ಕಡಬ: ಮನೆಗೆ ನುಗ್ಗಿ ನಗ-ನಗದು ಕಳವು
Update: 2022-03-04 13:02 IST
ಕಡಬ: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 42 ಸಾವಿರ ರೂ. ನಗದು ದೋಚಿರುವ ಘಟನೆ ತಾಲೂಕಿನ ಕೊಯಿಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಗಂಡಿಬಾಗಿಲು ಮಸೀದಿ ಬಳಿಯ ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಗುರುವಾರ ರಾತ್ರಿ ಆತೂರು ಮಸೀದಿಯಲ್ಲಿ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ಇದ್ದುದರಿಂದ ಮನೆಯವರು ಸಂಜೆ 7 ಗಂಟೆಯ ಹೊತ್ತಿಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಬಳಿಕ ರಾತ್ರಿ 11 ಗಂಟೆಯ ಹೊತ್ತಿಗೆ ಮರಳಿ ಮನೆಗೆ ಬಂದು ನೋಡಿದಾಗ ಕಪಾಟಿನಲ್ಲಿದ್ದ 14 ಪವನ್ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗಾನಾ ಪಿ. ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.