×
Ad

ಮಂಗಳೂರು: ಜೆಟ್ ಏರ್‌ನ ಅಧಿಕಾರಿಯಿಂದ ಹಣ ದುರುಪಯೋಗ ಆರೋಪ ಸಾಬೀತು

Update: 2022-03-04 19:01 IST

ಮಂಗಳೂರು: ಜೆಟ್ ಏರ್ ಲಿ. ಸಂಸ್ಥೆಯ ಹಿರಿಯ ಅಧಿಕಾರಿ ಹಣ ದುರುಪಯೋಗವೆಸಗಿದ ಆರೋಪ 2ನೇ ಸಿಜೆಎಂ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ತಲಾ (ಒಟ್ಟು 6) ಕೇಸಿಗೆ 3ವರ್ಷ 6ತಿಂಗಳು ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ವರದರಾಯ ನಾಯಕ್ (57) ಶಿಕ್ಷಗೊಳಗಾದ ಆರೋಪಿ. ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಜೆಟ್ ಏರ್ ಲಿ. ಸಂಸ್ಥೆಯಲ್ಲಿ ವರದರಾಯ ನಾಯಕ್ ಹಿರಿಯ ಅಧಿಕಾರಿಯಾಗಿ 1993-1999ರವರೆಗೆ ಕರ್ತವ್ಯನಿರ್ವಹಿಸಿಕೊಂಡಿದ್ದು, ಈ ಅವಧಿಯಲ್ಲಿ 18,78,507ರೂ. ದುರುಪಯೋಗಪಡಿಸಿಕೊಂಡಿದ್ದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ 1999ರ ಮಾ.3ರಂದು ಪ್ರತ್ಯೇಕ 6 ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2ನೇ ಸಿಜೆಎಂ. ನ್ಯಾಯಾಲಯದ ನ್ಯಾಯಾಧೀಶರಾದ ಶಿಲ್ಪಾ ಎ.ಜಿ. ಅವರು ಎಲ್ಲ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ಮಾ.4ರಂದು ವರದರಾಯ ನಾಯಕ್‌ನ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಐಪಿಸಿ 420ರಡಿಯ ಅಪರಾಧಕ್ಕಾಗಿ 3 ವರ್ಷ 6 ತಿಂಗಳ ಕಠಿಣ ಸಜೆ ಮತ್ತು 1ಲಕ್ಷ ರೂ.ದಂಡ, ದಂಡವನ್ನು ಪಾವತಿಸಲು ತಪ್ಪಿದಲ್ಲಿ 1 ವರ್ಷಗಳ ಸಾಮಾನ್ಯ ಸೆರೆಮನೆ ವಾಸ, ಐಪಿಸಿ 408ರಡಿಯ ಅಪರಾಧಕ್ಕಾಗಿ 3ವರ್ಷ 6ತಿಂಗಳ ಕಾಲ ಕಠಿಣ ಸಜೆ ಮತ್ತು 1ಲಕ್ಷ ರೂ. ದಂಡ, ದಂಡವನ್ನು ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸತಕ್ಕದೆಂದು ಆದೇಶಿಸಿದೆ.

ಆರೋಪಿಗೆ ಒಟ್ಟು 6 ಪ್ರಕರಣಗಳಲ್ಲಿ ಮೇಲೆ ತಿಳಿಸಿದಂತೆ ಶಿಕ್ಷೆ ಹಾಗೂ ಒಟ್ಟು 12ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲಿ ದಂಡದ ಮೊತ್ತ ಪಾವತಿಯಾದ ಬಳಿಕ 1.50ಲಕ್ಷ ರೂ. (ಒಟ್ಟು 9ಲಕ್ಷ ರೂ.) ಜೆಟ್ ಏರ್.ಲಿ. ಸಂಸ್ಥೆಗೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

ಜೆಟ್ ಸಂಸ್ಥೆಯ ಲೆಕ್ಕಪರಿಶೋಧಕ ಪರಮೇಶ್ವರನ್‌ರವರ ಲೆಕ್ಕಪರಿಶೋಧನಾ ಆಧಾರದಲ್ಲಿ ಹಿಂದಿನ ಇನ್‌ಸ್ಪೆಕ್ಟರ್ ವಿ.ಜೆ. ಕುಟಿನ್ನಾರವರು ತನಿಖೆ ನಡೆಸಿ ಪೊಲೀಸ್ ನಿರೀಕ್ಷಕ ಬಿ.ಎಸ್. ಶ್ರೀನಿವಾಸ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರಕಾರದ ಪರವಾಗಿ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸರಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News