ಉಕ್ರೇನ್ ನಿಂದ ತವರು ತಲುಪಿದ ದ.ಕ. ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು
ಮಂಗಳೂರು, ಮಾ.7: ಯುದ್ಧಪೀಡಿತ ರಾಷ್ಟ್ರವಾದ ಉಕ್ರೇನ್‌ನಿಂದ ತಪ್ಪಿಸಿಕೊಂಡು ಕಳೆದ ಕೆಲವು ದಿನಗಳಿಂದ ಪೋಲೆಂಡ್, ಸ್ಲೊವೇಕಿಯಾ, ಹಂಗೇರಿ ಮೊದಲಾದ ನೆರೆ ರಾಷ್ಟ್ರಗಳಲ್ಲಿ ಆಶ್ರಯ ಪಡೆದು ಭಾರತಕ್ಕೆ ತಲುಪಿರುವ ದ.ಕ. ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಇಂದು ಮಂಗಳೂರು ತಲುಪಿದ್ದಾರೆ.
ಮಂಗಳೂರು ನಿವಾಸಿಗಳಾದ ಕ್ಲೇಟನ್ ಓಸ್ಮಂಡ್ ಡಿಸೋಜಾ, ಅನೈನಾ ಅನಾ, ಅಹಮ್ಮದ್ ಸಾದ್ ಅರ್ಶದ್ ಹಾಗೂ ಮೂಡಬಿದ್ರೆಯ ಶಾಲ್ವಿನ್ ಪ್ರೀತಿ ಅರಾನ್ಹ ಇಂದು ಬೆಳಗ್ಗೆ 10.50ರ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅವರನ್ನು ಪೋಷಕರು ತಬ್ಬಿಕೊಂಡು ಭಾವುಕರಾದರು.
ಖಾರ್ಕೀವ್‌ನಿಂದ ಪೋಲೆಂಡ್‌ವರೆಗಿನ ಪ್ರಯಾಣವೇ ಭಯಗ್ರಸ್ತ!
‘‘ನಾನು ಖಾರ್ಕೀವ್‌ನ ವೈದ್ಯಕೀಯ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದುತ್ತಿದ್ದು, ಫೆ. 24ರಂದು ಯುದ್ಧ ಆರಂಭವಾಗದಾಗ ನಾವು ಹಾಸ್ಟೆಲ್‌ನಿಂದ ರಾಜಸ್ತಾನ್ ಮೂಲದ ಇತರ ಮೂವರು ನನ್ನ ಸಹಪಾಠಿಗಳ ಜತೆ ಸಾಮಾನು ತರಲು ಹೋಗಿದ್ದ ವೇಳೆ ಬಾಂಬ್ ದಾಳಿ ನಮ್ಮನ್ನು ಭಯಗೊಳಿಸಿತು. ನಮಗೆ ಆಗ ಬಂಕರ್‌ಗಳಲ್ಲಿ ಆಶ್ರಯ ಪಡೆಯಲು ಸೂಚಿಸಲಾಯಿತು. ಅಲ್ಲಿ ಅತೀ ಅಗತ್ಯ ವಸ್ತುಗಳೊಂದಿಗೆ ನಾವು ತಲುಪಿದ್ದು, ಇಕ್ಕಟ್ಟಾದ ಪ್ರದೇಶದಲ್ಲಿ ಆಹಾರ, ನೀರಿಗಾಗಿ ಪರದಾಡುವ ಪರಿಸ್ಥಿತಿ. ಸುಮಾರು ನಾಲ್ಕೆದು ದಿನಗಳ ಬಳಿಕ ನಮಗೆ ಬಂಕರ್‌ನಿಂದ ಪೋಲೆಂಡ್‌ನತ್ತ ಪ್ರಯಾಣಿಸಲು ಅವಕಾಶ ದೊರೆಯಿತು. ಆದರೆ ಅಲ್ಲಿಯೂ ತಾರತಮ್ಯ, ಉಕ್ರೇನ್‌ನ ವಿದ್ಯಾರ್ಥಿಗಳಿಗೆ ಮೊದಲ ಅವಕಾಶ. ನೂಕು ನುಗ್ಗಲು. ಈ ನಡುವೆ ನಮ್ಮ ಸೀನಿಯರ್ ಒಬ್ಬರ ಸಾವು ನಮ್ಮೆಲ್ಲರನ್ನೂ ಹತಾಶರನ್ನಾಗಿಸಿತ್ತು.
