ಟೆನಿಸ್: ರಶ್ಯದ ಆಟಗಾರ್ತಿಯನ್ನು ಸೋಲಿಸಿದ ಉಕ್ರೇನ್‌ನ ಸ್ವಿಟೋಲಿನ

Update: 2022-03-02 18:58 GMT

ಮೋಂಟರೇ (ಮೆಕ್ಸಿಕೊ), ಮಾ. 2: ಮೆಕ್ಸಿಕೊದ ಮೋಂಟರೇಯಲ್ಲಿ ನಡೆಯುತ್ತಿರುವ ಮೋಂಟರೇ ಓಪನ್ ಟೆನಿಸ್ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಯುಕ್ರೇನ್‌ನ ಎಲಿನಾ ಸ್ವಿಟೋಲಿನ ರಶ್ಯದ ಅನಾಸ್ತೇಶಿಯ ಪೊಟಪೊವರನ್ನು 6-2, 6-1 ಸೆಟ್‌ಗಳಿಂದ ಸೋಲಿಸಿದ್ದಾರೆ.

‘‘ಪಂದ್ಯವನ್ನು ಬಹಿಷ್ಕರಿಸುವ ಬದಲು ಆಡುವ ಮೂಲಕ ನಾನು ದೇಶಕ್ಕಾಗಿ ಹೆಚ್ಚಿನದನ್ನು ಮಾಡಬಹುದು ಎಂಬ ನಿರ್ಧಾರಕ್ಕೆ ಬಂದೆ’’ ಎಂದು ಪಂದ್ಯದ ಬಳಿಕ ಮಾತನಾಡಿದ ಸ್ವಿಟೋಲಿನ ಹೇಳಿದರು.

 ಇದಕ್ಕೂ ಮೊದಲು, ರಶ್ಯ ಮತ್ತು ಬೆಲಾರುಸ್‌ನ ಸ್ಪರ್ಧಿಗಳು ಯಾವುದೇ ರಾಷ್ಟ್ರೀಯ ಸಂಕೇತಗಳು, ಧ್ವಜಗಳು ಅಥವಾ ರಾಷ್ಟ್ರಗೀತೆಯನ್ನು ಬಳಸುವುದನ್ನು ಅಂತರ್‌ರಾಷ್ಟ್ರೀಯ ಟೆನಿಸ್ ಫೆಡರೇಶನ್‌ಹಾಗೂ ಪುರುಷ ಮತ್ತು ಮಹಿಳಾ ಟೆನಿಸ್ ಟೂರ್‌ಗಳು ನಿಷೇಧಿಸುವವರೆಗೆ ಈ ಪಂದ್ಯಾವಳಿಯಲ್ಲಿ ನಾನು ಪೊಟಪೊವ ವಿರುದ್ಧ ಅಥವಾ ಯಾವುದೇ ರಶ್ಯ ಅಥವಾ ಬೆಲಾರುಸ್ ಸ್ಪರ್ಧಿಗಳ ವಿರುದ್ಧ ಆಡುವುದಿಲ್ಲ ಎಂದು ಅಗ್ರ ಶ್ರೇಯಾಂಕದ ಸ್ವಿಟೋಲಿನ ಹೇಳಿದ್ದರು.

ಟೆನಿಸ್ ಆಡಳಿತ ಮಂಡಳಿಗಳು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ರಶ್ಯ ಮತ್ತು ಬೆಲಾರುಸ್ ಆಟಗಾರರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು, ಆದರೆ ಅವರು ರಾಷ್ಟ್ರಧ್ವಜಗಳನ್ನು ಬಳಸುವಂತಿಲ್ಲ ಎಂದು ಹೇಳಿದವು.

‘‘ಇಂದಿನ ಪಂದ್ಯವು ನನ್ನ ಜೀವನದ ವಿಶೇಷ ಪಂದ್ಯವಾಗಿತ್ತು’’ ಎಂದು 27 ವರ್ಷದ ಸ್ವಿಟೋಲಿನ ಹೇಳಿದರು. ‘‘ನಾನು ಅತ್ಯಂತ ದುಃಖದಲ್ಲಿದ್ದೇನೆ. ನಾನು ಇಲ್ಲಿ ಟೆನಿಸ್ ಆಡುತ್ತಿದ್ದೇನೆ. ನನ್ನೆಲ್ಲ ಗಮನ ಕೇಂದ್ರೀಕರಿಸಿ ಆಡಿದ್ದೇನೆ. ನಾನು ನನ್ನ ದೇಶದ ಪರವಾಗಿ ಕೆಲಸ ಮಾಡಿದ್ದೇನೆ’’ ಎಂದರು.

ಸ್ವಿಟೋಲಿನ ಪಡೆದ ಗರಿಷ್ಠ ವಿಶ್ವ ರ್ಯಾಂಕಿಂಗ್ 3. ಈಗ 15ನೇ ರ್ಯಾಂಕಿಂಗ್ ಹೊಂದಿದ್ದಾರೆ. ‘‘ನಾನು ರಶ್ಯದ ಯಾವುದೇ ಕ್ರೀಡಾಪಟುಗಳನ್ನು ದೂಷಿಸುವುದಿಲ್ಲ. ನಮ್ಮ ನೆಲದ ಮೇಲೆ ನಡೆಯುತ್ತಿರುವ ಆಕ್ರಮಣಕ್ಕೆ ಅವರು ಕಾರಣರಲ್ಲ’’ ಎಂಬುದಾಗಿಯೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News