ಯುದ್ಧ ಬೇಡ ಎಂದು ನೇರ ಪ್ರಸಾರ ಕಾರ್ಯಕ್ರಮದಲ್ಲಿಯೇ ಸ್ಟುಡಿಯೋದಿಂದ ಹೊರನಡೆದ ರಶ್ಯಾ ಟಿವಿ ವಾಹಿನಿ ಸಿಬ್ಬಂದಿಗಳು

Update: 2022-03-04 17:14 GMT
linkedin.com/Daniel Abrahams

ಮಾಸ್ಕೋ: ನಮಗೆ ಯುದ್ಧ ಬೇಡ ಎಂದು ಹೇಳಿ ರಷ್ಯಾದ ಟಿವಿ ವಾಹಿನಿ- ಟಿವಿ ರೈನ್ (ಡೋಝ್ಡ್) ಸಿಬ್ಬಂದಿಗಳೆಲ್ಲರೂ ತಮ್ಮ ಕೊನೆಯ ಕಾರ್ಯಕ್ರಮ ನೇರ ಪ್ರಸಾರವಾಗುತ್ತಿರುವಂತೆಯೇ ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿದ್ದಾರೆ. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಈ ಟಿವಿ ವಾಹಿನಿಯ ಕಾರ್ಯಕ್ರಮ ಪ್ರಸಾರದಿಂದ ಅಸಮಾಧಾನಗೊಂಡ ರಶ್ಯಾದ ಸಂಬಂಧಿತ ಪ್ರಾಧಿಕಾರ ವಾಹಿನಿಯ ಕಾರ್ಯಾಚರಣೆಗೆ ನಿರ್ಬಂಧ ಹೇರಿದ ನಂತರ ಈ ಬೆಳವಣಿಗೆ ನಡೆದಿದೆ.

ಈ ವಾಹಿನಿಯ ಸ್ಥಾಪಕರಲ್ಲೊಬ್ಬರಾಗಿರುವ ನತಾಲಿಯಾ ಸಿಂದೆಯೆವಾ "ನಮಗೆ ಯುದ್ಧ ಬೇಡ" ಎನ್ನುತ್ತಿದ್ದಂತೆಯೇ ಎಲ್ಲಾ ಉದ್ಯೋಗಿಗಳು ಜತೆಗೂಡಿ ಸ್ಟುಡಿಯೋದಿಂದ ಹೊರನಡೆದರು. ತನ್ನ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಲಾಗಿದೆ ಎಂದು ವಾಹಿನಿ ನಂತರ ತಿಳಿಸಿದೆ.

ಈ ನೇರ ಪ್ರಸಾರದ ವೀಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಸಿಬ್ಬಂದಿಗಳೆಲ್ಲರೂ ಹೊರನಡೆದ ನಂತರ  ಸ್ವಾನ್ ಲೇಕ್ ಬ್ಯಾಲೆ ವೀಡಿಯೋ ಪ್ರಸಾರಗೊಂಡಿತು. 1991ರಲ್ಲಿ  ಹಿಂದಿನ ಸೋವಿಯತ್ ಯೂನಿಯನ್ ಅಂತ್ಯಗೊಂಡ ನಂತರ ಸರಕಾರಿ ಚಾನೆಲುಗಳು ಇದೇ ವೀಡಿಯೋ ಪ್ರಸಾರ ಮಾಡಿದ್ದವು. ಇದೀಗ ಮತ್ತೆ ಆ ವೀಡಿಯೋ ವೈರಲ್ ಆಗಿದೆ.

ರಶ್ಯಾದ ಕೊನೆಯ ಕೆಲ ನಿಷ್ಪಕ್ಷಪಾತಿ ಮಾಧ್ಯಮ ಸಂಸ್ಥೆಗಳಲ್ಲೊಂದಾಗಿರುವ ಇಖೋ ಮಾಸ್ಕ್‍ವಿ (ಇಖೋ ಆಫ್ ಮಾಸ್ಕೋ) ರೇಡಿಯೋ ಕೇಂದ್ರ ಕೂಡ ತನ್ನ ಆಡಳಿತ ಮಂಡಳಿಯನ್ನು ವಿಸರ್ಜಿಸಿದೆ. ಉಕ್ರೇನ್ ಯುದ್ಧ ಕುರಿತ ತಾನು ಪ್ರಸಾರ ಮಾಡಿದ ಕಾರ್ಯಕ್ರಮಗಳಿಂದಾಗಿ ಈ ರೇಡಿಯೋ ಸ್ಟೇಶನ್ ಕೂಡ ಟೀಕೆಗೊಳಗಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News