×
Ad

ರಥಬೀದಿ ಕಾಲೇಜು ಹಿಜಾಬ್ ವಿವಾದ ಪ್ರಕರಣ; ಪಾರದರ್ಶಕ ತನಿಖಾ ವರದಿ ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಕೆ: ಕಮಿಷನರ್ ಶಶಿಕುಮಾರ್

Update: 2022-03-08 15:13 IST
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ಮಂಗಳೂರು, ಮಾ.8: ನಗರದ ರಥಬೀದಿಯ ದಯಾನಂದ ಪೈ- ಸತೀಶ್ ಪೈ ಸರಕಾರಿ ಪದವಿ ಕಾಲೇಜಿನಲ್ಲಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಸೆನ್ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಪ್ರಕರಣದ ಪಾರದರ್ಶಕ ಹಾಗೂ ತ್ವರಿತ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಜೀವ ಬೆದರಿಕೆ ಕುರಿತಂತೆ ವಿದ್ಯಾರ್ಥಿನಿಯಿಂದ ನನಗಾಗಲಿ ಅಥವಾ ಠಾಣೆಗಾಗಲಿ ಯಾವುದೇ ದೂರು, ಮಾಹಿತಿ ಬಂದಿಲ್ಲ. ಹಾಗಿದ್ದರೂ ಎಲ್ಲಾ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಜ್ಯದ ವಿವಿಧ ಕಡೆಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಆರಂಭಗೊಂಡಾಗಿನಿಂದಲೂ ಮಂಗಳೂರು ನಗರದಲ್ಲಿ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು, ಧಾರ್ಮಿಕ ಮುಖಂಡರು, ಶಿಕ್ಷಣ ಸಂಸ್ಥೆಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಿವೆ. ಮಾ. 3ರಂದು ದಯಾನಂದ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯೊಬ್ಬರು ತಮಗೆ ಅನಾನುಕೂಲ, ಕಿರಿಕಿರಿ ಆಗಿರುವ ಕುರಿತಂತೆ ಮಾ. 4ರಂದು ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೆಕ್ಷನ್ 324 ಹಾೂ 504ರಡಿ ಪ್ರಕರಣ ದಾಖಲಿಸಲಾಗಿದೆ. ಘಟನಾವಳಿಗೆ ಸಂಬಂಧಿಸಿ ಕಾಲೇಜಿನ ಸಿಸಿಟಿವಿ ಫೂಜೇಟ್, ಶಿಕ್ಷಕ ವೃಂದದ ಹೇಳಿಕೆ, ಇತರ ಸಾಕ್ಷಿಗಳಿಗೆ ತನಿಖೆಗೆ ಸಹಕರಿಸಲು ನೋಟೀಸು ನೀಡಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಇದೇ ವೇಳೆ ಘಟನೆಯಲ್ಲಿ ವಿದ್ಯಾರ್ಥಿನಿ ಹೆಸರಿಸಿರುವ ವಿದ್ಯಾರ್ಥಿ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಈ ಇದೇ ವೇಳೆ ಆ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಇತರ ವಿದ್ಯಾರ್ಥಿಗಳು ಸೇರಿ ತೊಂದರೆ ನೀಡಿ, ಕಾನೂನಿನಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ್ದಾಗಿ ದೂರೊಂದು ದಾಖಲಾಗಿದೆ. ಈ ಮೂರು ಪ್ರಕರಣಗಳಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವಿವರಿಸಿದರು.

