'ನಮ್ಮ ಮಗಳು ಸುರಕ್ಷಿತವಾಗಿ ಮನೆ ಸೇರಿದರೆ ಸಾಕು'
ಮಂಗಳೂರು, ಮಾ.2: ‘‘ಸದ್ಯ ನಮ್ಮ ಮಗಳು ರೊಮೇನಿಯಾ ವಿಮಾನ ನಿಲ್ದಾಣದ ಸಮೀಪ ಆಶ್ರಯ ಪಡೆದಿದ್ದು, ಸುರಕ್ಷಿತವಾಗಿದ್ದಾಳೆಂಬ ಸುದ್ದಿ ಕೇಳಿ ನಾವು ನಿಟ್ಟುಸಿರು ಬಿಟ್ಟಿದ್ದೇವೆ. ಆಕೆ ಸುರಕ್ಷಿತವಾಗಿ ಮನೆ ಸೇರಿದರೆ ಸಾಕು’’ ಎಂದು ಮಂಗಳೂರು ಬಿಜೈ ನಿವಾಸಿ, ಉಕ್ರೇನ್‌ನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿ ಅನುಷಾ ಹೆತ್ತವರ ಮಾತಿದು.
ಕಳೆದ ಕೆಲ ದಿನಗಳಿಂದ ನಾವು ತುಂಬಾ ಆತಂಕಕ್ಕೆ ಒಳಗಾಗಿದ್ದೆವು. ಆಕೆ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಳು. ನಿನ್ನೆ ಆಕೆ ಹಾಗೂ ಇತರ ಹಲವು ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ರೊಮೇನಿಯಾ ವಿಮಾನ ನಿಲ್ದಾಣ ತಲುಪಿರುವುದು ನಮಗೆಲ್ಲಾ ನೆಮ್ಮದಿ ತಂದಿದೆ ಎಂದು ಅನುಷಾ ತಾಯಿ ಅಭಿಪ್ರಾಯಿಸಿದ್ದಾರೆ.
‘‘2019ರಿಂದ ಯುಕ್ರೇನ್‌ನಲ್ಲಿ ಅನುಷಾ ಎಂಬಿಬಿಎಸ್ ಓದುತ್ತಿದ್ದಾಳೆ. ಪ್ರತಿ ವರ್ಷ ರಜೆಯಲ್ಲಿ ಊರಿಗೆ ಬಂದು ಹೋಗುತ್ತಿದ್ದಳು. ಕೋವಿಡ್‌ನಿಂದಾಗಿ ಒಂದು ವರ್ಷ ಆನ್‌ಲೈನ್‌ನಲ್ಲೇ ಪಾಠ ನಡೆದಿತ್ತು. 2021ರ ಆಗಸ್ಟ್‌ನಲ್ಲಿ ಮತ್ತೆ ಅಂತಿಮ ವರ್ಷದ ಎಂಬಿಬಿಎಸ್ ಗಾಗಿ ತೆರಳಿದ್ದಳು. ಇನ್ನೇನು ಜೂನ್‌ನಲ್ಲಿ ಅವರ ಅಂತಿಮ ವರ್ಷದ ಪರೀಕ್ಷೆ ನಡೆಯಬೇಕಿತ್ತು. ಅಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರೀಕ್ಷೆ ಆನ್‌ಲೈನ್ ಅಥವಾ ಆಫ್‌ಲೈನ್ ನಡೆಯುವುದೋ ಎಂಬ ಚರ್ಚೆಯ ನಡೆವೆ ಇಂತಹ ಘಟನೆಗಳು ನಡೆದಿದೆ. ಆಕೆಯ ಶೈಕ್ಷಣಿಕ ಭವಿಷ್ಯದ ಬಗ್ಗೆ ಆಕೆ ಸುರಕ್ಷಿತವಾಗಿ ಮನೆಗೆ ಬಂದು ಸೇರಿದ ಮೇಲೆ ತೀರ್ಮಾನಿಸಿದರಾಯಿತು’’ ಎಂದು ಅನುಷಾ ತಾಯಿ ಹೇಳಿಕೊಂಡಿದ್ದಾರೆ.
‘‘ಮೊದಲ ವರ್ಷ ಆಕೆ ಅಲ್ಲಿ ಕಾಲೇಜು ಹಾಸ್ಟೆಲ್‌ನಲ್ಲಿಯೇ ವಾಸ್ತವ್ಯವಿದ್ದರು. ಬಳಿಕ ಅಲ್ಲೇ ಆಕೆ ಸ್ನೇಹಿತೆಯರ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅಡುಗೆಯೆಲ್ಲಾ ಅವರೇ ಮಾಡಿಕೊಂಡಿದ್ದರು. ಅಲ್ಲಿನ ಜನರು, ಶಿಕ್ಷಕರು, ಎಲ್ಲರೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿರುವ ಬಗ್ಗೆ ಆಕೆ ಹೇಳಿಕೊಳ್ಳುತ್ತಿದ್ದಳು. ಶಿಕ್ಷಕರು ಮಕ್ಕಳ ಜತೆ ಅದೆಷ್ಟು ಅನ್ಯೋನ್ಯತೆ ಬೆಳೆಸಿದ್ದರೆಂದರೆ, ನನ್ನ ಮಗಳು ಸಸ್ಯಾಹಾರಿ ಆಗಿದ್ದ ಕಾರಣ ಆಕೆಯ ಉಪನ್ಯಾಸಕರೊಬ್ಬರು ಅವರ ಮನೆಯಲ್ಲಿ ಪಾಲಕ್ ಬೆಳೆಸಿದ್ದನ್ನು ತಂದು ನೀಡುತ್ತಿದ್ದರಂತೆ’’ ಎಂದು ಅನುಷಾ ತಾಯಿ ಹೇಳಿದರು.
‘‘ಸದ್ಯ ಆಕೆ ಭಾರತದ ಸುಮಾರು 300 ಜನ ಇತರ ವಿದ್ಯಾರ್ಥಿಗಳ ಜತೆ ರೊಮೇನಿಯಾದ ವಿಮಾನ ನಿಲ್ದಾಣದ ಬಳಿಕ ಬಾಸ್ಕೆಟ್‌ಬಾಲ್ ಕೋರ್ಟ್ ಆವರಣದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಯೂ ಎಲ್ಲವೂ ಉತ್ತಮವಾಗಿದೆ ಎಂದು ಇಂದು ಬೆಳಗ್ಗೆಯೂ ಮೊಬೈಲ್ ಸಂದೇಶದ ಮೂಲಕ ತಿಳಿಸಿದ್ದಾಳೆ’’ ಎಂದು ಅನುಷಾ ತಾಯಿ ಹೇಳಿದರು.