಗೆ ವರದಿ ಮಾಡಲು ದೂರು ಅರ್ಜಿಗಳನ್ನು ಒದಗಿಸಲಾಗಿತ್ತು. 600ಕ್ಕೂ ಅಧಿಕ ದೂರುಗಳು ಆರಂಭದಲ್ಲೇ ಬಂದಿದ್ದು, ಆನಂತರ ಅವುಗಳ ಸಂಖ್ಯೆ ಇನ್ನೂ ಹೆಚ್ಚಾಗಿತ್ತು. ಆದಾಗ್ಯೂ ಇದರಿಂದ ಹೆಚ್ಚೇನೂ ಪ್ರಯೋಜನವಾಗಿಲ್ಲ.

 ಆನಂತರ ಆಂಧ್ರಪ್ರದೇಶ ಸರಕಾರ ಕೂಡಾ ರಾಜ್ಯಕ್ಕೆ ವಾಪಸಾಗುತ್ತಿರುವ ವಲಸಿಗರ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಿತ್ತು. ದೇಶೀಯ ಕಾರ್ಮಿಕ ಮಾರುಕಟ್ಟೆಯಲ್ಲಿ ಅವರನ್ನು ಮರುಸಂಯೋಜಿಸಲು ಅಥವಾ ಅವರು ಮತ್ತೆ ವಲಸೆ ಹೋಗಲು ನೆರವಾಗುವ ನಿಟ್ಟಿನಲ್ಲಿ ದತ್ತಾಂಶ ಸಂಗ್ರಹ ಕಾರ್ಯವನ್ನು ಆರಂಭಿಸಿತ್ತು. ಆದರೆ ಆ ಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು.

 ಕಾರ್ಮಿಕರ ವಾಪಸಾತಿ ಹಾಗೂ ಅವರನ್ನು ದೇಶೀಯ ಕಾರ್ಮಿಕ ಮಾರುಕಟ್ಟೆಯಲ್ಲಿ ಮರುಸಂಯೋಜಿಸುವ ಪ್ರಯತ್ನಗಳನ್ನು ಯಾವಾಗಲೂ ಸಮಸ್ಯೆ ಉದ್ಭವವಾದ ಬಳಿಕವೇ ಕೈಗೊಳ್ಳಲಾಗುತ್ತದೆ ಹಾಗೂ ಸರಕಾರಗಳು ಈ ಉದ್ದೇಶಕ್ಕಾಗಿ ಆರ್ಥಿಕ ಸಂಪನ್ಮೂಲಗಳನ್ನು ಮೀಸಲಿಡುವುದು ತೀರಾ ಅಪರೂಪವಾಗಿದೆ. ಇದರ ಪರಿಣಾಮವಾಗಿಯೇ ದೇಶದ ಆರ್ಥಿಕತೆಗೆ ಹಾಗೂ ಸಾಮಾಜಿಕ ಸುಸ್ಥಿತಿಗೆ ಕೊಡುಗೆ ನೀಡುವವರನ್ನು ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗುವಂತಾಯಿತು’’ ಎಂದು ವರದಿ ವಿಷಾದ ವ್ಯಕ್ತಪಡಿಸಿತ್ತು.

ಕೃಪೆ: qz.com

Writer - ಅನನ್ಯ ಭಟ್ಟಾಚಾರ್ಯ

contributor

Editor - ಅನನ್ಯ ಭಟ್ಟಾಚಾರ್ಯ

contributor

Similar News