ನಿಷೇಧದ ವಿರುದ್ಧ ಮೀಡಿಯಾ ಒನ್ ಮನವಿ: ಬುಧವಾರ ಕೇರಳ ಹೈಕೋರ್ಟ್ ತೀರ್ಪು ನಿರೀಕ್ಷೆ

Update: 2022-03-01 17:09 GMT

ಕೊಚ್ಚಿ,ಮಾ.1: ಪರವಾನಗಿಯನ್ನು ನವೀಕರಿಸದೆ ಇರುವ ಮೂಲಕ ತನ್ನ ಪ್ರಸಾರವನ್ನು ತಡೆಗಟ್ಟುವ ಕೇಂದ್ರ ಸರಕಾರದ ನಿರ್ಧಾರವನ್ನು ಎತ್ತಿಹಿಡಿದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್‌ ನ ಮೇಲ್ಮನವಿಯ ಕುರಿತ ತನ್ನ ತೀರ್ಪನ್ನು ಕೇರಳ ಹೈಕೋರ್ಟ್ ಬುಧವಾರ ಘೋಷಿಸುವ ನಿರೀಕ್ಷೆಯಿದೆ.

ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಮೀಡಿಯಾ ಒನ್ ಸುದ್ದಿ ವಾಹಿನಿಯ ಜೊತೆಗೆ ಅದರ ಸಂಪಾದಕ ಸೇರಿದಂತೆ ಕೆಲವು ಉದ್ಯೋಗಿಗಳು ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ಸಲ್ಲಿಸಿದ ಮನವಿಗಳನ್ನೂ ಫೆಬ್ರವರಿ 8ರಂದು ಕೇರಳ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ತಳ್ಳಿಹಾಕಿತ್ತು.

ಮೀಡಿಯಾ ಒನ್ ಸುದ್ದಿವಾಹಿನಿಯ ಪರವಾನಗಿಯನ್ನು ನವೀಕರಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೂರು ಅರ್ಜಿಗಳ ಕುರಿತ ತನ್ನ ತೀರ್ಪನ್ನು ಬುಧವಾರ ಪ್ರಕಟಿಸುವುದದಾಗಿ ಕೇರಳ ಹೈಕೋರ್ಟ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ  ಪ್ರಕಟಿಸಿದೆ.

ನ್ಯಾಯಯುತವಾದ ಹಾಗೂ ನೈಜವಾದ ಸುದ್ದಿಗಳ ವರದಿಗಾರಿಕೆಗಾಗಿ ತನ್ನನ್ನು ಬಲಿಪಶು ಮಾಡಲಾಗಿದೆಯೆಂದು ಮೀಡಿಯಾ ಒನ್‌ನ ಮಾಲಕಸಂಸ್ಥೆಯಾದ ಮಾಧ್ಯಮಂ ಬ್ರಾಡ್ಕಾಸ್ಟಿಂಗ್ ಲಿಮಿಟೆಡ್ ಆಪಾದಿಸಿದೆ.
 
ಮೀಡಿಯಾ ಒನ್ ಮೇಲಿನ ನಿಷೇಧವನ್ನು ಸಮರ್ಥಿಸಲು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯುಂಟಾಗಿದೆಯೆಂಬ ಕಾರಣವನ್ನು ನೀಡಿರುವುದು ಕೇವಲ ತಂತ್ರೋಪಾಯವಾಗಿದೆ ಹಾಗೂ ಆಧಾರರಹಿತವೆಂದು ಅರ್ಜಿಯಲ್ಲಿ ವಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News