ಖಾರ್ಕೀವ್‌ನಿಂದ ಸುಮಾರು 16 ಗಂಟೆಗಳ ಕಾಲ ರೈಲು ಮತ್ತು ಟ್ಯಾಕ್ಸಿ ಪ್ರಯಾಣ ಸಂಪೂರ್ಣ ಭಯದಿಂದಲೇ ಸಾಗಿತ್ತು. ಅಲ್ಲಿಯವರೆಗೂ ನಮ್ಮ ಖರ್ಚು, ನಮ್ಮ ರಿಸ್ಕ್‌ನಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾಯಿತು. ಪೋಲೆಂಡ್‌ನಲ್ಲಿ ವಿಪರೀತ ಚಳಿ. ಅಲ್ಲಿ ಚೆಕ್‌ಪಾಯಿಂಟ್‌ನಿಂದ ಗಡಿ ದಾಟಲು ಮತ್ತೆ 15 ಗಂಟೆಗಳ ಪ್ರಯಾಣ. ಸುಮಾರು ಎರಡು ಗಂಟೆಗಳ ಕಾಲ ಕಾಲ್ನಡಿಗೆಯಲ್ಲೂ ಸಾಗಬೇಕಾಯಿತು. ಅಲ್ಲಿಂದ ರಾಯಭಾರ ಕಚೇರಿಯ ಸಂಪರ್ಕವಾದ ಬಳಿಕ ಎಲ್ಲವನ್ನೂ ನಮ್ಮ ಭಾರತ ಸರಕಾರ ಚೆನ್ನಾಗಿ ನಿರ್ವಹಿಸಿದೆ. ನನ್ನಲ್ಲಿ ಪಾಸ್‌ಪೋರ್ಟ್ ಕೂಡಾ ಇಲ್ಲದ ಕಾರಣ ನನಗೆ ತಾತ್ಕಾಲಿಕ ಪಾಸ್‌ಪೋರ್ಟ್ ವ್ಯವಸ್ಥೆಯನ್ನು ರಾಯಭಾರ ಕಚೇರಿ ಕಲ್ಪಿಸಿದೆ. ಪೋಲ್ಯಾಂಡ್‌ನಿಂದ ಇಲ್ಲಿಗೆ ಬರುವವರೆಗೂ ರಾಯಭಾರ ಕಚೇರಿ, ಅದರಲ್ಲೂ ಮುಖ್ಯವಾಗಿ ನಮ್ಮ ಜಿಲ್ಲಾಡಳಿತ ಅತ್ಯಂತ ಆಸಕ್ತಿ ವಹಿಸಿ ನಮ್ಮ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದೆ’’ ಎಂದು ವಿದ್ಯಾರ್ಥಿನಿ ಅನೈನ ಅನಾ ತಮ್ಮ ಅಭಿಪ್ರಾಯವನ್ನು ‘ವಾರ್ತಾಭಾರತಿ’ ಜತೆ ಹಂಚಿಕೊಂಡರು.
