ಭಾಷಣ ಮಾಡದೆ ಸದನದಿಂದ ತೆರಳದಂತೆ ರಾಜ್ಯಪಾಲರಿಗೆ ತಡೆಯೊಡ್ಡಿದ ಟಿಎಂಸಿ ಶಾಸಕರು!

Update: 2022-03-08 02:15 GMT

ಕೊಲ್ಕತ್ತಾ: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಹಿಂಸಾಚಾರ ನಡೆದಿದೆ ಎಂದು ಆಪಾದಿಸಿ ಬಿಜೆಪಿ ಸದಸ್ಯರ ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಭಾರಿ ಕೋಲಾಹಲ ನಡೆಯಿತು. ಸಭಾಧ್ಯಕ್ಷರ ಪೀಠದ ಬಳಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋರಿದರು. ಆದರೆ ಗದ್ದಲದಿಂದಾಗಿ ರಾಜ್ಯಪಾಲರು ಭಾಷಣ ಓದಲು ಸಾಧ್ಯವಾಗಲಿಲ್ಲ. ರಾಜ್ಯಪಾಲರು ಭಾಷಣ ಮಾಡದೆ ಸದನದಿಂದ ಹೊರನಡೆಯಲು ಮುಂದಾದರು. ಈ ಹಂತದಲ್ಲಿ ಭಾಷಣ ಮಾಡದೆ ಸನದಿಂದ ತೆರಳದಂತೆ ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದರು.

ಅಂತಿಮವಾಗಿ ರಾಜ್ಯಪಾಲರು ತಮ್ಮ ಭಾಷಣದ ಮೊದಲ ಮತ್ತು ಕೊನೆಯ ಸಾಲುಗಳನ್ನು ಓದಿ ಭಾಷಣದ ಪ್ರತಿಯನ್ನು ಸದನದಲ್ಲಿ ಮಂಡಿಸಿದರು. ಇಂದಿನ ಕೋಲಾಹಲವನ್ನು "ಅಭೂತಪೂರ್ವ" ಮತ್ತು ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಯೋಜಿತ ಹುನ್ನಾರ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ.

"ಸೃಷ್ಟಿಯಾದ ಪರಿಸ್ಥಿತಿ ಅಭೂತಪೂರ್ವ. ನಾವು ಒಂದು ಗಂಟೆಗೂ ಅಧಿಕ ಕಾಲ ಕಾದೆವು; ನಮ್ಮ ಶಾಸಕರು ಒಂದು ಶಬ್ದವನ್ನೂ ಮಾತನಾಡಲಿಲ್ಲ. ಸ್ಪೀಕರ್ ಹಲವು ಬಾರಿ ಮನವಿ ಮಾಡಿದರು. ನಾನು ಕೂಡಾ ಕೈಮುಗಿದು ಬೇಡಿಕೊಂಡೆ. ಎಲ್ಲವನ್ನೂ ಸೋತ ಬಳಿಕ ಬಿಜೆಪಿ ಈ ನಾಟಕ ಮಾಡಿದೆ. ಬಿಜೆಪಿ ಇಂದು ಮಾಡಿದ್ದು ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅವಮಾನ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಜ್ಯಪಾಲರು ವಾಪಾಸು ತೆರಳಲು ಶಾಸಕರು ಅವಕಾಶ ನೀಡದ ಬಗ್ಗೆ ಪ್ರಶ್ನಿಸಿದಾಗ, "ರಾಜ್ಯಪಾಲರು ಭಾಷಣ ಮಾಡದೇ ವಾಪಸ್ಸಾದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಶಾಸಕರು ತಡೆದರು. ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಭಾಷಣ ಮಾಡುವಂತೆ ಅವರಿಗೆ ಮನವಿ ಮಾಡಿಕೊಂಡೆವು" ಎಂದು ಹೇಳಿದರು. ರಾಜ್ಯಪಾಲರ ಮೇಲೆ ಟಿಎಂಸಿ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸುವೇಂಧು ಅಧಿಕಾರಿ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News