×
Ad

ಕಲ್ಯಾಣಪುರದ ಮನೆಗೆ ಮರಳಿ ಬಂದ ಅನಿಫ್ರೆಡ್

Update: 2022-03-07 19:14 IST

ಉಡುಪಿ, ಮಾ.7: ಯುದ್ಧಪೀಡಿತ ಉಕ್ರೇನಿನಲ್ಲಿದ್ದ ಕಲ್ಯಾಣಪುರದ ವಿಲಿಯಂ ಡಿಸೋಜ ಎಂಬವರ ಪುತ್ರಿ ಅನಿಫ್ರೆಡ್ ರಿಡ್ಲೆ ಡಿಸೋಜ (20) ಅವರು ಇಂದು ಸಂಜೆ ಬೆಂಗಳೂರು- ಮಂಗಳೂರಿನ ಮೂಲಕ ತನ್ನ ಮನೆಗೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.

ಈ ಮೂಲಕ ಯುದ್ಧಗ್ರಸ್ಥ ಉಕ್ರೇನಿನಲ್ಲಿ ವೈದ್ಯಕೀಯ ಕಲಿಯುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಸಿಕ್ಕಿದ ಉಡುಪಿ ಜಿಲ್ಲೆಯ ಒಟ್ಟು ಏಳು ಮಂದಿಯಲ್ಲಿ ಆರನೇಯವರಾಗಿ ಅನಿಫ್ರೆಡ್ ಮನೆಗೆ ಮರಳಿದಂತಾಗಿದೆ. ಇವರು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ರವಿವಾರ ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಇಂದು ಬೆಳಗ್ಗೆ ರಾಜ್ಯ ಸರಕಾರ ವ್ಯವಸ್ಥೆಗೊಳಿಸಿದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಅನಿಫ್ರೆಡ್, ಮತ್ತೊಂದು ವಿಮಾನದಲ್ಲಿ ಇಂದು ಅಪರಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ತಂದೆ ಮನೆಗೆ ಕರೆದುಕೊಂಡು ಬಂದರು.

ಉಕ್ರೇನಿನಲ್ಲಿರುವ ಜಿಲ್ಲೆಯ ಏಳನೇ ಹಾಗೂ ಕೊನೆಯ ವಿದ್ಯಾರ್ಥಿ ಕೆಮ್ಮಣ್ಣಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಇದೀಗ ಬಸ್‌ನಲ್ಲಿ ರೊಮೇನಿಯಾ ಗಡಿ ತಲುಪಿದ್ದಾರೆಂದು ಉಡುಪಿ ಜಿಲ್ಲಾಡಳಿತಕ್ಕೆ ಬಂದ ಮಾಹಿತಿ ತಿಳಿಸಿದೆ. ಅಲ್ಲಿಂದ ಅವರು ಒಂದೆರಡು ದಿನಗಳಲ್ಲಿ ಮನೆಗೆ ಹಿಂದಿರುಗುವ ನಿರೀಕ್ಷೆ ಇದೆ.

ಇದರೊಂದಿಗೆ ಯುದ್ಧಗ್ರಸ್ಥ ಉಕ್ರೇನ್‌ನಲ್ಲಿದ್ದ ಉಡುಪಿಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಆರು ಮಂದಿ ಸುರಕ್ಷಿತವಾಗಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡಂತಾಗಿದೆ. ಉದ್ಯಾವರ ಸಾಲ್ಮರದ ಮೃಣಾಲ್ ಫೆ.28ರಂದು, ಉಡುಪಿಯ ನಂದಿನಿ ಅರುಣ್ ಮಾ.1ರಂದು, ಪರ್ಕಳದ ನಿಯಮ್ ರಾಘವೇಂದ್ರ, ನಾವುಂದದ ಅಂಕಿತಾ ಜಗದೀಶ್ ಪೂಜಾರಿ ಅವರು ಮಾ.3ರಂದು ಹಾಗೂ ಬ್ರಹ್ಮಾವರದ ಬ್ರಹ್ಮಾವರದ ರೋಹನ್ ಧನಂಜಯ ಶನಿವಾರ ತಮ್ಮ ತಮ್ಮ ಮನೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News