‘‘ಯುದ್ಧ ಆರಂಭವಾಗುವ ಸೂಚನೆ ಇದ್ದಾಗ ನಮಗೆ ನೇರವಾಗಿ ನಾವು ಅಲ್ಲಿಂದ ಹೊರಡುವಂತೆ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಮಾಹಿತಿ ದೊರಕಿರಲಿಲ್ಲ. ಬೇಕಾದರೆ ನೀವು ಹೊರಡಬಹುದು. ಇರುವುದಾದರೆ ಇರಬಹುದು ಎಂಬ ಸಂದೇಶವನ್ನು ನಮಗೆ ನೀಡಲಾಗಿತ್ತು. ನಾವು ಅಲ್ಲಿ ಹೋದಾಗಿನಿಂದ ಎಲ್ಲವೂ ಸಹಜವಾಗಿತ್ತು. ಆದರೆ 24ರ ಬಳಿಕ ಅಕ್ಷರಶ: ಭಯದ ವಾತಾವರಣ ಖಾರ್ಕೀವ್‌ನಲ್ಲಿ ಸೃಷ್ಟಿಯಾಗಿತ್ತು.
ಬಂಕರ್‌ನಲ್ಲಿನ ಆಶ್ರಯದ ದಿನಗಳಂತೂ ಆತಂಕದಿಂದಲೇ ಕಳೆದಿತ್ತು. ಮಕ್ಕಳು, ಗರ್ಭಿಣಿಯರು, ವಿದ್ಯಾರ್ಥಿಗಳು 300ಕ್ಕೂ ಅಕ ಮಂದಿ. ಎಲ್ಲರಲ್ಲೂ ಭಯ, ಆತಂಕ, ಅದನ್ನು ನೆನಪಿಸುವಾಗಲೂ ಮೈ ಕಂಪಿಸುತ್ತದೆ’’ ಎಂದು ಬಂಕರ್‌ನಲ್ಲಿನ ತನ್ನ ಅನುಭವವನ್ನು ಅನೈನ ತೆರೆದಿಟ್ಟರು.‘‘ನನ್ನ ಕಾಲೇಜಿನಲ್ಲಿ ಕಲಿಯುತ್ತಿದ್ದ ಬೆಂಗಳೂರಿನ ಕೆಲ ಜೂನಿಯರ್ ವಿದ್ಯಾರ್ಥಿಗಳಿನ್ನೂ ಖಾರ್ಕೀವ್‌ನಲ್ಲೇ ಇರುವ ಬಗ್ಗೆ ತಿಳಿದು ಬಂದಿದೆ.
ಇಂದು ಇಲ್ಲಿ ತಲುಪಿ ಅಮ್ಮ ಹಾಗೂ ಮನೆಯವರ ಮುಖ ನೋಡುತ್ತಲೇ ಎಲ್ಲಾ ನೋವು, ಸಂಕಟ ಮರೆಯಾಯಿತು. ಮತ್ತೆ ಅಲ್ಲಿಗೆ ಹೋಗುವ ಆಸಕ್ತಿ ಇಲ್ಲ. ಭಾರತ ಸರಕಾರ ನಮಗೆ ಇಲ್ಲೇ ನಮ್ಮ ಶಿಕ್ಷಣ ಮುಂದುವರಿಸುವ ಅವಕಾಶ ನೀಡುತ್ತದೆ ಎಂಬ ಭರವಸೆ ನಮ್ಮದು’’ ಎಂದು ಅನೈನ ಅಭಿಪ್ರಾಯಿಸಿದರು.