ಮಾ. 5ರಂದು ಕಾಲೇಜಿನ ಪ್ರಾಂಶುಪಾಲರು ದೂರೊಂದನ್ನು ನೀಡಿದ್ದಾರೆ. ಆಡಳಿತ ಮಂಡಳಿಯ ಸೂಚಿಸಲಾದ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಪ್ರಕರಣದ ಫಿರ್ಯಾದುರಾರ ವಿದ್ಯಾರ್ಥಿನಿ ಬೇರೆ ವಿದ್ಯಾರ್ಥಿಗೆ ನೀಡಿದ ಅನುಮತಿ ಪತ್ರವನ್ನು ದುರುಪಯೋಗ ಪಡಿಸಿಕೊಂಡು ನಾನು ಅನುಮತಿ ನೀಡಿರುವುದಾಗಿ ಗೊಂದಲ ಸೃಷ್ಟಿಸಿ, ಮಾಧ್ಯಮಗಳನ್ನು ಕರೆಸಿಕೊಂಡು ಆಕ್ಷೇಪಾರ್ಹ ಮಾತುಗಳನ್ನು ಆಡುವ ಮೂಲಕ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ. ಈ ದೂರಿನ ಬಗ್ಗೆಯೂ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದ್ದು, ಅದರ ಪ್ರಕಾರ ಪ್ರಾಂಶುಪಾಲರು ನೀಡಿದ ದೂರನ್ನು ಯಾವುದೇ ಕಲಂನಡಿ ದಾಖಲಿಸಲು ಆಗುವುದಿಲ್ಲ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಬಹುದು ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ. ಇದು ಕಾಲೇಜು ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರವಾಗಿರುವುದರಿಂದ ಸಂಬಂಧಪಟ್ಟವರಿಂದ ಇದನ್ನು ವಿಚಾರಣೆಗೊಳಪಡಿಸುವಂತೆ ಸೂಚಿಸಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದರಂತೆ ತನಿಖೆಯ ಅಂತಿಮ ವರದಿಯನ್ನು ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ಕಮಿಷನರ್ ಸೂಕ್ತ ಕಲಂಗಳಡಿ ಪ್ರಕರಣ ದಾಖಲಿಸಿಲ್ಲ ಈ ಬಗ್ಗೆ ಉತ್ತರಿಸಬೇಕು ಎಂಬ ವಿದ್ಯಾರ್ಥಿನಿಯ ನಿನ್ನೆ ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಘಟನೆಯ ಬಗ್ಗೆ ಗಮನಕ್ಕೆ ಬಂದಾಕ್ಷಣ ನಾನೇ ಖುದ್ದು ಕಾಲೇಜಿಗೆ ಭೇಟಿ ನೀಡಿದ್ದೇನೆ. ಫಿರ್ಯಾದುದಾರ ವಿದ್ಯಾರ್ಥಿನಿ ಹಾಗೂ ಕಾಲೇಜಿನ ಪ್ರಾಂಶುಪಾಲರ ಜತೆ ಮಾತುಕತೆ ನಡೆಸಿದ್ದೇನೆ. ಕಾನೂನುಬದ್ಧವಾಗಿ ಏನು ಮಾಡಬೇಕೋ ಅದೆಲ್ಲಾ ಕ್ರಮವನ್ನು ವಹಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ವಿಳಾಸ ಇಲ್ಲದ ಪೋಸ್ಟ್‌ಗಳಿಗೆ ನಾನು ಉತ್ತರಿಸಲು ಆಗದು

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸ್ ಕಮಿಷನರ್ ಒಂದು ವರ್ಗಕ್ಕೆ ಸೀಮಿತವಾಗಿ ವರ್ತಿಸುತ್ತಿದ್ದಾರೆಂಬ ಪೋಸ್ಟ್‌ಗಳನ್ನು ಹಾಕಲಾಗುತ್ತಿರುವ ಬಗ್ಗೆ ಕ್ರಮ ವಹಿಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ, ಫಿರ್ಯಾದುದಾರನ ಹೆಸರು, ವಯಸ್ಸು, ತಂದೆ ಹೆಸರು, ವಿಳಾಸದೊಂದಿಗೆ ದೂರು ಬಂದಾಗ ಪೊಲೀಸ್ ಇಲಾಖೆ ಕ್ರಮ ವಹಿಸುತ್ತದೆ. ಅದು ಬಿಟ್ಟು ವಿಳಾಸ ಇಲ್ಲದೆ ಇಂತಹ ವಿವೇಚನಾರಹಿತವಾಗಿ ಹೇಡಿಗಳಂತೆ ಪೋಸ್ಟ್ ಹಾಕುವರಿಗೆ ನಾವು ಉತ್ತರ ನೀಡಲು ಆಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News