×
Ad

‘ಮಗ ಆಹಾರ, ಬಸ್ ವ್ಯವಸ್ಥೆ ಸಿಗದೆ ಕಂಗಲಾಗಿದ್ದಾನೆ’: ಉಕ್ರೇನ್‌ನಲ್ಲಿರುವ ಕೆಮ್ಮಣ್ಣುವಿನ ವಿದ್ಯಾರ್ಥಿ ಪೋಷಕರ ಆತಂಕ

Update: 2022-03-04 22:18 IST

ಉಡುಪಿ, ಮಾ.4: ‘ನಮ್ಮ ಮಗ ಗ್ಲೆನ್ವಿಲ್ ಮ್ಯಾಕ್ವಿಲ್ ಫೆರ್ನಾಂಡಿಸ್ ಸದ್ಯ ಖಾರ್ಕೀವ್ ಗಡಿ ಪ್ರದೇಶದಲ್ಲಿದ್ದು, ಸರಿಯಾದ ಆಹಾರ ಹಾಗೂ ಬಸ್ ವ್ಯವಸ್ಥೆ ಸಿಗದೆ ಕಂಗಲಾಗಿದ್ದಾನೆ’ ಎಂದು ತೋನ್ಸೆ ಗ್ರಾಮದ ಕೆಮ್ಮಣ್ಣುವಿನ ಮೆಲ್ವಿನ್ ಫೆರ್ನಾಂಡಿಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಾ.3ರಂದು ಹಲವು ಗಂಟೆಗಳ ಕಾಲ ಮಗ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಮೆಲ್ವಿನ್ ರೊಡ್ರಿಗಸ್ ಮತ್ತು ಐಡಾ ದಂಪತಿ ತೀವ್ರ ಆತಂಕಕ್ಕೆ ಒಳಗಾಗಿದ್ದು, ನಮ್ಮ ಮಕ್ಕಳು ಎಲ್ಲಿದ್ದಾರೆಂಬ ಮಾಹಿತಿಯಾದರೂ ಕೊಡಿ ಎಂದು ಸರಕಾರಕ್ಕೆ ಮನವಿ ಮಾಡಿದ್ದರು. ಇದೀಗ ಮಗ ಸಂಪರ್ಕ ಸಿಕ್ಕಿರುವುದರಿಂದ ಈ ಕುಟುಂಬ ಸದ್ಯ ಸಮಾಧಾನಪಟ್ಟಿದೆ. ಆದರೆ ಮಗನ ಬರುವಿಕೆ ಬಗ್ಗೆ ಚಿಂತೆಗೆ ಒಳಗಾಗಿದೆ.

ಖಾರ್ಕೀವ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಗ್ಲೆನ್ವಿಲ್, ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಉಕ್ರೇನ್‌ಗೆ ತೆರಳಿದ್ದನು. ರಶ್ಯಾ ದಾಳಿಯ ಮಧ್ಯೆ ಸಿಲುಕಿರುವ ಗ್ಲೆನ್ವಿಲ್ ಹಾಗೂ ಅವರ ತಂಡ, ಖಾರ್ಕಿವ್ ಹಾಸ್ಟೆಲ್‌ನಿಂದ ಸುಮಾರು 30 ಕಿಲೋ ಮೀಟರ್ ನಡೆದುಕೊಂಡು ಹೋಗಿ ಖಾರ್ಕಿವ್ ಗಡಿ ತಲುಪಿದೆ ಎಂದು ತಿಳಿದುಬಂದಿದೆ.

ಈ ಕುರಿತು ವಾರ್ತಾಭಾರತಿಗೆ ಮಾಹಿತಿ ನೀಡಿದ ಮೆಲ್ವಿನ್ ಫೆರ್ನಾಂಡಿಸ್, ‘ಇಂದು ಸಂಜೆ ಒಂದು ಗಂಟೆ ಮೊದಲು ಮಗ ಸಂಪರ್ಕಕ್ಕೆ ಸಿಕ್ಕಿದ್ದಾನೆ. ಇವರ ತಂಡದಲ್ಲಿ ಮಗ ಸೇರಿದಂತೆ 540 ಮಂದಿ ಇದ್ದು, ಸದ್ಯ ಖಾರ್ಕೀವ್ ಗಡಿ ಪ್ರದೇಶದಲ್ಲಿದ್ದಾರೆ. ಯಾವುದೇ ಅಪಾಯ ಇಲ್ಲದಿದ್ದರೂ ಆಹಾರ ಸಿಗದೆ ಕಂಗಾಲಾಗಿದ್ದಾರೆ. ಅದೇ ರೀತಿ ಮುಂದೆ ಹೋಗಲು ಇವರಿಗೆ ಬಸ್ ವ್ಯವಸ್ಥೆ ಕೂಡ ಇಲ್ಲ’ ಎಂದು ತಿಳಿಸಿದ್ದಾರೆ.

ಖಾರ್ಕೀವ್ ಗಡಿಯಿಂದ ಸುಮಾರು 1500 ಕಿಲೋಮೀಟರ್ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಬಸ್ ವ್ಯವಸ್ಥೆ ಇಲ್ಲವಾಗಿದೆ. ಈ ಸಂದರ್ಭದಲ್ಲಿ ಫೋನ್ ನೆಟ್‌ವರ್ಕ್ ಕೂಡ ಸಿಗುವುದು ಕಷ್ಟ. ಉಕ್ರೇನ್‌ನ ಲಿವ್ಯೆ ಪ್ರದೇಶಕ್ಕೆ ತಲುಪಿದ ನಂತರ ಅಲ್ಲಿ ರಾಯಭಾರಿ ಕಚೇರಿ ಅಧಿಕಾರಿಗಳು ಇವರನ್ನು ಉಕ್ರೇನ್ ಗಡಿ ದಾಟಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ರೈಲು, ಲಿವ್ಯೆ ಪ್ರದೇಶಕ್ಕೆ ತಲುಪಿ, ಅಲ್ಲಿಂದ ಏರ್‌ಲಿಫ್ಟ್ ಮಾಡಿದರೆ ಎರಡು ದಿನಗಳ ಒಳಗೆ ಮ್ಯಾಕ್ಲಿನ್ ಉಡುಪಿಗೆ ತಲುಪಬಹುದು. ಆದರೆ ಅಲ್ಲಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಕಂಟ್ರೋಲ್ ರೂಮ್, ಡಿಸಿ ಕಚೇರಿಯಿಂದ ಮಾಹಿತಿ ಬರುತ್ತಿದೆ. ಸ್ಥಳಾಂತರ ಮಾಡುವ ಸಂಪೂರ್ಣ ಖರ್ಚುವೆಚ್ಚವನ್ನು ಸರಕಾರ ನೋಡಿಕೊಳ್ಳುವುದಾಗಿ ನಮಗೆ ಭರವಸೆ ನೀಡಿದೆ. ದೆಹಲಿಗೆ ಬಂದು ಅಲ್ಲಿಂದ ಮುಂಬೈ ಮೂಲಕ ಉಡುಪಿಗೆ ಕಳುಹಿಸಬಹುದು ಅಥವಾ ದೆಹಲಿಯಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮ್ಯಾಕ್ಲಿನ್ ನಮಗೆ ಧೈರ್ಯ ತುಂಬಿಸುತ್ತಿದ್ದಾನೆ. ಎಲ್ಲರೂ ಸೇಫ್ ಆಗಿದ್ದಾರೆ ಎಂದು ಮೆಲ್ವಿನ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News