ಉಕ್ರೇನ್‌ನ ಕೀವ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಅಹಮ್ಮದ್ ಶಾದ್ ಅರ್ಶದ್ ಮಾತನಾಡಿ, ‘‘ನಾನು ಬಾಂಬ್ ದಾಳಿಯಾಗುವುದನ್ನು ಹಾಸ್ಟೆಲ್‌ನಿಂದ ಕಂಡಿದ್ದೇನೆ. ಬೆಳಗ್ಗಿನ ಸಮಯವದು. ಮನದಲ್ಲಿ ಭಯ ಆವರಿಸಿಬಿಟ್ಟಿತ್ತು. ನಮ್ಮನ್ನು ಬಂಕರ್‌ನಲ್ಲಿ ಆಶ್ರಯಕ್ಕಾಗಿ ಕಳುಹಿಸಲಾಯಿತು. ಅಲ್ಲಿ ಕೆಲ ದಿನಗಳ ಕಾಲ ಆಹಾರವಿಲ್ಲದೆ ಕಳೆಯಬೇಕಾಯಿತು. ಕುಡಿಯಲು ನೀರಿಗೂ ಹಾಹಾಕಾರ. ಒಂದೆಡೆ ಭಯ, ಮತ್ತೊಂದೆಡೆ ಧೂಳು ಆವರಿಸಿದ ಬಂಕರ್‌ನಲ್ಲಿ ನೂರಾರು ಮಂದಿ ಆಹಾರ, ನೀರಿಗಾಗಿ ಪರದಾಟ. ಬ್ರೆಡ್, ಚಾಕಲೇಟ್‌ನಲ್ಲಿ ಒಂದು ವಾರ ಕಾಲ ಕಳೆಯಬೇಕಾಯಿತು. ಒಂದು ವಾರದ ಬಳಿಕ ಉಕ್ರೇನ್ ಸರಕಾರ ನಮಗೆ ಪ್ರಯಾಣಕ್ಕೆ ಅವಕಾಶ ನೀಡಿದಾಗ, ರೈಲು ಹತ್ತಲು ನೂಕು ನುಗ್ಗಲು. ಯಾವ ದಿಕ್ಕಿಗೆ, ಯಾವ ಗಡಿಗೆ ಪ್ರಯಾಣಿಸಬೇಕೆಂಬ ಗೊಂದಲ. ನಾನು ಹಂಗೇರಿ ಗಡಿಗೆ ಹೋಗಬೇಕಾಗಿತ್ತು. ಆದರೆ ತಲುಪಿದ್ದು, ಸ್ಲೊವೇಕಿಯಾ. ಅಲ್ಲಿ ನಾನು ಕ್ಲೇಟನ್‌ನನ್ನು ಭೇಟಿಯಾದೆ. ಅಲ್ಲಿಂದ ದಿಲ್ಲಿ ತಲುಪಿ ಅಲ್ಲಿ ಅನೈನ ಹಾಗೂ ಇತರ ವಿದ್ಯಾರ್ಥಿಗಳು ಜತೆಯಾದರು. ಸ್ಲೊವೇಕಿಯಾ ಬಂದ ಬಳಿಕ ರಾಯ ಭಾರ ಕಚೇರಿಯಿಂದ ನಮಗೆ ಉತ್ತಮ ಆಶ್ರಯ, ಆರೈಕೆ ದೊರಕಿತು.
ಇಲ್ಲಿಂದ ಶಾಸಕರಾದ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕರೆ ಮಾಡಿ ಧೈರ್ಯ ತುಂಬಿದ್ದರು. ಜಿಲ್ಲಾಡಳಿತದಿಂದಲೂ ಉತ್ತಮ ಸಹಾಕರ ದೊರಕಿದೆ. ಈಗ ನನ್ನ ತಾಯ್ನೆಲಕ್ಕೆ ಕಾಲಿಟ್ಟು ಪೋಷಕರನ್ನು ಕಂಡು ನನಗೆ ನನ್ನ ಸಂತಸವನ್ನು ಹೇಳಲು ಸಾಧ್ಯವಾಗುತ್ತಿಲ್ಲ’’ ಎಂದು ಭಾವುಕರಾದರು.
