ಶೈಕ್ಷಣಿಕ ಜಗತ್ತಿನಲ್ಲಿ ಚರ್ಚೆಗಳನ್ನು ತಡೆಯಲು ಸಾಧ್ಯವಿಲ್ಲ: ವಿಕ್ರಮ್ ಸಂಪತ್ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಇತಿಹಾಸ ತಜ್ಞೆ ಆಡ್ರೆ ಟ್ರಸ್ಚ್ಕೆಅವರು ಇನ್ನೋರ್ವ ಇತಿಹಾಸಕಾರ ವಿಕ್ರಮ್ ಸಂಪತ್ ವಿರುದ್ಧ ಬರೆದಿರುವ ಹಾಗೂ ಹಲವರ ಸಹಿಯಿರುವ ದಾಖಲೆಯೊಂದರಲ್ಲಿ ಹೊರನೋಟಕ್ಕೆ ಯಾವುದೇ ನಿಂದನಾತ್ಮಕ ವಿಷಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಸಂಪತ್ ಅವರ ವಿರುದ್ಧ ಕೃತಿಚೌರ್ಯದ ಆರೋಪ ಹೊರಿಸಿ ಹಲವು ಮಂದಿಯ ಸಹಿಯಿರುವ ದಾಖಲೆಯೊಂದನ್ನು ಆಡ್ರೆ ಅವರು ಪೋಸ್ಟ್ ಮಾಡಿದ್ದಾರೆನ್ನಲಾದ ಕುರಿತು ಸಂಪತ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.
ಶೈಕ್ಷಣಿಕ ಜಗತ್ತಿನಲ್ಲಿ ಚರ್ಚೆಗಳನ್ನು ತಡೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಹಾಗೂ ಸಂಪತ್ ಅವರು ಆಡ್ರೆ ವಿರುದ್ಧ ತಡೆಯಾಜ್ಞೆ ಕೋರಿ ಪ್ರತಿ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆಯೂ ಇಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಾಧೀಶ ಅಮಿತ್ ಬನ್ಸಾಲ್ ಹೇಳಿದ್ದಾರೆ.
"ಈ ದಾಖಲೆಯಲ್ಲಿ ಏನೂ ನಿಂದನಾತ್ಮಕವಾಗಿರುವುದು ಕಾಣಿಸುತ್ತಿಲ್ಲ. ಆಕೆ ಅದನ್ನು ಪೋಸ್ಟ್ ಮಾಡುತ್ತಿದ್ದರೆ ಅದರಲ್ಲಿ ತಪ್ಪೇನಿಲ್ಲ. ನೀವು ಏನಾದರೂ ಕೃತಿಚೌರ್ಯ ನಡೆಸಿದ್ದೀರೆಂದು ಶೈಕ್ಷಣಿಕ ತಜ್ಞರು ಅಂದುಕೊಂಡಿದ್ದರೆ ಹಾಗೂ ಅಭಿಪ್ರಾಯಪಟ್ಟಿದ್ದರೆ ನೀವು ಸಾವಿರಾರು ಮಂದಿಯ ವಿರುದ್ಧ ತಡೆಯಾಜ್ಞೆ ಪಡೆಯಲು ಸಾಧ್ಯವಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.
ಆದರೆ ಪ್ರಕರಣ ಸಂಬಂಧ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ದಾಖಲೆಯಲ್ಲಿ ಸಹಿ ಹಾಕಿದ್ದಾರೆನ್ನಲಾದ ಹಲವು ಜನರು ತಾವು ಅದಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆಂದು ಸಂಪತ್ ತಮ್ಮ ಅರ್ಜಿಯಲ್ಲಿ ಹೇಳಿದ್ದರಲ್ಲದೆ ಸಹಿ ಹಾಕಿದವರಲ್ಲಿ ರಾಮಚಂದ್ರ ಗುಹಾ ಮತ್ತು ಪ್ರತಾಪ್ ಭಾನು ಮೆಹ್ತಾ ಇದ್ದಾರೆ ಎಂದು ಹೇಳಿದ್ದಾರೆ.
ದಾಖಲೆಯಲ್ಲಿ ನಿಂದನಾತ್ಮಕವಾದುದು ಏನೂ ಇಲ್ಲ ಎಂದು ನ್ಯಾಯಾಲಯ ಹೇಳಿದರೂ ಸಂಪತ್ ಅವರ ವಕೀಲರು ಮಾತ್ರ ನಿಂದನಾತ್ಮಕ ವಿಷಯವಿದೆ ಎಂದು ವಾದಿಸಿದ್ದಾರಲ್ಲದೆ ಸಂಪತ್ ವಿರುದ್ಧ ವಿನಾಯಕ್ ದಾಮೋದರ್ ಸಾರ್ವರ್ಕರ್ ಕುರಿತ ಕೃತಿಗೆ ಸಂಬಂಧಿಸಿದಂತೆ ಕೃತಿಚೌರ್ಯ ಆರೋಪ ಹೊರಿಸಿದ ಆಡ್ರೆ ಮತ್ತು ಇತರ ಇತಿಹಾಸಕಾರರಿಂದ ರೂ. 2 ಕೋಟಿ ನಷ್ಟ ಪರಿಹಾರ ಕೋರಿದ್ದಾರೆ.