ಅಧಿಕಾರ ಉಳಿಸಿಕೊಳ್ಳಲು ಉಗ್ರರಿಗೆ 15.6 ಕೋ. ರೂ. ಲಂಚ ನೀಡಿದ ಬಿಜೆಪಿ ಸರಕಾರ: ಜೈರಾಮ್ ರಮೇಶ್ ಆರೋಪ‌

Update: 2022-03-03 17:11 GMT
ಸಾಂದರ್ಭಿಕ ಚಿತ್ರ

ಗುವಾಹತಿ, ಮಾ. 4: ಮಣಿಪುರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಅಲ್ಲಿನ ಬಿಜೆಪಿ ನೇತೃತ್ವದ ಸರಕಾರ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ 16.6 ಕೋಟಿ ರೂಪಾಯಿಯನ್ನು ಕೆಲವು ಉಗ್ರರ ಗುಂಪುಗಳಿಗೆ ನೀಡಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಭಾರತದ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಆಘಾತಕಾರಿ ಹಾಗೂ ಸ್ಪಷ್ಟ ಉಲ್ಲಂಘನೆಯಲ್ಲಿ ಮಣಿಪುರ ಬಿಜೆಪಿ ಸರಕಾರ 1.1.2022ರಂದು ನಿಷೇಧಿತ ಉಗ್ರರ ಗುಂಪುಗಳಿಗೆ 15,70,32,000 ಬಿಡುಗಡೆ ಮಾಡಿದೆ. ಅಲ್ಲದೆ, 1.3.2022ರಲ್ಲಿ ಮತ್ತೆ 92,65,950 ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ ಹಾಗೂ ರಾಜ್ಯ ಸರಕಾರ ನೀಡಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹೇಳಿದ್ದಾರೆ. 

ಬೆಟ್ಟ ಪ್ರದೇಶದ ಜಿಲ್ಲೆಗಳಾದ ಚುರಚಂಡಪುರ ಹಾಗೂ ಕಂಗ್ಪೋಕ್ಪಿಯಲ್ಲಿ ಫೆಬ್ರವರಿ 28ರಂದು ನಡೆದ ಚುನಾವಣೆ ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ನಡೆಯದೇ ಇರುವುದು ಈ ಹಣ ಪಾವತಿಯಾಗಿರುವುದನ್ನು ಖಾತರಿಪಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ಅಮಾನತಿನಲ್ಲಿರಿಸಿದ ಗುಂಪುಗಳಿಗೆ ನೀಡಿದ ಲಂಚ ಮಾರ್ಚ್ 5ರಂದು ತೆಂಗನೌಪಾಲ್ ಹಾಗೂ ಚಂಡೇಲ್ ಜಿಲ್ಲೆಯಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಹಂತದ ಮತದಾನದ ಮೇಲೆ ಪ್ರಭಾವ ಬೀರಲಿದೆ ಎಂದು ರಮೇಶ್ ಹೇಳಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಮಣಿಪುರದಲ್ಲಿ ಚುನಾವಣೆಯನ್ನು ಖರೀದಿಸುತ್ತಿದೆ, ಭೀತಿ ಹಬ್ಬಿಸುತ್ತಿದೆ, ಮತದಾರರನ್ನು ಹೆದರಿಸುತ್ತಿದೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದ್ದಾರೆ. 

‘‘ಇದು ಬಿಜೆಪಿ ಸರಕಾರದ ದ್ವಿಮುಖ ನೀತಿಯನ್ನು ಪ್ರದರ್ಶಿಸಿದೆ. ರಾಜ್ಯ ಸರಕಾರದ ಉದ್ಯೋಗಿಗಳು ಎರಡು ತಿಂಗಳು ವೇತನ ಪಡೆಯದೇ ಇರುವಾಗ, ಮಧ್ಯಾಹ್ನದ ಊಟದ ಅಡುಗೆ ಮಾಡುವವರಿಗೆ 18 ತಿಂಗಳು ವೇತನ ನೀಡದೇ ಇರುವಾಗ, ರಾಜ್ಯ ಸರಕಾರದ ನಿವೃತ್ತ ಉದ್ಯೋಗಿಗಳು ತಮ್ಮ ಪಿಂಚಣಿಯನ್ನು ಕಳೆದ 6 ತಿಂಗಳು ಪಡೆಯದೇ ಇರುವಾಗ, ಸರಿಸುಮಾರು ಎಲ್ಲ ಪಿಂಚಣಿದಾರರು ತಮ್ಮ ನಿವೃತ್ತಿ ಸೌಲಭ್ಯಗಳನ್ನು ಪಡೆಯದೇ ಇರುವಾಗ ಉಗ್ರರ ಗುಂಪುಗಳಿಗೆ ಈ ಪಾವತಿ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News