ಕ್ಲೇಟನ್ ಓಸ್ಮಂಡ್ ಡಿಸೋಜಾ ಹಾಗೂ ಶಾಲ್ವಿನ್ ಪ್ರೀತಿ ಅರಾನ್ಹ ಕೂಡಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ತವರಿಗೆ ವಾಪಾಸಾಗಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
ಕ್ಲೇಟನ್ ತಾಯಿ ಒಲಿನ್ ಮರಿಯಾ ಅವರು ಮಾತನಾಡಿ, ‘‘ಮಕ್ಕಳನ್ನು ನೋಡುತ್ತಲೇ ನಮ್ಮೆಲ್ಲಾ ಭಯ, ಆತಂಕ ಮರೆಯಾಗಿದೆ. ಪೋಲೆಂಡ್, ಸ್ಲೊವೇಕಿಯಾಕ್ಕೆ ತಲುಪಿದ ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಂಡು ಅಲ್ಲಿಂದ ಇದೀಗ ಮಂಗಳೂರಿಗೆ ಕರೆ ತರುವಲ್ಲಿ ಕೇಂದ್ರ ಸರಕಾರ ಹಾಗೂ ಮುಖ್ಯವಾಗಿ ದ.ಕ. ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿದೆ. ಜಿಲ್ಲಾಕಾರಿ ಡಾ. ರಾಜೇಂದ್ರ ಕೆ.ವಿ.ಯವರಂತೂ ಕುಟುಂಬ ಸದಸ್ಯನ ರೀತಿಯಲ್ಲಿ ನಮ್ಮ ಹಾಗೂ ಮಕ್ಕಳ ಜತೆ ನಿರಂತರ ಸಂಪರ್ಕದಲ್ಲಿದ್ದು ನಮಗೆ ಧೈರ್ಯ ತುಂಬಿದ್ದಾರೆ’’ ಎಂದರು.
ಅನೈನ ತಾಯಿ ಸಂಧ್ಯಾ ಹಾಗೂ ಶಾಲ್ವಿನ್ ಪೋಷಕರು ಕೂಡಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು ಮಕ್ಕಳನ್ನು ಆದರಿಸಿ ಬರಮಾಡಿಕೊಂಡರು.
ನಮ್ಮ ಪಾಲಿನ ಹೀರೋ ದ.ಕ. ಜಿಲ್ಲಾಧಿಕಾರಿ
ಅಹಮ್ಮದ್ ಸಾದ್ ತಾಯಿ ಶಹನಾಜ್ ಬಾನು ಪ್ರತಿಕ್ರಿಯಿಸಿ, ‘‘ಖಾರ್ಕೀವ್‌ನಿಂದ ಸ್ಲೊವೇಕಿಯಾ ಗಡಿ ತಲುಪುವರೆಗೂ ನಾನು ನನ್ನ ಮಗನ ಬಗ್ಗೆ ಆತಂಕದಿಂದ ಸರಿಯಾಗಿ ನಿದ್ದೆ ಇಲ್ಲದೇ ಕಳೆದಿದ್ದೇನೆ. ಹಾಗಿದ್ದರೂ ಆತನ ಜತೆ ನಿರಂತರ ಸಂಪರ್ಕದಲ್ಲಿದ್ದು, ಆತನಿಗೆ ದೈರ್ಯ ತುಂಬಿದ್ದೆ. ನಡುವೆ ನನ್ನ ಮಗನ ಬಗ್ಗೆ ಸರಿಯಾದ ಮಾಹಿತಿ ಸಿಗದ ಸಂದರ್ಭವೂ ಇತ್ತು. ಕೊನೆಗೆ ಜಿಲ್ಲಾಕಾರಿಯನ್ನು ಸಂಪರ್ಕಿಸಿದ ಕೆಲ ನಿಮಿಷಗಳಲ್ಲೇ ಅವರು ನನ್ನ ಮಗನ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಬಳಿಕ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಾಂತ್ವಾನ ನೀಡಿದ್ದಾರೆ. ನಿಜಕ್ಕೂ ನಮ್ಮ ಪಾಲಿನ ಹೀರೋ ನಮ್ಮ ಜಿಲ್ಲಾಕಾರಿ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.